Advertisement

ಬೇಕಿರುವುದು “ಜೀ ಹುಜೂರ್‌’ಪೊಲೀಸರಲ್ಲ, ವೃತ್ತಿಪರ ಅಧಿಕಾರಿಗಳು

10:29 AM Oct 03, 2018 | Team Udayavani |

ನಮಗಿಂದು ಬೇಕಾಗಿರುವುದು ವೃತ್ತಿಪರ ಪೊಲೀಸರೇ ಹೊರತು, ಎಲ್ಲ ಹಂತಗಳಲ್ಲೂ ರಾಜಕಾರಣಿಗಳ ಆದೇಶಕ್ಕೆ “ಜೀ ಹುಜೂರ್‌’ ಎನ್ನುವ; ಕ್ರಿಮಿನಲ್‌ಗ‌ಳೊಂದಿಗೆ ರಾಜಿಮಾಡಿಕೊಳ್ಳುವ ಪೊಲೀಸರಲ್ಲ. ಪೊಲೀಸರು ಹಿಂದುಮುಂದು ನೋಡದೆ ಗುಂಡು ಹಾರಿಸಬೇಕಾಗಿರುವುದು ಕುಖ್ಯಾತ ಕ್ರಿಮಿನಲ್‌ಗ‌ಳತ್ತ ಮಾತ್ರ; ಕಾನೂನಿನೆದುರು ತಲೆಬಾಗುವ ನಾಗರಿಕರತ್ತ ಅಲ್ಲ. 

Advertisement

ಸುಮಾರು 50 ವರ್ಷಗಳ ಹಿಂದೆ ಅಲಹಾಬಾದ್‌ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಆನಂದ್‌ ನಾರಾಯಣ್‌ ಮಲ್ಲಾ ಅವರು ಅಂದಿದ್ದ ಒಂದು ಮಾತು ಇಂದು ನೆನಪಾಗುತ್ತಿದೆ “ಪೊಲೀಸರೆಂದರೆ ಸಮವಸ್ತ್ರದಲ್ಲಿರುವ ಕ್ರಿಮಿನಲ್‌ ಗ್ಯಾಂಗುಗಳು. ಇವರು ನಮ್ಮ ಸಮಾಜದ ಸುಸಂಘಟಿತ ಕಾನೂನು ಬಾಹಿರ ಶಕ್ತಿಗಳು’. ಈ ಮಾತು ಇದೀಗ ಲಕ್ನೊದಲ್ಲಿ ನಡೆದಿರುವ ಘಟನೆಯೊಂದಕ್ಕೆ ಬಹು ಚೆನ್ನಾಗಿ ಅನ್ವಯವಾಗುತ್ತದೆ .ಅಲ್ಲಿನ ಇಬ್ಬರು ಪೊಲೀಸರು ಬಹುರಾಷ್ಟ್ರೀಯ ಕಂಪೆನಿಯಾದ “ಆ್ಯಪಲ್‌ ಟೆಕ್ನಾಲಜಿ’ಯ ಮಾರಾಟ ವಿಭಾಗಾಧಿಕಾರಿ ವಿವೇಕ್‌ ತಿವಾರಿಯವರನ್ನು ಕ್ಷುಲ್ಲಕ ಕಾರಣಕ್ಕಾಗಿ ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಈ ಅಧಿಕಾರಿಗೆ ತನ್ನ ಕಾರನ್ನು ನಿಲ್ಲಿಸುವಂತೆ ಈ ಪೋಲಿಸ್‌ದ್ವಯರು ಆದೇಶಿಸಿದರೂ ಇವರ ಮಾತಿಗೆ ಕಿವಿಗೊಡಲಿಲ್ಲವಂತೆ. ಈ ಹತ್ಯೆ ಉತ್ತರ ಪ್ರದೇಶದ ಜನರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಆಘಾತ ಉಂಟುಮಾಡಿದೆ. ರಾಷ್ಟ್ರದ ಎಲ್ಲೆಡೆಗಳಲ್ಲಿ ಪೊಲೀಸರ ಕಾರ್ಯವೈಖರಿ ಹೇಗಿದೆಯೆಂಬುದನ್ನು ಬಯಲುಗೊಳಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ನ್ಯಾ|ಆನಂದ್‌ ನಾರಾಯಣ್‌ ಅಂದು ಮೇಲಿನ ಹೇಳಿಕೆ ನೀಡಿದ್ದು ಉತ್ತರ ಪ್ರದೇಶದ ಪೊಲೀಸರನ್ನು ದೃಷ್ಟಿಯಲ್ಲಿರಿಸಿಕೊಂಡು.

ಅವರು ಆ ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ಕೇಂದ್ರ ಸಚಿವ ಅರುಣ್‌ ಜೇಟಿÉ ಅವರೂ ಒಂದಕ್ಕಿಂತ ಹೆಚ್ಚು ಬಾರಿ ನ್ಯಾ| ಆನಂದ್‌ ನಾರಾಯಣ್‌ ಅವರ ಮಾತನ್ನು ಉಲ್ಲೇಖೀಸಿದ್ದಾರೆ. 

ದೇಶದ ಯಾವುದೇ ಭಾಗದಲ್ಲೂ ಪೊಲೀಸರನ್ನು ಸಮರ್ಥರೆಂದು, ಪ್ರಾಮಾಣಿಕರೆಂದು, ಜನಸ್ನೇಹಿಗಳೆಂದು ಪರಿಗಣಿಸಲಾಗಿಲ್ಲವೆನ್ನುವುದು ನಿಜ.ಆದರೆ ಉತ್ತರ ಪ್ರದೇಶದ ಪೊಲೀಸರು ಈ ವಿಷಯದಲ್ಲಿ ಉಳಿದೆಡೆಗಳಿಗಿಂತ ಹೆಚ್ಚು ಕುಖ್ಯಾತರು. ಬ್ರಿಟಿಷ್‌ ಆಡಳಿತದ ಕಾಲದಲ್ಲಿ “ಆಗ್ರಾ ಮತ್ತು ಜೌದ್‌ ಪ್ರಾಂತ್ಯ’ ಎಂದು ಕರೆಸಿಕೊಳ್ಳುತ್ತಿದ್ದ ಈ ರಾಜ್ಯದಲ್ಲಿ ಪೊಲೀಸ್‌ ಪಡೆ ಅಸ್ತಿತ್ವಕ್ಕೆ ಬಂದುದು ಠಕ್ಕರನ್ನು ಪಿಂಡಾರಿಗಳನ್ನು ಹಾಗೂ ಡಕಾಯಿತರನ್ನು ಮಟ್ಟಹಾಕುವ ಸಲುವಾಗಿ.”ಉತ್ತರ ಭಾರತದ ಫ್ಯಾಷನ್‌ ಹಾಗೂ ಸಂಸ್ಕೃತಿಯ ರಾಜಧಾನಿ’ ಎಂದು ಕರೆಸಿಕೊಳ್ಳುತ್ತಿರುವ ಉತ್ತರ ಪ್ರದೇಶದ ಪೊಲೀಸರು ಕ್ರಿಮಿನಲ್‌ಗ‌ಳ ಹಾಗೂ ಗ್ಯಾಂಗ್‌ಸ್ಟರ್‌ಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ವಿವೇಕ್‌ ತಿವಾರಿಯಂಥ ಸಜ್ಜನನ್ನು ಹತೈಗೈದಿದ್ದರೆ ಇದರಲ್ಲಿ ಅಚ್ಚರಿಯೇನೂ ಇಲ್ಲ .

ಉತ್ತರಪ್ರದೇಶ ಪ್ರಾಂತೀಯ ಸಶಸ್ತ್ರ ಪೊಲೀಸ್‌ ಪಡೆ(ನಮ್ಮ ಕರ್ನಾಟಕದ ರಾಜ್ಯ ಮೀಸಲು ಪಡೆ‌ಯಂಥ ಘಟಕ)ಯ ಸಿಬ್ಬಂದಿ, 1973ರಲ್ಲಿ ಇನ್ನಷ್ಟು ಉತ್ತಮ ವೇತನ ಹಾಗೂ ಅನುಕೂಲತೆಗಳನ್ನು ಒದಗಿಸಬೇಕೆಂದು ಆಗ್ರಹಿಸಿ ದಂಗೆಯೆದ್ದದ್ದು ನೆನಪು ಚೆನ್ನಾಗಿರುವ ಕೆಲವರಿಗೆ ಗೊತ್ತಿರಬಹುದು. ಅಂದು ಈ ದಂಗೆಯಲ್ಲಿ ಪಾಲ್ಗೊಂಡ ಪೊಲೀಸ್‌ ಸಿಬ್ಬಂದಿ ಬರೇಲಿ, ಮೀರತ್‌ ಹಾಗೂ ಆಗ್ರಾಗಳಲ್ಲಿ ಭೀಕರ ರೀತಿಯ ಮುತ್ತಿಗೆ, ಘೇರಾವೋಗಳನ್ನು ನಡೆಸಿ ವಿಪರೀತ ದಾಂಧಲೆಯೆಬ್ಬಿಸಿದ್ದರು. ಇವರನ್ನು ನಿಯಂತ್ರಿಸುವ ಸಲುವಾಗಿ ಆಗಿನ ಪಂಡಿತ್‌ ಕಮಲಾಪತಿ ತ್ರಿಪಾಠಿಯವರ ನೇತೃತ್ವದ ಕಾಂಗ್ರೆಸ್‌ ಸರಕಾರ ಸೇನೆಯನ್ನು ಕರೆಸಿಕೊಂಡಿತ್ತು. ಇಂದು ಯೋಗಿ ಆದಿತ್ಯನಾಥ್‌ ಅವರ ಸರಕಾರವೂ ಇದೇ ರೀತಿಯ ದಾಳಿಗೆ ತುತ್ತಾಗಿದೆ. ಅಂದಿನ ದಂಗೆಕೋರ ಪೊಲೀಸ್‌ ಪಡೆಯನ್ನು ಅದರ ಪಾಶವೀ ಕೃತ್ಯಕ್ಕೆ ಸರಿಮಿಗಿಲೆಂಬಂತೆ ಅಂದಿನ ಸರಕಾರ ಮಟ್ಟ ಹಾಕಿತ್ತು. ವಿವಿಧೆಡೆಗಳಲ್ಲಿ ನಡೆದಿದ್ದ ಮಿಲಿಟರಿಯ ಗುಂಡಿನ ದಾಳಿಗೆ 30 ಪೊಲೀಸರು ಬಲಿಯಾಗಿದ್ದರು.

Advertisement

ದೇಶದಲ್ಲಿರುವ ಪೊಲೀಸ್‌ ವ್ಯವಸ್ಥೆ ಸ್ವಾತಂತ್ರಾé ನಂತರದ ವರ್ಷಗಳಲ್ಲಿ ಕುಸಿಯುತ್ತ ಬಂತು; ಇದಕ್ಕೆ ಪ್ರತಿಯೊಂದನ್ನೂ ತೀವ್ರ ಸ್ವರೂಪದ ರಾಜಕೀಕರಣಕ್ಕೆ ತುತ್ತಾಗಿಸುವ ಚಾಳಿ ಎಂಬ ಭಾವನೆ ಈ ದೇಶದ ಜನರಲ್ಲಿದೆ. ಆದರೆ ವಾಸ್ತವವಾಗಿ ಬ್ರಿಟಿಷರ ಕಾಲದಲ್ಲೇ ಪೊಲೀಸರ ಸ್ಥಿತಿಗತಿ ತುಂಬಾ ಕೆಳಮಟ್ಟದಲ್ಲಿತ್ತು. 1902ರಷ್ಟು ಹಿಂದೆಯೇ ಬ್ರಿಟಿಷ್‌ ಸರಕಾರ ಪೊಲೀಸರ ಸ್ಥಿತಿಗತಿ ಹಾಗೂ ಸಮಸ್ಯೆಗಳ ಪರಿಶೀಲನೆಗಾಗಿ ದ್ವಿತೀಯ ಪೊಲೀಸ್‌ ಆಯೋಗವನ್ನು ಅಸ್ತಿತ್ವಕ್ಕೆ ತಂದಿತ್ತು. ಬಂಗಾಲ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ್ದ ಐಸಿಎಸ್‌ ಅಧಿಕಾರಿ ಸರ್‌ ಎಚ್‌. ಎಲ್‌. ಫ್ರೆàಸರ್‌ ಅವರ ನೇತೃತ್ವದ ತನಿಖಾ ಸಮೀಕ್ಷಾ ಆಯೋಗ ಇದು. “ಪೊಲೀಸ್‌ ಪಡೆ ತುಂಬಾ ಅಸಮರ್ಥವಾಗಿದೆ, ಅದನ್ನು ಭ್ರಷ್ಟಾಚಾರಿ ಹಾಗೂ ದಮನಕಾರಿಯೆಂದೇ ಸಾಮಾನ್ಯವಾಗಿ ಪರಿಗಣಿಸಲಾಗುತ್ತಿದೆ; ಸಾರ್ವಜನಿಕರ ವಿಶ್ವಾಸ ಹಾಗೂ ಸಹಕಾರ ಗಳಿಸುವಲ್ಲಿ ಅದು ತೀರಾ ವಿಫ‌ಲವಾಗಿದೆ’ ಎಂದು ಸರ್‌ ಫ್ರೆàಸರ್‌ ತಮ್ಮ ವರಿದಿಯಲ್ಲಿ ಹೇಳಿದ್ದರು. ಬ್ರಿಟಿಷ್‌ ಸರಕಾರ ಪ್ರಪ್ರಥಮ ಬಾರಿಗೆ ಪೊಲೀಸ್‌ ಕಮಿಶನ್‌ ಅನ್ನು ಅಸ್ತಿತ್ವಕ್ಕೆ ತಂದದ್ದು 1860ರಲ್ಲಿ. 

ಅಂದರೆ ಇದರರ್ಥ ನಾವು ಈ ಕಳೆದ 158 ವರ್ಷಗಳಿಂದಲೂ ಪೊಲೀಸ್‌ ವ್ಯವಸ್ಥೆಯ ಸುಧಾರಣೆ ಬಗೆಗಿನ ಮಾತುಗಳನ್ನು ಆಡುತ್ತ ಬಂದಿದ್ದೇವೆ. “ಆತ್ಮ ಗೌರವವುಳ್ಳ ಯಾವೊಬ್ಬ ವ್ಯಕ್ತಿಯೂ ಪ್ರತಿವಾದಿಯಾಗಿ ಅಥವಾ ಸಾಕ್ಷಿದಾರನಾಗಿ ಎಂಬುದು ಒತ್ತಟ್ಟಿಗಿರಲಿ, ಒಬ್ಬ ದೂರುದಾರನಾಗಿ ಕೂಡಾ ಪೊಲೀಸರ ಸಹವಾಸ ಬಯಸಲಾರ’ ಎಂಬಂಥ ಪರಿಸ್ಥಿತಿ ಇಂದು ಎದುರಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕೇಂದ್ರದ ಮಾಜಿ ಸಂಪುಟ ಕಾರ್ಯದರ್ಶಿ ಧರ್ಮವೀರ ಅವರ ನೇತೃತ್ವದ ರಾಷ್ಟ್ರೀಯ ಪೊಲೀಸ್‌ ಆಯೋಗವನ್ನು ಅಸ್ತಿತ್ವಕ್ಕೆ ತರಲಾಯಿತು(1979). ಪ್ರಖ್ಯಾತ ಪೊಲೀಸಧಿಕಾರಿಗಳಾಗಿದ್ದ ಸಿ.ವಿ. ನರಸಿಂಹನ್‌, ಕೆ.ಎಫ್. ರುಸ್ತುಮ್‌ಜಿ ಹಾಗೂ ಎನ್‌.ಎಸ್‌. ಸಕ್ಸೇನಾ ಹಾಗೂ ಸಮಾಜ ಶಾಸ್ತ್ರಜ್ಞ ಪ್ರೊ| ಎಂ.ಎಸ್‌. ಗೋರೆ ಹಾಗೂ ಮದ್ರಾಸ್‌ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎನ್‌.ಕೃಷ್ಣಸ್ವಾಮಿ ರೆಡ್ಡಿ ಈ ಆಯೋಗದ ಸದಸ್ಯರಾಗಿದ್ದರು. ಈ ಆಯೋಗ ತನ್ನ ವರದಿಯನ್ನು ಆಗಿನ ಜನತಾಪಾರ್ಟಿ ಸರಕಾರದಲ್ಲಿ ಗೃಹ ಸಚಿವರಾಗಿದ್ದು ಜೆ.ಎಚ್‌. ಪಟೇಲ್‌ ಅವರಿಗೆ ಸಲ್ಲಿಸಿತ್ತು. 

ಆ ಸರಕಾರವಷ್ಟೆ ಅಲ್ಲ ,ಆಮೇಲೆ ಬಂದವುಗಳು ಕೂಡ ಈ ವರದಿಯನ್ನು ನಿರ್ಲಕ್ಷಿಸಿದವು. ಹಾಗೆ ನೋಡಿದರೆ ವರದಿಯೇ ಕೆಲ ವಿಷಯಗಳಲ್ಲಿ ನಿರಾಶೆ ಹುಟ್ಟಿಸುವ ರೀತಿಯಲ್ಲಿತ್ತು; ಇದು ಏಕಪಕ್ಷೀಯ ವರದಿ ಎಂಬಂಥ ಟೀಕೆಗಳೂ ಕೇಳಿಬಂದವು. ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಹುದ್ದೆ ಹಾಗೂ ಕೆಲಸದ ಅನುಕೂಲತೆಗಳಿಗೆ ಈ ವರದಿಯಲ್ಲಿ ಹೆಚ್ಚು ಗಮನ ನೀಡಲಾಗಿತ್ತು. ಬಹುಶಃ ಇದಕ್ಕೆ ಕಾರಣ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿನ ಪೊಲೀಸ್‌ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದುದು. ಬಹುಶಃ ಹೀಗೆಂದೇ ಈ ವರದಿಯನ್ನು ಪೊಲೀಸರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಯೂನಿಯನ್‌ಗಳನ್ನು ರೂಪಿಸಿಕೊಳ್ಳುವ ಅಂಶದತ್ತ ತನ್ನ ಒಲವನ್ನು ತೋರಿಸಿತ್ತು.

ಭ್ರಪಾrಚಾರಕ್ಕೆ ತಡೆ ಹಾಕಲು ಏನು ಮಾಡಬೇಕೆಂಬ ಬಗ್ಗೆ ಯಾವ ಸಲಹೆ ಸೂಚನೆಗಳು ಈ ವರದಿಯಲ್ಲಿ ಇರಲಿಲ್ಲ. ಆದರೂ ಈ ವರದಿಯನ್ನು ಒಂದು ಕಾರಣಕ್ಕಾಗಿ ನೆನಪಿಡಲೇಬೇಕು. ಪೊಲೀಸ್‌ ಪಡೆಯನ್ನು ಸರಕಾರಿ ಆಡಳಿತ ಯಂತ್ರದಿಂದ ಬೇರ್ಪಡಿಸಿ ಅದನ್ನು ಸ್ವಾಯತ್ತ ಘಟಕವಾಗಿಸಬೇಕು ಎಂಬ ಸಲಹೆ ಈ ವರದಿಯಲ್ಲಿತ್ತು.
ನಮ್ಮ ಕರ್ನಾಟಕದ ಪೊಲೀಸರನ್ನು ಉತ್ತರ ಪ್ರದೇಶದ ಪೊಲೀಸರೊಂದಿಗೆ ಹೋಲಿಸುವ ಹಾಗಿಲ್ಲ.

ಕರ್ನಾಟಕದವರು ಜಾಣರು, ಚುರುಕು ನಡೆಯವರು; ತಮ್ಮ ಕೋವಿ ಹಾಗ ರಿವಾಲ್ವ ರ್‌ಗಳನ್ನು ಅಪರೂಪಕ್ಕೆ ಮಾತ್ರ ಬಳಸುವವರು -ಬಳಸಲೇಬೇಕಾದ ಸಂದರ್ಭದಲ್ಲಿ ಕೂಡಾ. ಹೀಗಾಗಿ ಅವರು ಮೃದು ನಡವಳಿಕೆಯವರು; ಸೌಜನ್ಯಶೀಲರು -ಕಾನೂನು ಭಂಗಿಸುವ ಮಂದಿಯೊಂದಿಗೆ ಕೂಡಾ. ಬೆಂಗಳೂರು ಮತ್ತಿತರ ಕಡೆಗಳಲ್ಲಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್‌ ದಾಖಲಿಸುವ ಬದಲಿಗೆ ತಮ್ಮ ಠಾಣೆಗಳನ್ನು “ರಾಜಿ ಪಂಚಾಯಿತಿಯ ಕೇಂದ್ರಗಳನ್ನಾಗಿ’ ಪರಿವರ್ತಿಕೊಂಡಿದ್ದರೆ ಇದರಲ್ಲಿ ಅಚ್ಚರಿಯೇನಿಲ್ಲ. ಕೆಲ ಅಧಿಕಾರಿಗಳಂತೂ ಅಪರಾಧಿಗಳಿಗೆ ಕೋಳತೊಡಿಸುವ ಬದಲಿಗೆ “ಮಾತುಕತೆ’ಗಾಗಿ (ದಕ್ಷಿಣೆಗಾಗಿ ಎಂದು ಓದಿಕೊಳ್ಳಿ ) ತಮ್ಮ ಬಳಿ ಬರುವಂತೆ ಆಹ್ವಾನಿಸುತ್ತಾರೆ. ಪೊಲೀಸ್‌ ಅಧಿಕಾರಿಗಳು ನಾಗರಿಕ ವ್ಯಾಜ್ಯಗಳಲ್ಲಿ ಮೂಗು ತೂರಿಸಕೂಡದೆಂಬ ಖಡಕ್‌ ಎಚ್ಚರಿಕೆಯನ್ನು ಆಗ ಸಚಿವ ಡಾ| ಜಿ.ಪರಮೇಶ್ವರ ಹಾಗೂ ಅವರ ಹಿಂದಿನ ಗೃಹ ಸಚಿವರು ನೀಡಿದ್ದಾರೆಂಬ ಕಹಿಸತ್ಯವನ್ನು ತಳ್ಳಿಹಾಕುವ ಹಾಗಿಲ್ಲ. ಆದರೆ ಈ ಪಿಡುಗು ಮಾತ್ರ ಇನ್ನೂ ಮುಂದುವರಿದೇ ಇದೆ. ಹಾಗೆಯೇ ನಮ್ಮ ಪೊಲೀಸಧಿಕಾರಿಗಳಲ್ಲಿ ಕೆಲವರು ತಮ್ಮ ಕೈಕೆಳಗಿನ ಅಧಿಕಾರಿ/ಸಿಬ್ಬಂದಿಯ ತಥಾಕಥಿತ ನೈತಿಕ ನಿಲುವನ್ನು ಪ್ರತಿಪಾದಿಸುತ್ತಿರುವುದು ಅಥವಾ ಇಂಥ ವಾಸ್ತವ ಸಂಗತಿಯನ್ನು ನಿರ್ಲಕ್ಷಿಸುತ್ತಿರುವುದು ಅಥವಾ ಇಂಥ ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ /ಸಿಬ್ಬಂದಿ ಖುಲಾಸೆಯಾಗುತ್ತಿರುವುದು ಸುಳ್ಳಲ್ಲ . ಅಂತೆಯೇ ನಮ್ಮ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಕಹಿ ವಾಸ್ತವವನ್ನು ನಾವು ನಿರ್ಲಕ್ಷಿಸುವ ಹಾಗಿಲ.É ಅಖೀಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ವ್ಯವಹಾರದಲ್ಲಿ ಕೈಕೆಳಗಿನ ಅಧಿಕಾರಿಗಳು ಸಂಗ್ರಹಿಸಿ ಕೊಡುತ್ತಿರುವ ಹಣದ ಫ‌ಲಾನುಭವಿಗಳಾದ ಅಧಿಕಾರಿಗಳ ಪ್ರಮಾಣ ಕೇವಲ ಅಲ್ಪಮಾತ್ರ ಎಂಬುದನ್ನು ಊಹಿಸಿಕೊಂಡರೆ ಸಾಕು!

ದುರದೃಷ್ಟವಶಾತ್‌ ನಮ್ಮ ರಾಜ್ಯದ ಪೊಲೀಸ್‌ ವ್ಯವಸ್ಥೆಯಲ್ಲಿ ನರ್ತಿಸುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆದಿಲ್ಲ , ನಡೆಯುತ್ತಿಲ್ಲ. ಆದರೂ ಪಕ್ಕದ ತೆಲಂಗಾಣದ ಪೊಲೀಸ್‌ ಮಹಾನಿರ್ದೇಶಕ ಎಂ.ಮಹೇಂದರ್‌ ರೆಡ್ಡಿ ಅವರು ನಡೆಸಿದ ಸಮೀಕ್ಷೆಯ ವಿವರವನ್ನಿಷ್ಟು ಅವಲೋಕಿಸುವ ಅಗತ್ಯವಿದೆ. ಒಂದು ರೀತಿಯಲ್ಲಿ ತೆಲಂಗಾಣ ಮತ್ತು ಆಂಧ್ರದ ಜನರಿಗೂ ನಮಗೂ ಅನೇಕ ಸಾಮ್ಯಗಳಿವೆ; ಹಾಗೆಂದೇ ಈ ಅಧ್ಯಯನ ಗಮನಾರ್ಹ. ಆ ಸರ್ವೇಕ್ಷಣದ ಪ್ರಕಾರ 391 ಕ್ಷೇತ್ರೀಯ ಮಟ್ಟದ ಪೊಲೀಸರು ಸುಲಿಗೆ ಹಾಗೂ ಒಟ್ಟಾರೆ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಕುತೂಹಲದ ಮಾತೆಂದರೆ ಹೀಗೆ ಶಾಮೀಲಾದ ಅಧಿಕಾರಿಗಳು ಹಿಂದೊಮ್ಮೆ ತಮ್ಮ ಮೇಲಧಿಕಾರಿಗಳಿಂದ ಪ್ರಾಮಾಣಿಕರು ಹಾಗೂ ಸಮರ್ಥರೆಂಬ ಮನ್ನಣೆಗೆ ಪಾತ್ರರಾದವರು. ಈ ಪೊಲೀಸಧಿಕಾರಿಗಳು ಮದ್ಯದಂಗಡಿ, ಅನಧಿಕೃತ ಮದ್ಯ ಮಾರಾಟ ಮಳಿಗೆ, ಶೇಂದಿ ಅಂಗಡಿಗಳಿಂದ ತಿಂಗಳು ತಿಂಗಳು ಮಾಮೂಲು ವಸೂಲು ಮಾಡುತ್ತಿದ್ದರು. ಖಾಸಗಿ ಜಗಳ/ವ್ಯಾಜ್ಯಗಳಲ್ಲಿ ಮೂಗು ತೂರಿಸುತ್ತಿದ್ದರು.

ಹೊಟೇಲುಗಳಿಂದ, ಕಟ್ಟಡ ಕಾಂಟ್ರಾಕ್ಟರ್‌ಗಳಿಂದ, ವಾಣಿಜ್ಯೋದ್ಯಮಿಗಳಿಂದ, ಅನಧಿಕೃತ ಮರಳು ಗಣಿಗಾರಿಕೆ ನಡೆಸುತ್ತಿದ್ದವರಿಂದ ಹಾಗೂ ಜೂಜು ಅಡ್ಡೆಯ ಮಾಲೀಕರಿಂದ ಹಣ ಸುಲಿಯುತ್ತಿದ್ದರು. ಅನೇಕ ಪ್ರಕರಣಗಳಲ್ಲಿ ಕ್ಷೇತ್ರೀಯ ಮಟ್ಟದ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ “ತಲುಪಿಸುವ’ ಉದ್ದೇಶದಿಂದ ಮಾಹೆಯಾನ ವಸೂಲಿ ದಂಧೆ ನಡೆಸುತ್ತಿದ್ದರು. ಒಂದು ಪ್ರಕರಣದಲ್ಲಂತೂ ಒಬ್ಬ ಜೀಪ್‌ ವ್ಯಾಪಾರಿ ಮಹಿಳಾ ಅಧಿಕಾರಿಯೊಬ್ಬರ ಹೆಸರಿನಲ್ಲಿ ( ಬೇನಾಮಿ) ಹಣ ಸಂಗ್ರಹ ಮಾಡುತ್ತಿದ್ದುದು ಪತ್ತೆಯಾಗಿದೆ. ಪುರುಷ ಅಧಿಕಾರಿಗಳಿಗಿಂತ ಮಹಿಳಾ ಅಧಿಕಾರಿಗಳು ಕಡಿಮೆ ಭ್ರಷ್ಟಾಚಾರಿಗಳೆನ್ನುವುದು ಹೇಗೆ?

ಈ ದಿನಗಳಲ್ಲಿ ಪೊಲೀಸರು ಕ್ರಿಮಿನಲ್‌ಗ‌ಳ ಮೇಲೆ “ಥರ್ಡ್‌ ಡಿಗ್ರಿ’ ಕ್ರಮಗಳನ್ನು ಜರಗಿಸುವ ಬಗ್ಗೆ ಎಲ್ಲೂ ಕೇಳಿಬರುತ್ತಿಲ್ಲ. ಇದಕ್ಕೆ ಕಾರಣ ಬಹುಶಃ ಇಂಥ “ಉಪಚಾರ’ವೆಲ್ಲ ಪೊಲೀಸರ ಕೈಬಿಸಿ ಮಾಡಲು ಸಾಧ್ಯವಿಲ್ಲದ ಬಡವರಿಗಷ್ಟೆ ಮೀಸಲಾಗಿದೆ ಎನ್ನುವುದಾಗಿರಬಹುದು. ಅನೂಕೂಲವಂತ ಆರೋಪಿ/ಅಪರಾಧಿಗಳಿಗೆ ಪೊಲೀಸ್‌ ಕಸ್ಟಡಿಯಲ್ಲಿ “ಏರ್‌ ಹೋಸ್ಟೆಸ್‌’ ಉಪಚಾರ ದೊರೆಯುತ್ತಿರುವುದು ನಿಶ್ಚಿತವಾಗಿಯೂ ಹೌದು. 

ಭ್ರಷ್ಟಾಚಾರದ ಜೊತೆಗೆ ದೇಶಾದ್ಯಂತ ಕಾಡುತ್ತಿರುವ ಇನ್ನೊಂದು ಪಿಡುಗೆಂದರೆ ರಾಜಕೀಯ ಮಧ್ಯಪ್ರವೇಶದ ಚಾಳಿ. ಪೊಲೀಸಧಿಕಾರಿ ಗಳು ಹಾಗೂ ಇತರ ಅಧಿಕಾರಿಗಳ ವರ್ಗಾವಣೆಯ ವಿಚಾರದಲ್ಲಿ ಶಾಸಕರು ಮೂಗು ತೂರಿಸುತ್ತಿದ್ದಾರೆ. ಇದಕ್ಕೆ ಅವಕಾಶವೀಯುವ ಪ್ರಮಾದವನ್ನು ಕುಮಾರಸ್ವಾಮಿ ಸರಕಾರ ಎಸಗುತ್ತಿದೆ.
ಇತ್ತೀಚೆಗೆ ಮಹಿಳಾ ಅಧಿಕಾರಿಯೊಬ್ಬರಿಗೆ ಮೈಸೂರಿನಲ್ಲಿ ಪೊಲೀಸ್‌ ಡೆಪ್ಯುಟಿ ಕಮಿಶನರ್‌ ಹುದ್ದೆಯ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗದೆ ಹೋಯಿತು; ಅವಕಾಶ ಹೋದುದಕ್ಕೆ ಕಾರಣ ಆಕೆಯ ವರ್ಗಾವಣೆಗೆ ಸಚಿವರೊಬ್ಬರು ಒಪ್ಪಿಗೆ ನೀಡಿರಲಿಲ್ಲ ಎಂಬುದಾಗಿತ್ತು. 

ನಮಗಿಂದು ಬೇಕಾಗಿರುವುದು ವೃತ್ತಿಪರ ಪೊಲೀಸರೇ ಹೊರತು, ಎಲ್ಲ ಹಂತಗಳಲ್ಲೂ ರಾಜಕಾರಣಿಗಳ ಆದೇಶಕ್ಕೆ “ಜೀ ಹುಜೂರ್‌’ ಎನ್ನುವ; ಕ್ರಿಮಿನಲ್‌ಗ‌ಳೊಂದಿಗೆ ರಾಜಿಮಾಡಿಕೊಳ್ಳುವ ಪೊಲೀಸರಲ್ಲ. ಪೊಲೀಸರು ಹಿಂದುಮುಂದು ನೋಡದೆ ಗುಂಡು ಹಾರಿಸಬೇಕಾಗಿರುವುದು ಕುಖ್ಯಾತ ಕ್ರಿಮಿನಲ್‌ಗ‌ಳತ್ತ ಮಾತ್ರ; ಕಾನೂನಿನೆದುರು ತಲೆಬಾಗುವ ನಾಗರಿಕರತ್ತ ಅಲ್ಲ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next