ಬಿಲಾಸಪುರ್: ಇನ್‌ಸ್ಟಾಗ್ರಾಮ್‌ಗೆ ರೀಲ್ಸ್ ಮಾಡಲು ಹೋಗಿ 20 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಛತ್ತೀಸಗಢದ ಬಿಲಾಸಪುರ ಪಟ್ಟಣದಲ್ಲಿ ನಡೆದಿದೆ.
ಬಿಲಾಸಪುರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಮೊದಲನೇ ವರ್ಷ ಓದುತ್ತಿದ್ದ ಅಶುತೋಷ್ ಸಾವೊ (20) ಮೃತ ವಿದ್ಯಾರ್ಥಿ.
ಈತ ರೀಲ್ಸ್ ಮಾಡಲು ಐವರು ಸ್ನೇಹಿತರೊಂದಿಗೆ ಶುಕ್ರವಾರ ಮಧ್ಯಾಹ್ನ ಕಾಲೇಜಿನ ಟೆರೇಸ್‌ಗೆ ತೆರಳಿದ್ದಾನೆ. ಟೆರೇಸ್ ಗೋಡೆ ಮೇಲೆ ನಿಂತು, ಕಿಟಕಿಯ ಸಜ್ಜೆ ಮೇಲೆ ಹಾರಿದ್ದಾನೆ. ಈ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ.
20 ಅಡಿ ಎತ್ತರದಿಂದ ಬಿದ್ದ ಕಾರಣ ತಲೆಗೆ ತೀವ್ರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.