ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಆಕರ್ಷಕ ಪ್ರವಾಸಿ ತಾಣವಾಗಿದ್ದು, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಕರ್ನಾಟಕ ವಿಧಾನ ಪರಿಷತ್ ಅರ್ಜಿಗಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ರಘುನಾಥ್ ರಾವ್ ಮಲ್ಕಾಪೂರೆ ಅವರು ತಿಳಿಸಿದರು.
ತರೀಕೆರೆ ತಾಲೂಕು ಕೆಮ್ಮಣ್ಣಗುಂಡಿಯಲ್ಲಿ ವಿಧಾನ ಪರಿಷತ್ ಅರ್ಜಿಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ, ಅರಣ್ಯ ಇಲಾಖೆ ಸೇರಿದಂತೆ ಅಂಗ ಸಂಸ್ಥೆಗಳು ಸಮನ್ವಯತೆಯಿಂದ ಕೆಮ್ಮಣ್ಣುಗುಂಡಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸೂಚಿಸಿದರು.
ಕೆಮ್ಮಣ್ಣುಗುಂಡಿ ಚಾರಣ ಮತ್ತು ಸಾಹಸ ಕ್ರೀಡೆಗಳಿಗೆ ಯೋಗ್ಯವಾಗಿದ್ದು, ಯೋಜನಾ ವರದಿ ಸಿದ್ಧಗೊಳಿಸಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಮತ್ತು ಆದಾಯ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ ಸೇರಿದಂತೆ ಇತರೆ ಇಲಾಖೆಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರವಾಸಿ ತಾಣದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಫ್ಟಿಂಗ್ ಸಾಹಸಿ ಕ್ರೀಡೆಗೆ ಜೀವ ರಕ್ಷಣೆಗೆ ಅಗತ್ಯವಾದ ನಿಯಮ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಈ ಹಿನ್ನಲೆಯಲ್ಲಿ ತಾಂತ್ರಿಕ ಸಲಹೆಗಾರರ ಜೊತೆ ಚರ್ಚಿಸುವಂತೆ ಸೂಚಿಸಿದ ಅವರು, ರೋಪ್ ವೇ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಇಲ್ಲಿನ ವಸತಿಗೃಹ ವ್ಯವಸ್ಥೆ ಯನ್ನು ಜಂಗಲ್ ಲಾಡ್ಜ್ ಸಂಸ್ಥೆಗೆ ವಹಿಸಲಾಗಿದೆ. ಪ್ರವಾಸಿಗರ ಬೇಡಿಕೆಗೆ ಸ್ಪಂದಿಸಲಾಗುತ್ತಿದೆ. ಇತರೆ ಗಿರಿಧಾಮಗಳ ಮಾದರಿಯಲ್ಲಿ ಸೌಲಭ್ಯ ಒದಗಿಸಲಾಗುವುದು ಎಂದರು.
ಸಭೆಯ ಶಿಫಾರಸ್ಸುಗಳನ್ನು ಮತ್ತು ಸೂಚನೆಗಳ ಅನ್ವಯ ತಗೆದುಕೊಂಡ ಕ್ರಮಗಳ ಕುರಿತ ಅನುಪಾಲನಾ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವಂತೆ ಸಮಿತಿ ಸದಸ್ಯರು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಸುನೀಲ್ ವಲ್ಯಾಪುರೆ, ಮೋಹನ್‌ಕುಮಾರ್ ಕೊಂಡಜ್ಜಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ| ಎಚ್.ಎಲ್. ನಾಗರಾಜ್, ತರೀಕೆರೆ ಉಪವಿಭಾಗಾಧಿಕಾರಿ ಸಿದ್ಧಲಿಂಗ ರೆಡ್ಡಿ, ಪ್ರವಾಸೋದ್ಯಮ, ತೋಟಗಾರಿಕೆ ಇಲಾಖೆ, ಜಂಗಲ್ ಲಾಡ್ಜ್ ಸಂಸ್ಥೆ ಅಧಿಕಾರಿಗಳು ಇದ್ದರು.