Advertisement

ಭವಿಷ್ಯದ ಯಶಕ್ಕೆ ಇಂದೇ ಯೋಜನೆ ರೂಪಿಸಿ: ರಾಮಚಂದ್ರನ್‌

04:53 PM Jun 20, 2018 | Team Udayavani |

ಬೈಲಹೊಂಗಲ: ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕೆಂದರೆ ಅದಕ್ಕೆ ಇವತ್ತಿನಿಂದಲೇ ಯೋಜನೆ ರೂಪಿಸುವುದು ಅವಶ್ಯಕ ಎಂದು ಬೆಳಗಾವಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌. ರಾಮಚಂದ್ರನ್‌ ಹೇಳಿದರು. ಪಟ್ಟಣದ ಶಾಖಾ ಮೂರುಸಾವಿರಮಠದ ಸಭಾಭವನದಲ್ಲಿ ಅವರು ಮಂಗಳವಾರ ಜಿಲ್ಲಾ ಪಂಚಾಯತಿ, ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಇವರ ಆಶ್ರಯದಲ್ಲಿ 2017-18ನೇ ಸಾಲಿನ ಎನ್‌ ಎಂಎಂಎಸ್‌ ಪರೀಕ್ಷೆಯಲ್ಲಿ ಅರ್ಹರಾದ 250 ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆ ಮಾಡಿ ಯಾವುದೇ ವೃತ್ತಿ ಕೈಗೊಳ್ಳಬಹುದು. ಆದರೆ ಅದಕ್ಕೆ ಪೂರ್ವ ನಿಯೋಜನೆ ಇರಬೇಕು. ಯೋಜನೆ ಮಾಡಿದ ಕೆಲಸಗಳ ಗುರಿ ಬೆನ್ನತ್ತಲು ಇವತ್ತಿನಿಂದಲೆ ಕಠಿಣ ಪರಿಶ್ರಮದಿಂದ ತಯಾರಿ ಮಾಡಿಕೊಂಡಾಗ ಮಾತ್ರ ಸುಲಭವಾಗಿ ಯಶ ಸಿಗುತ್ತದೆ ಎಂದರು.

Advertisement

ವಿದ್ಯಾರ್ಥಿಗಳು ಕೇವಲ ಪಾಠದ ಕಡೆಗೆ ಗಮನ ಹರಿಸದೇ ಸದೃಢ ದೇಹ ಬೆಳೆಸಬೇಕು. ಪ್ರೋಟೀನ್‌, ವಿಟಾಮಿನ್‌ ಇರುವ ಹಸಿರು ತರಕಾರಿ ಪದಾರ್ಥ ಸೇವಿಸುವುದರ ಜೊತೆಗೆ ಪ್ರತಿದಿನ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ಸರಿಯಾದ ಸಮಯಕ್ಕೆ ನಿದ್ರೆ ಮಾಡಿ ಅಧ್ಯಯನದ ಕಡೆಗೆ ಗಮನ ಕೊಡಬೇಕು. ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ರೋಗ ರುಜಿನಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದರು. ಒಬ್ಬ ವ್ಯಕ್ತಿಯ ಗಮನ ಒಂದೇ ವಿಷಯದ ಮೇಲೆ ಕೇಂದ್ರೀಕರಿಸಲು 45 ನಿಮಿಷಗಳ ಅವಧಿ ಸಾಕು. ಆದ್ದರಿಂದಲೇ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನಾ ಸಮಯವನ್ನು 45 ನಿಮಿಷಗಳಿಗೆ ಮೀಸಲಿರಿಸಲಾಗಿದೆ. ಈ ಸಮಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಚನ್ನಾಗಿ ಅಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮಗಿಂತ ಹಿರಿಯರಿಗೆ ಗೌರವ ಕೊಡುವುದು ಕೂಡಾ ಉತ್ತಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮುಂದಿನ ಜೀವನ ರೂಪಿಸಲು ಮತ್ತೂಬ್ಬರಿಗೆ ಅವಕಾಶ ನೀಡದೇ ಪರಿಶ್ರಮದಿಂದ ಮುಂದೆ ಬರಬೇಕು.

ಚಿಕ್ಕೋಡಿ, ಬೆಳಗಾವಿ ಶೈಕ್ಷಣಿಕ ವಲಯದಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಸುಮಾರು 2 ಸಾವಿರಕ್ಕೂ ಅಧಿ ಕ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯನ್ನು ಎದುರಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕೆಂದು ವಲಯದ ಕ್ಷೇತ್ರ ಶಿಕ್ಷಣಾಧಿ ಕಾರಿಗೆ ಸೂಚಿಸಿದರು. ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ.ಪುಂಡಲೀಕ, ತಾ.ಪಂ ಇಒ ಎಸ್‌.ಎಸ್‌.ಕಾದ್ರೊಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಬರಗೇರ, ವಿಜಯಾ ಬೆನಕಟ್ಟಿ, ಮಂಗಳಾ ತಾಪಸಕರ, ಎಂ.ಆರ್‌.ಅಲಾಸೆ, ಹಣಮಂತಗೌಡ ಮಿರ್ಜಿ, ಕೆ.ಡಿ.ಬಡಿಗೇರ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್‌.ಪಿ. ದಾಸಪ್ಪನವರ, ಶಿಕ್ಷಣ ಸಂಯೋಜಕ ಬಿ.ವೈ.ಪಿಸೆ, ಕೆ.ಎಸ್‌. ನಂದೇರ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next