Advertisement

ವಿದ್ಯಾರ್ಥಿ ರೂಪಿಸಿದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿ

09:09 PM Jan 04, 2021 | Team Udayavani |

ಕುಂದಾಪುರ: ತ್ರಾಸಿ ಗ್ರಾಮದ ಮೊವಾಡಿ ಸರಕಾರಿ ಹಿ.ಪ್ರಾ. ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಥಮ ಕೆ. ಪೂಜಾರಿ ತೆಂಗಿನ ಕಾಯಿ ಗೆರಟೆಯಿಂದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿಯನ್ನು ತಯಾರಿಸಿದ್ದು, ವಿದ್ಯಾರ್ಥಿಯ ಈ ವಿನೂತನ ಆವಿಷ್ಕಾರವು ಈಗ ಕೇಂದ್ರದಿಂದ ನಡೆಸುವ 2020-21ರ ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆಗೆ ಆಯ್ಕೆಯಾಗಿದೆ.

Advertisement

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಇದನ್ನು ತಪ್ಪಿಸಲು ಪರ್ಯಾಯವಾಗಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಮಾದರಿಗಳನ್ನು ತಯಾರಿಸಲು ಒಂದು ವಿಶಿಷ್ಟ ಸ್ಪರ್ಧೆಯ ರೀತಿಯನ್ನು ಹಮ್ಮಿಕೊಳ್ಳಲಾಗಿತ್ತು. ಹೊಸಾಡು ಗ್ರಾಮದ ಕೇರಿಕೊಡ್ಲು ನಿವಾಸಿ ಕುಶಲ ಕೆ. ಪೂಜಾರಿ ಮತ್ತು ಶಾರದಾ ಕೆ. ಪೂಜಾರಿ ದಂಪತಿಯ ಪುತ್ರ ಪ್ರಥಮ ಕೆ. ಪೂಜಾರಿ ಅವನು ಮಾಡಿದ ಪರಿಸರ ಸ್ನೇಹಿ ಈ ತೆಂಗಿನ ಕಾಯಿ ಗೆರಟೆಯ ಸ್ಯಾನಿಟೈಸರ್‌ ಬಾಟಲಿ ಈಗ ಎಲ್ಲರ ಗಮನಸೆಳೆಯುತ್ತಿದೆ.

ತಯಾರಿ ಹೇಗೆ?
ಒಂದೂವರೆ ತೆಂಗಿಕಾಯಿ ಗೆರಟೆ ಅಂದರೆ ಕಾಯಿ ತುರಿದ ಮೂರು ಖಾಲಿ ಗೆರಟೆಯನ್ನು ತೆಗೆದುಕೊಂಡು, ಅದಕ್ಕೆ ವುಡ್‌ ಪಾಲಿಶ್‌ ಮಾಡಿ, ಫೆವಿಕ್ವಿಕ್‌ ಗಮ್‌ ಮತ್ತು ಎಂಸಿಲ್‌ ಬಳಸಿ ಖಾಲಿ ಶ್ಯಾಂಪು ಬಾಟಲಿಯ ಮುಚ್ಚಳವನ್ನು ಬಳಸಿಕೊಂಡು ಮಾದರಿ ತಯಾರಿಸಲಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಮರು ಬಳಕೆಗೂ ಕೂಡ ಅವಕಾಶವಿದೆ.

ಪರಿಸರ ಸ್ನೇಹಿ
ಕೇಂದ್ರದಿಂದ ನಡೆಸುವ ಇನ್‌ಸ್ಪಾಯರ್‌ ಅವಾರ್ಡ್‌ 2020-21ಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿ ಪ್ರಥಮ ಕೆ. ಪೂಜಾರಿ ಆಯ್ಕೆಯಾಗಿದ್ದು, ಈತನು ಮಾಡಿದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿ ವಿಶೇಷವಾಗಿದೆ. ಇವನು ಈ ರೀತಿಯ ಹಲವು ಪ್ರಯೋಗಗಳನ್ನು ಮಾಡಿದ್ದಾನೆ.
– ವತ್ಸಲಾ, ಮೊವಾಡಿ ಸರಕಾರಿ ಶಾಲೆಯ ಶಿಕ್ಷಕಿ

ಶಿಕ್ಷಕರು, ಹೆತ್ತವರ ಸಹಕಾರ
ಶಾಲೆಯ ಟೀಚರ್‌ ಮಾದರಿ ತಯಾರಿಸಲು ತಿಳಿಸಿದಾಗ ಏನಾದರೂ ಮಾಡಬೇಕೆಂದು ಆಲೋಚಿಸಿದಾಗ ತೆಂಗಿನಕಾಯಿಯ ಗೆರಟೆಯಿಂದ ಈ ಸ್ಯಾನಿಟೈಸ್‌ ಬಾಟಲಿ ಮಾಡುವ ಯೋಚನೆ ಬಂತು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದನ್ನು ತಪ್ಪಿಸಲು ತೆಂಗಿನ ಚಿಪ್ಪಿನಿಂದ ಸ್ಯಾನಿಟೈಸರ್‌ ಬಾಟಲಿ ತಯಾರಿಕೆ ಮಾಡಿದ್ದೇನೆ. ಶಿಕ್ಷಕರು ಮತ್ತು ಹೆತ್ತವರ ಸಹಕಾರದಿಂದ ಇದು ಸಾಧ್ಯವಾಗಿದೆ.
– ಪ್ರಥಮ ಕೆ. ಪೂಜಾರಿ, ಮೊವಾಡಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next