ಮುಂಬಯಿ: ಮಳೆಗಾಲದಲ್ಲಿ ಕೊರೊನಾ ವಿರುದ್ಧದ ಹೋರಾಟ ಇನ್ನಷ್ಟು ಕಠಿನವಾಗುವ ಸಾಧ್ಯತೆ ಇರುವುದರಿಂದ ಟಾಸ್ಕ್ ಪೋರ್ಸ್ ಸಿದ್ಧವಾಗಿರಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಲು ಜೂ. 1ರ ವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಿದ ಠಾಕ್ರೆ ಸರಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಸಿಎಂ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಕಾರ್ಯಪಡೆಯ ಸದಸ್ಯರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ರಾಜ್ಯದಲ್ಲಿನ ವೈದ್ಯರು ಮಾಝಾ ಡಾಕ್ಟರ್ ಎಂಬ ಪರಿಕಲ್ಪನೆಯೊಂದಿಗೆ ಮುಂದೆ ಬರಬೇಕೆಂದು ಅವರು ವೈದ್ಯರಿಗೆ ಮನವಿ ಮಾಡಿದ್ದಾರೆ.
ಕಳೆದ ವರ್ಷ ತಜ್ಞ ವೈದ್ಯರು ದೊಡ್ಡ ಸಹಾಯಕರಾಗಿದ್ದರು. ಕೊರೊನಾ ರೋಗಿಗಳಿಗೆ ನಾವು ಯಾವ ಚಿಕಿತ್ಸಾ ವಿಧಾನಗಳನ್ನು ಹೊಂದಿರಬೇಕು, ಯಾವ ಔಷಧ ನೀಡಬೇಕು ಮತ್ತು ಎಷ್ಟು ನೀಡಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪ್ರತಿಯೊಂದು ಕುಟುಂಬವು ಪರಿಣಿತ ವೈದ್ಯರನ್ನು ಹೊಂದಿರುತ್ತದೆ. ಆ ವೈದ್ಯರ ಸಲಹೆಯ ಆಧಾರದ ಮೇಲೆ ಜನರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ಕುಟುಂಬ ವೈದ್ಯರೂ ಇ¨ªಾರೆ. ವೈದ್ಯರು ಪ್ರತಿಯೊಂದು ಕುಟುಂಬದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ರಾಜ್ಯದಲ್ಲಿ ಶೇ. 70ರಿಂದ 75 ರೋಗಿಗಳು ಲಕ್ಷಣರಹಿತರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಮನೆ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮೂಲಕ ರೋಗಿಗಳನ್ನು ಗುಣಪಡಿಸಬಹುದು. ಆದರೆ ಅವರ ಚಿಕಿತ್ಸೆಯತ್ತ ಗಮನ ಹರಿಸಲು, ಅವರಿಗೆ ಸರಿಯಾದ ಔಷಧ ನೀಡಲು ನೀವು ಕೆಲಸ ಮಾಡಬೇಕು. ಮಧುಮೇಹ ಹೊಂದಿದ ಕೋವಿಡ್ ರೋಗಿಯ ಸೋಂಕು ನಿಯಂತ್ರಿಸಲು ವೈದ್ಯರು ಉತ್ತಮ ಚಿಕಿತ್ಸೆ ನೀಡಬೇಕು ಎಂದು ಉದ್ಧವ್ ಠಾಕ್ರೆ ಮನವಿ ಮಾಡಿದರು.
ಜೂ. 1ರಿಂದ ಮಾನ್ಸೂನ್ ಪ್ರಾರಂಭವಾಗಲಿದ್ದು, ಬಳಿಕ ಪರೀಕ್ಷೆ ಇನ್ನಷ್ಟು ಕಠಿಣವಾಗಲಿದೆ. ಈ ಸಮಯದಲ್ಲಿ ನಿಮಗೆ ಬೇಕಾದ ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿರುವ ಉದ್ಧವ್ ಠಾಕ್ರೆ, ವೈದ್ಯರ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಡಾ| ಸಂಜಯ್ ಓಕ್, ಶಶಾಂಕ್ ಜೋಶಿ, ಡಾ| ತತ್ಯರಾವ್ ಲಹಾನೆ ಮತ್ತು ಡಾ| ರಾಹುಲ್ ಪಂಡಿತ್ ಉಪಸ್ಥಿತರಿದ್ದರು.