ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭ ಜು.2ರಂದು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಿಗ್ನಲ್ ಸಿಗುವುದಿಲ್ಲವೆಂದು ಯಾರೂ ನೆಪ ಹೇಳುವುದು ಬೇಡ. ಗ್ರಾಪಂ ಮುಖ್ಯ ಕೇಂದ್ರದಲ್ಲೇ ಸಭೆ ನಡೆಸಬೇಕೆಂದು ಯಾರೂ ಹೇಳಿಲ್ಲ.
ಗ್ರಾಪಂ ವ್ಯಾಪ್ತಿಯ ಸಂಪರ್ಕ ಸಿಗುವ ಕಡೆ ಎಲ್ಲಾದರೂ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು. ಜಿಲ್ಲೆಯ ಯಾವುದೇ ಗ್ರಾಪಂನಲ್ಲೂ ಕಾರ್ಯಕ್ರಮ ನಡೆ ದಿಲ್ಲವೆಂಬ ದೂರು ಕೇಳಿಬರಬಾರದು. ಏಕೆಂದರೆ, ಇದು ಸುಮ್ಮನೆ ನಡೆಸುತ್ತಿರುವ ಕಾರ್ಯಕ್ರಮವಲ್ಲ. ಇದು ನೇರ ಪ್ರಸಾರ ದ ಕಾರ್ಯಕ್ರಮ. ಜನರು ಇದನ್ನು ನೋಡಬೇಕು. ಕೆಪಿಸಿಸಿಯವರೂ ಎಲ್ಲೆಡೆ ಕಾರ್ಯಕ್ರಮ ನಡೆಯುತ್ತಿರುವುದನ್ನು ವೀಕ್ಷಿಸಲು ಅವಕಾಶ ಸಿಗಬೇಕು. ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ದಾಖಲಾಗಬೇಕು. ಇದೆಲ್ಲರೂ ಡಿಜಿಟಲ್ ರೂಪದಲ್ಲಿರುವುದರಿಂದ ಎಲ್ಲರೂ ಶ್ರಮ ವಹಿಸುವಂತೆ ತಿಳಿಸಿದರು.
ಜನರನ್ನು ಸೇರಿಸುವುದು ಅನಿವಾರ್ಯ: ಎರಡು-ಮೂರು ದಿನ ಮುಂಚಿತವಾಗಿ ತಯಾರಿ ನಡೆಸಿ ಕೇಬಲ್ ಆಪರೇಟರ್‌ಗಳನ್ನು ಸಂಪರ್ಕಿಸಿ ಸಂಪರ್ಕ ಪಡೆದುಕೊಳ್ಳ ಬೇಕು. ಕಾರ್ಯಕ್ರಮ ನಡೆಯುವ ಸ್ಥಳ ಗುರುತಿಸಿ ಎಲ್‌ಇಡಿ ಟೀವಿ ಅಳವಡಿಸಲು, ಜನರು ಸೇರುವಂತೆ ವ್ಯವಸ್ಥೆ ಮಾಡುವುದು ಅನಿವಾರ್ಯ. ಇದರಿಂದ ಮುಂದೆ ರಾಜಕಾರಣ ಹಾಗೂ ಸಂಘಟ ನೆಗೆ ಅನುಕೂಲವಾಗಲಿದೆ ಎಂದರು.
ಕೆಲಸ ಮಾಡುವವರಿಗೆ ಆದ್ಯತೆ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲವೆಂಬ ಬಗ್ಗೆ ಅನೇಕರು ಪಕ್ಷ ಸಂಘಟನೆ, ಕಾರ್ಯಕ್ರಮದ ಆಯೋಜನೆಯಲ್ಲಿ ನಿರುತ್ಸಾಹ ತೋರುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರ ಮನೆ ಬಾಗಿಲಿಗೆ ಅಧಿಕಾರ ಹುಡುಕಿಕೊಂಡು ಬರಲಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಕೆಪಿಸಿಸಿ ವೀಕ್ಷಕ ಸಂಪಂಗಿ, ಯುವ ಮುಖಂಡ ರವಿಕುಮಾರ್ ಗಣಿಗ, ಮಾಜಿ ಶಾಸಕ ಎಚ್.ಬಿ. ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ದ್ರಪ್ಪ, ಯುವ ಘಟಕದ ಅಧ್ಯಕ್ಷ ಲೋಕೇಶ್, ಹರೀಶ್‌ಬಾಬು, ಶಾರದಾ ಗೌಡ, ಶುಭದಾಯಿನಿ, ಸಿ.ಎಂ.ದ್ಯಾವಪ್ಪ, ಉಮ್ಮಡಹಳ್ಳಿ ಮಂಜುನಾಥ್ ಇದ್ದರು.