ತುಮಕೂರು: ಬಿಜೆಪಿ ಸರ್ಕಾರ ಬರಲು ತ್ಯಾಗ ಮಾಡಿರುವ ಕುರುಬ ಸಮುದಾಯದ ಶಾಸಕರೆಲ್ಲರಿಗೂ ಸಿಎಂ ಬಿ.ಎಸ್. ಯಡಿಯೂರಪ್ಪ ವಚನ ಭ್ರಷ್ಟರಾಗದೇ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧ ಕುರುಬ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ರಾಜಣ್ಣ ಎಚ್ಚರಿಕೆ ನೀಡಿದರು.
ಸಚಿವ ಸ್ಥಾನ ನೀಡದಿದ್ದರೆ ಹೋರಾಟ: ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಸಮುದಾಯದ ಎಂಟಿಬಿ ನಾಗರಾಜು, ಮಾಜಿ ಶಾಸಕ ಎಚ್.ವಿಶ್ವನಾಥ್, ಎಸ್.ಶಂಕರ್, ಶಾಸಕ ಭೈರತಿ ಬಸವರಾಜು ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ವಚನ ನೀಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದರು.
ಸಿದ್ದರಾಮಯ್ಯರನ್ನು ಅದೇ ಸ್ಥಾನದಲ್ಲಿ ಮುಂದುವರಿಸಿ: ನಮ್ಮ ಸಮುದಾಯದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಲ…ಪಿ ನಾಯಕ, ವಿರೋಧ ಪಕ್ಷದ ನಾಯಕರನ್ನಾಗಿ ಮುಂದುವರಿಸಬೇಕು. ಅವರಿಂದ ಯಾವುದೇ ಕಾರಣಕ್ಕೂ ಸಿಎಲ್‌ಪಿ ಸ್ಥಾನ ಕಿತ್ತುಕೊಳ್ಳಬಾರದು. ಕೆಳಗಿಳಿಸಿದರೆ ಕಾಂಗ್ರೆಸ್ ವಿರುದ್ಧ ಕುರುಬ ಸಮುದಾಯ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಪ್ರಭಾವಿ ನಾಯಕ ಡಾ.ಎಂ.ಆರ್. ಹುಲಿನಾಯ್ಕರ್, ಬೇವಿನಹಳ್ಳಿ ಮಂಜುನಾಥ್, ಸಿ.ಪುಟ್ಟರಾಜು, ಕುಮಾರಸ್ವಾಮಿ, ಎಸ್.ಶಂಕರ್ ಅವರಿಗೆ ನಿಗಮ ಮಂಡಳಿ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ವಿಷಯಗಳ ಬಗ್ಗೆ ಸಮುದಾಯದ ಮುಖಂಡರೊಂದಿಗೆ ಜಾಗೃತಿ ಸಭೆ ನಡೆಸಲಾಗಿದೆ. ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಮುದಾಯಕ್ಕೆ ಉತ್ತೇಜನ ನೀಡಲಾಗುತ್ತದೆ. ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಡೇರಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಕುರುಬ ಸಮುದಾಯ ಸಂಘಟಿಸಲು ಜಿಲ್ಲಾ ಕುರುಬರ ಸಂಘ ಸಕ್ರಿಯವಾಗಿ ಕೆಲಸ ನಿರ್ವಹಿಸಲಿದೆ. 2011ರಲ್ಲಿ ನೋಂದಣಿಯಾಗಿರುವ ಸಂಘ ರಾಜ್ಯ ಮತ್ತು ತಾಲೂಕು ಸಂಘಟನೆಗಳ ಸೇತುವೆಯಾಗಿ ಕೆಲಸ ಮಾಡಲಿದೆ ಎಂದರು. ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಟಿ.ಆರ್ ಸುರೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಎಂ.ಪಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಕಾರ್ಯದರ್ಶಿ ಸಿ.ಪುಟ್ಟರಾಜು, ಜಂಟಿ ಕಾರ್ಯದರ್ಶಿ ಟಿ.ಇ ರಘುರಾಮ್, ಟಿ.ಎಚ್ ಮಹಾದೇವ, ಖಜಾಂಚಿ ಧರ್ಮರಾಜು ಸೇರಿದಂತೆ ಹಲವರಿದ್ದರು.
ವಿಶ್ವನಾಥ್ ಸೋಲಿಗೆ ಸಿದ್ದರಾಮಯ್ಯ ಕಾರಣವಲ್ಲ: ವಿಶ್ವನಾಥ್ ಸೋಲಿಗೆ ಸಿದ್ದರಾಮಯ್ಯ ಹಾಗೂ ಸಮುದಾಯದವರೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಚ್.ವಿಶ್ವನಾಥ್ ಸೋಲಿಗೆ ಸಿದ್ದರಾಮಯ್ಯ ಮತ್ತು ಕುರುಬ ಸಮುದಾಯ ಕಾರಣವಲ್ಲ. ನಮ್ಮ ಸಮುದಾಯದ ಸಂಪೂರ್ಣ ಬೆಂಬಲದಿಂದ ಬಿಜೆಪಿಗೆ 50 ಸಾವಿರಕ್ಕೂ ಹೆಚ್ಚು ಮತ ಬಿದ್ದಿವೆ ಎಂದು ತಿಳಿಸಿದರು.