ಬೆಳಗಾವಿ: ಕ್ಷಯರೋಗ ನಿರ್ಮೂಲನೆಯಡಿಯಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸಮಾಜದ ಕೊನೆಯ ವ್ಯಕ್ತಿಗಳಿಗೆ ತಲುಪಿಸಿ 2025 ನೇ ವೇಳೆಗೆ ಕ್ಷಯ ಮುಕ್ತ ಭಾರತವನ್ನು ಮಾಡುವ ಭಾರತ ಸರ್ಕಾರದ ಗುರಿಯನ್ನು ಮುಟ್ಟಲು ಎಲ್ಲರೂ ಕೂಡಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ , ರೆಡಕ್ರಾಸ್ ಸಂಸ್ಥೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಪಾಲರಾದ ತಾವರಚಂದ ಗೇಹಲೋಟ ಅವರು ಬೆಳಗಾವಿ ಜಿಲ್ಲೆಯ 10 ಕ್ಷಯರೋಗ ಫಲಾನುಭವಿಗಳನ್ನು ದತ್ತು ಪಡೆದಿದ್ದು, ಅವರಿಗೆ ರೆಡಕ್ರಾಸ್ ಸಂಸ್ಥೆಯ ಮೂಲಕ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿ ಆರೋಗ್ಯ ಶಿಕ್ಷಣ ಪರಿಕರಗಳನ್ನು ಬಿಡುಗಡೆ ಮಾಡಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ| ಅಶೋಕ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಅನಿಲ ಕೋರಬು, ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಕೈಕೊಂಡ ಕ್ರಮಗಳ ಕುರಿತು ವಿವರಿಸಿದರು.
Related Articles
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷಯರೋಗ ವಿಭಾಗದ ಮುಖ್ಯಸ್ಥರಾದ ಡಾ.ಗಿರೀಶ ದಂಡಗಿ ಮಾತನಾಡಿ, ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು ಎಂದರು.
ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿ ಡಾ| ಶಿವಾನಂದ ಮಾಸ್ತಿಹೋಳಿ ಉಪನ್ಯಾಸ ನೀಡಿದರು. ಬಿಮ್ಸ್‌ನ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ| ಸುಧಾಕರ್ ಆರ್.ಸಿ, ವೈದ್ಯಕೀಯ ಅಧೀಕ್ಷಕರಾದ ಡಾ| ಅಣ್ಣಾಸಾಹೆಬ ಪಾಟೀಲ, ಮನೋ ವೈದ್ಯರಾದ ಡಾ.ಚಂದ್ರಶೇಖರ, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ| ಬಿ. ಎನ್ ತುಕ್ಕಾರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ವ್ಹಿ ಕಿವುಡಸಣ್ಣವರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಚಾಂದನಿ ದೇವಡಿ, ಬಿಮ್ಸ್ ಆಸ್ಪತ್ರೆ ಕ್ಷಯರೋಗ ಅಧಿಕಾರಿ ಡಾ| ನಾಗಲೇಕರ್, ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಪ್ರಿಯಾ ಪುರಾಣಿಕ ಉಪಸ್ಥಿತರಿದ್ದರು.ಪ್ರವೀಣ ಬೇಟಿಗಾರ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಯಲಿಗಾರ ನಿರೂಪಿಸಿದರು, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೇನ್ನವರ ವಂದಿಸಿದರು.