ಚಳ್ಳಕೆರೆ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಗ್ರಾಮಾಂತರ ಹಾಗೂ ನಗರ ಪ್ರದೇಶದ ಬಡ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕನ್ನು ಭದ್ರಪಡಿಸಿಕೊಳ್ಳಲು ಶಿಕ್ಷಣ ಪಡೆಯಲು ಆಗಮಿಸುತ್ತಿದ್ದಾರೆ.
ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಈ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಬೆನ್ನೆಲುಬಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಕರೆ ನೀಡಿದರು.
ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭವಾದ ಕಂಪ್ಯೂಟರ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕಳೆದ ಸುಮಾರು ಎಂಟು ವರ್ಷಗಳಿಂದ ವಿವಿಧ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೊಠಡಿ, ಇನ್ನಿತರ ಸೌಲಭ್ಯಗಳಿಗಾಗಿ ಸರ್ಕಾರ ನೀಡಿದೆ.
ಶಾಸಕರ ಅನುದಾನದಲ್ಲಿ ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸಹಾಯ ಮಾಡಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಾತ್ರ ಫಲಿತಾಂಶ ಲಭ್ಯವಾಗುತ್ತಿಲ್ಲ. ಕಾಲೇಜಿನ ಎಲ್ಲಾ ಬೋಧಕರು ಮಕ್ಕಳಶೈಕ್ಷಣಿಕ ಉನ್ನತಿಗಾಗಿ ಛಲದಿಂದ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ಕಾಲೇಜಿನಲ್ಲಿ ಸುಮಾರು ಆರು ವಷಗಳ ಕಾಲ ಸೇವೆ ಸಲ್ಲಿಸಿ ಪಿಯುಸಿ ಪರೀಕ್ಷಾರಂಗ ವಿಭಾಗದ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಪಿ.ಎನ್.ಕೃಷ್ಣಪ್ರಸಾದ್ ಅವರನ್ನು ಶಾಸಕ ಟಿ. ರಘುಮೂರ್ತಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣಪ್ರಸಾದ್, ಕಾಲೇಜಿನಲ್ಲಿ ಏನೇ ಅಭಿವೃದ್ಧಿಯಾದರೂ ಅದಕ್ಕೆ ಮೂಲ ಕಾರಣ ಕ್ಷೇತ್ರದ ಶಾಸಕರು.ಇಲ್ಲಿನ ಎಲ್ಲಾ ಉಪನ್ಯಾಸಕರು ನೀಡಿದಸಹಕಾರದಿಂದ ಕಾಲೇಜಿನ ಸಂಪೂರ್ಣ ಬೆಳವಣಿಗೆಗೆ ನಾನು ಶ್ರಮ ವಹಿಸಿದ್ದೇನೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರ್ಯ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಗೋವಿಂದಪ್ಪ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಲಕ್ಷ್ಮಣ್, ಉಪನ್ಯಾಸಕರಾದ ವಸಂತಕುಮಾರ್, ಚಂದ್ರಶೇಖರ್, ಬೆಳಗಟ್ಟನಾಗರಾಜು, ಪುಷ್ಪಲತಾ, ಶಾಂತಕುಮಾರಿ, ರಾಮಾಂಜನೇಯ ಮುಂತಾದವರು ಉಪಸ್ಥಿತರಿದ್ದರು.