ಬೆಳಗಾವಿ: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಧ್ವಜ ಹಿಡಿದುಕೊಂಡು ಕುಣಿಯುತ್ತಿದ್ದಾಗ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಕನ್ನಡ ವಿದ್ಯಾರ್ಥಿ ದೂರು ನೀಡಲು ಹೋದಾಗ ಪೊಲೀಸರೂ ಈತನ ಮೇಲೆ ದರ್ಪ ಮೆರೆದಿದ್ದಾರೆ ಎಂಬ ಆರೋಪಿಸಲಾಗಿದೆ.
ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜಿನಲ್ಲಿ ಕನ್ನಡ ಧ್ವಜ ಹಿಡಿದುಕೊಂಡು ಡ್ಯಾನ್ಸ್ ಮಾಡುವಾಗ ಈತನ ಸಹಪಾಠಿಗಳ ಮಧ್ಯೆ ಗಲಾಟೆಯಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ದೂರು ನೀಡಲು ಠಾಣೆಗೆ ಹೋದಾಗ ಈತನನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ಮರೆದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಎಲ್ಲರೂ ಕನ್ನಡ ವಿದ್ಯಾರ್ಥಿಗಳೇ ಇದ್ದು, ಅಪ್ರಾಪ್ತ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕನ್ನಡ ಹೋರಾಟಗಾರ ಸಂಪತ ಕುಮಾರ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಪ್ರಶ್ನೆ ಮಾಡಬೇಕಿದೆ. ಕನ್ನಡಿಗರು ಕನ್ನಡದ ಧ್ವಜವನ್ನು ಹಾರಾಡಿಸಿದರೆ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸುವುದು ಎಷ್ಟು ಸರಿ. ಇಲ್ಲಿರುವ ಕೆಲ ಶಾಸಕರು ಕೇವಲ ಮತ ಪಡೆಯಲು ಮಾತ್ರ ಇದ್ದಾರೆ. ಕನ್ನಡಿಗರ ರಕ್ಷಣೆ ಕೊಡುವವರು ಯಾರು ಎಂದು ಪ್ರಶ್ನಿಸಿದರು.
Related Articles
ಪೊಲೀಸ್ ಠಾಣೆಯ ಒಳಗಡೆ ಹೋಗಿ ಹೊರ ಬಂದಾಗ ಕನ್ನಡ ವಿದ್ಯಾರ್ಥಿಗಳಿಗೆ ಪೊಲೀಸರು ಥಳಿಸಿದ್ದಲ್ಲದೆ, ಯಾವುದೇ ರೀತಿ ಹೊರಗಡೆ ಮಾತನಾಡದಂತೆ ತಾಕೀತು ಮಾಡಿ ಕಳುಹಿಸಿದ್ದರು. ಕನ್ನಡ ವಿದ್ಯಾರ್ಥಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ, ನಿನ್ನೆ ನಡೆದ ಟಿಳಕವಾಡಿ ಪೊಲೀಸ್ ಠಾಣೆ ಹದ್ದಿಯ ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೊಡೆದುಕೊಂಡಿದ್ದು, ಅವರನ್ನು ಠಾಣೆಗೆ ಕರೆಯಿಸಿ ಶಾಲಾ ಕಾಲೇಜುಗಳಲ್ಲಿ ಭಾಷಾ ವಿವಾದ ತರಬೇಡಿ ಎಂದು ಬುದ್ದಿ ಹೇಳಲಾಗಿದೆ. ಯಾವ ವಿದ್ಯಾರ್ಥಿ ಮೇಲೂ ಹಲ್ಲೆ ನಡೆಸಿಲ್ಲ. ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಆಕಸ್ಮಿಕವಾಗಿ ಡಾನ್ಸ್ ಮಾಡುವಾಗ ಕಾಲು ತುಳಿದಾಡಿಕೊಂಡು ಒಬ್ಬರಿಗೊಬ್ಬರು ರೊಚ್ಚಿಗೆದ್ದು ಈ ಘಟನೆ ನಡೆದಿದೆ ಎಂಬುದಾಗಿ ತಿಳಿಸಿದ್ದಾರೆ. ಎರಡೂ ಕಡೆಯವರು ಕನ್ನಡ ವಿದ್ಯಾರ್ಥಿಗಳೇ ಇದ್ದಾರೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳೇ ಇದ್ದಾರೆ ಎಂದು ತಿಳಿಸಿದ್ದಾರೆ.