ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಕೇಂದ್ರಬಿಂದು ಹೊಂದಿದ್ದ 6.8 ತೀವ್ರತೆಯ ಭೂಕಂಪವು ಪಾಕಿಸ್ಥಾನವನ್ನು ಬೆಚ್ಚಿಬೀಳಿಸಿದೆ, ದೇಶದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಬುಧವಾರ ಮಾಧ್ಯಮ ವರದಿಗಳು ತಿಳಿಸಿವೆ. ಅಫ್ಘಾನಿಸ್ಥಾನದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ಥಾನದ ಹಿಂದೂ ಕುಶ್ ಪ್ರದೇಶವಾಗಿದ್ದು, ಅದರ ಆಳವು 180 ಕಿಲೋಮೀಟರ್ ಆಗಿತ್ತು ಎಂದು ಪಾಕಿಸ್ಥಾನದ ಹವಾಮಾನ ಇಲಾಖೆ ತಿಳಿಸಿದೆ. ಆರಂಭಿಕ ವರದಿಗಳ ಪ್ರಕಾರ, ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ನಗರಗಳಲ್ಲಿ ಕಂಪನದ ಅನುಭವವಾಗಿದೆ.
ಭಾರತದಲ್ಲೂ ಕಂಪನ
ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿ ದಂತೆ ಉತ್ತರ ಭಾರತದ ಹಲವು ರಾಜ್ಯಗಳು ಹಾಗೂ ಇತರ 9 ದೇಶಗಳಲ್ಲಿ ಮಂಗಳವಾರ ರಾತ್ರಿ 10.20ರ ವೇಳೆ ಏಕಕಾಲಕ್ಕೆ ಭೂಕಂಪ ಸಂಭವಿಸಿದೆ.
ಅಫ್ಘಾನಿಸ್ಥಾನದ ಕಾಲಫ್ಘಾನ್‌ನಲ್ಲಿ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಇದರ ಪ್ರಭಾವವು ಭಾರತ, ತುರ್ಕ್‌ಮೆನಿಸ್ಥಾನ, ಕಜಕಿಸ್ಥಾನ, ಪಾಕಿಸ್ಥಾನ, ತಜಕಿಸ್ಥಾನ, ಉಜ್ಬೇ ಕಿಸ್ಥಾನ, ಚೀನ ಮತ್ತು ಕಿರ್ಗಿಸ್ಥಾನದಲ್ಲೂ ಕಾಣಿಸಿ ಕೊಂಡಿದೆ.
Related Articles
ಗುಜ್ರಾನ್‌ವಾಲಾ, ಗುಜರಾತ್, ಸಿಯಾಲ್‌ಕೋಟ್, ಕೋಟ್ ಮೊಮಿನ್, ಮಧ್ ರಂಝಾ, ಚಕ್ವಾಲ್, ಕೊಹತ್ ಮತ್ತು ಗಿಲ್ಗಿಟ್-ಬಾಲ್ಟಿಸ್ಥಾನ್ ಪ್ರದೇಶಗಳಲ್ಲಿಯೂ ಪ್ರಬಲ ಕಂಪನದ ಅನುಭವವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದೂರದರ್ಶನದ ದೃಶ್ಯಾವಳಿಗಳು ಭಯಭೀತರಾದ ನಾಗರಿಕರು ಬೀದಿಗಳಲ್ಲಿ ನಿಂತಿರುವುದನ್ನು ತೋರಿಸಿವೆ.