Advertisement

ಡಿಜಿಟಲ್‌ ದಾಳಿಗೆ ದಿನದರ್ಶಿಕೆಗೆ ಹೊಡೆತ

11:54 AM Dec 21, 2017 | |

ಬೆಂಗಳೂರು: ಕೆಲವೇ ವರ್ಷಗಳ ಹಿಂದಿನ ಮಾತು ಡಿಸೆಂಬರ್‌ ಕಳೆದು ಜನವರಿ ಬಂತೆಂದರೆ, ಮನೆಗೊಂದು ಹೊಸ ಕ್ಯಾಲೆಂಡರ್‌, ನಿತ್ಯದ ಚಟುವಟಿಕೆ ಬರೆದಿಡಲು ಡೈರಿ ಬರುವ ಸಂಭ್ರಮ. ಮಾರುಕಟ್ಟೆಯಲ್ಲೂ ಅಷ್ಟೇ, ಹೊಸ ವರ್ಷಕ್ಕೆ ತಿಂಗಳಿರುವಾಗಲೇ ಬಗೆಬಗೆಯ ಕ್ಯಾಲೆಂಡರ್‌ಗಳು ಅಂಗಡಿಗಳ ಮುಂದೆ ರಾರಾಜಿಸುತ್ತಿದ್ದವು. ಆದರೆ, ಈ ಬಾರಿ ಹೊಸ ವರ್ಷದ ಕ್ಯಾಲೆಂಡರ್‌ ಮತ್ತು ಡೈರಿಗಳನ್ನು ಕೇಳುವವರಿಲ್ಲ.

Advertisement

ಹೊಸ ವರ್ಷದ ಹೊಸ್ತಿಲಲ್ಲಿ ಇರುವುದರಿಂದ ಬೆಂಗಳೂರು ಮಾತ್ರವಲ್ಲ, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಣ್ಣ-ಬಣ್ಣದ ಕ್ಯಾಲೆಂಡರ್‌ಗಳು, ಡೈರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಖರೀದಿಸುವವರೇ ಇಲ್ಲ. ಇದರಿಂದ ಕ್ಯಾಲೆಂಡರ್‌ಗಳು ಮುದ್ರಕರು, ವಿತರಕರ ಕೈಸುಡುತ್ತಿವೆ. 

ಇದಕ್ಕೆ ಕಾರಣ ಮೊಬೈಲ್‌, ಸಾಮಾಜಿಕ ಜಾಲತಾಣಗಳ ಅಬ್ಬರ ಮತ್ತು ಆನ್‌ಲೈನ್‌ ಮಾರುಕಟ್ಟೆ ಹಾವಳಿ! ಇದು ಹೊಸ ವರ್ಷ ಮಾತ್ರವಲ್ಲ, ಚುನಾವಣಾ ವರ್ಷವೂ ಆಗಿರುವ ಕಾರಣ ಸಹಜವಾಗೇ ಈ ಬಾರಿ ಕ್ಯಾಲೆಂಡರ್‌ಗಳಿಗೆ ಹೆಚ್ಚು ಬೇಡಿಕೆ ಇರಬೇಕಿತ್ತು. ಆದರೆ, ಹಾಗಾಗಿಲ್ಲ. ಈ ವರ್ಷ ಮುಗ್ರಣಕೆಕ ಎಂದಿಗಿಂತ ಕಡಿಮೆ ಆರ್ಡರ್‌ಗಳು ಬಂದಿವೆ ಎಂದು ಕಾಮಾಕ್ಷಿಪಾಳ್ಯದ ಮುದ್ರಕ ಮಂಜು ಬೇಸರ ವ್ಯಕ್ತಪಡಿಸುತ್ತಾರೆ.

“ಚುನಾವಣೆ ಸಮೀಪಿಸುತ್ತಿರುವುದರಿಂದ ಹೊಸ ವರ್ಷದ ನೆಪದಲ್ಲಿ ಕಾರ್ಯಕರ್ತರು ತಮ್ಮ ಮತ್ತು ತಮ್ಮ ನಾಯಕರ ಭಾವಚಿತ್ರಗಳಿರುವ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ಹಂಚುತ್ತಾರೆ. ನಮ್ಮಲ್ಲಿ ಈ ಮಾದರಿಯ ಆರ್ಡರ್‌ಗಳೇ ಹೆಚ್ಚು. ಲಕ್ಷಗಟ್ಟಲೆ ಕ್ಯಾಲೆಂಡರ್‌ಗಳ ಮುದ್ರಣಕ್ಕೆ ಆರ್ಡರ್‌ ಬರುತ್ತಿತ್ತು. ಆದರೆ, ಈ ಬಾರಿಯ ಬೇಡಿಕೆ ಬರೀ 30 ಸಾವಿರ. ಜತೆಗೆ ಹಿಂದೆಲ್ಲಾ ಕ್ಯಾಲೆಂಡರ್‌ ಮುದ್ರಣಕ್ಕೆ ಮುಗಿಬೀಳುತ್ತಿದ್ದ ಎಲ್‌ಐಸಿ ಏಜೆಂಟರ್‌ಗಳು ಈ ಬಾರಿ ಪತ್ತೆಯಿಲ್ಲ,’ ಎನ್ನುತ್ತಾರೆ ಮಂಜು.

ಬದಲಾದ ಪ್ರಚಾರ ಮಾಧ್ಯಮ: ಇಂದು ಪ್ರಚಾರದ ಮಾಧ್ಯಮಗಳು ಬದಲಾಗಿವೆ. ಮೊಬೈಲ್‌, ಸಾಮಾಜಿಕ ಜಾಲತಾಣಗಳು ಕ್ಯಾಲೆಂಡರ್‌ಗಳ ಸ್ಥಳ ಆಕ್ರಮಿಸಿವೆ. ರಾಜಕೀಯ ನಾಯಕರು, ಕಾರ್ಯಕರ್ತರು ಮೊಬೈಲ್‌ ಮೂಲಕವೇ ಸಂದೇಶ ಕಳುಹಿಸುತ್ತಿದ್ದಾರೆ. ಕ್ಯಾಲೆಂಡರ್‌ ಮುದ್ರಣ ವೆಚ್ಚ, ಅವುಗಳನ್ನು ವಿತರಿಸುವವರಿಗೆ ನೀಡಬೇಕಾದ ಹಣ ಎಲ್ಲವನ್ನೂ ನೋಡಿಕೊಂಡರೆ ಡಿಜಿಟಲ್‌
ಪ್ರಚಾರವೇ ಚೀಪ್‌ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಲ್ಲದೆ ಈಗ ಕ್ಯಾಲೆಂಡರ್‌ ನೋಡೋರ್ಯಾರು? ಎಲ್ಲ ಮೊಬೈಲ್‌ನಲ್ಲೇ ಸಿಗುತ್ತಲ್ಲ ಎಂಬುದು ರಾಜಕಾರಣಗಳ ಅಭಿಪ್ರಾಯ.

Advertisement

ಬೆಲೆ ಹೆಚ್ಚಿಸಿದ ಜಿಎಸ್‌ಟಿ: “ಕ್ಯಾಲೆಂಡರ್‌ ಮತ್ತು ಡೈರಿ ಮುದ್ರಣ ಬೇಡಿಕೆ ಕುಸಿಯಲು ಮತ್ತೂಂದು ಕಾರಣ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ). ಈ ಹಿಂದೆ ತೆರಿಗೆ ಶೇ.5 ಇತ್ತು. ಈಗ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಕ್ಯಾಲೆಂಡರ್‌, ಡೈರಿಗಳು ದುಬಾರಿ ಯಾಗಿವೆ. ಮೊದಲೇ ಇವುಗಳ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಜನ, ರೇಟ್‌ ಕೇಳಿ ವಾಪಸ್‌ ಹೋಗುತ್ತಾರೆ,’ ಎಂದು
ಪೀಣ್ಯ ಪ್ರಿಂಟರ್ನ ಕುಮಾರ್‌ ಅಭಿಪ್ರಾಯಪಡುತ್ತಾರೆ.

ಕ್ಯಾಲೆಂಡರ್‌ ವ್ಯಾಪಾರ ಅರ್ಧಕ್ಕರ್ಧ ಕುಸಿತ “ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ, ಕ್ಯಾಲೆಂಡರ್‌, ಡೈರಿಗಳ ಖರೀದಿ ಅರ್ಧದಷ್ಟು ಕುಸಿದಿದೆ. ಕಳೆದ ವರ್ಷ ನಾನು 15 ಲಕ್ಷ ಮೊತ್ತದ ಕ್ಯಾಲೆಂಡರ್‌ ಮತ್ತು ಡೈರಿಗಳನ್ನು ಮಾರಿದ್ದೆ. ಈ ಬಾರಿಯ ವ್ಯಾಪಾರ ಬರೀ 5 ಲಕ್ಷ ರೂ. ಮುಂಬೈನಿಂದ ಲಕ್ಷಾಂತರ ಮೌಲ್ಯದ, ವಿವಿಧ ವಿನ್ಯಾಸದ ಕ್ಯಾಲೆಂಡರ್‌ಗಳನ್ನು ತರಿಸಿದ್ದರೂ ಕೇಳುವವರಿಲ್ಲ,’ ಎಂದು ಕಬ್ಬನ್‌ಪೇಟೆಯ ಮಹಿಪಾಲ್‌ ಸ್ಟೇಷನರೀಸ್‌ನ ಭವಾನಿಸಿಂಗ್‌ ಅಲವತ್ತುಕೊಂಡರು. “ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಅವಧಿಯಲ್ಲಿ ರಾತ್ರಿ 12ರವರೆಗೂ ವ್ಯಾಪಾರ ನಡೆಯುತ್ತಿತ್ತು. ಊಟಕ್ಕೂ ಸಮಯ ಇರುತ್ತಿರಲಿಲ್ಲ. ಕಳೆದ ವರ್ಷ ಈ ಹೊತ್ತಿಗೆ 10 ಸಾವಿರ ಡೈರಿ, 5 ಸಾವಿರ ಕ್ಯಾಲೆಂಡರ್‌ ಬಿಕರಿಯಾಗಿದ್ದವು. ಆದರೆ, ಈ ಬಾರಿ ತಲಾ ಒಂದು ಸಾವಿರ ಮಾರಾಟ ಆಗಿವೆ. ಎಲ್ಲೆಡೆ ಇದೇ ಸ್ಥಿತಿ ಇದೆ,’
ಎನ್ನುತ್ತಾರೆ ಕಬ್ಬನ್‌ಪೇಟೆ ಮುಖ್ಯರಸ್ತೆಯ ವ್ಯಾಪಾರಿ ಚೈಲ್‌ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next