ಬೆಂಗಳೂರು: ಪರಿಸರ ಸಂರಕ್ಷಣೆಗೆ ಮತ್ತಷ್ಟು ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಆನಂದ್‌ಸಿಂಗ್ ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೂತನ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇದರಿಂದ ಪರಿಸರ ಮಲಿನ ಮಾಡುವ ಕಾರ್ಖಾನೆಗಳಿಗೆ ಕಾನೂನಿನ ಭಯ ಬರುತ್ತದೆ. ಆಗ ಪರಿಸರಕ್ಕೆ ಧಕ್ಕೆಯಾಗುವುದನ್ನು ತಡೆಯಹುದು ಎಂದರು.
ಅರಣ್ಯ ಇಲಾಖೆಯಲ್ಲಿ ಅತ್ಯಂತ ಕಠಿಣ ಕಾನೂನುಗಳಿದ್ದು, ಯಾರಾದರೂ ಅರಣ್ಯ ಭೂಮಿ ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಆದರೆ ರಾಸಾಯನಿಕಗಳನ್ನು ಹೊರ ಹಾಕುವ ಕಾರ್ಖಾನೆಗಳಿಗೆ ಒಮ್ಮೆ ಮಂಡಳಿ ನೋಟಿಸ್ ನೀಡಿ, ಕ್ರಮಕೈಗೊಳ್ಳುವ ಕೆಲಸ ಮಾಡಲಾಗಿದೆ. ಕಠಿಣ ಕಾನೂನು ಜಾರಿಗೆ ತರುವ ಸಂಬಂಧ ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ನೀತಿ ರೂಪಿಸಿವೆ. ಹೀಗಾಗಿ ಮಂಡಳಿಯ ಕಚೇರಿ ಉಪಯೋಗಕ್ಕಾಗಿ ಹಾಲಿ ಬಳಕೆಯಲ್ಲಿರುವ ಡೀಸೆಲ್ ಅಥವಾ ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನ ಉಪಯೋಗಿಸಲು ಪ್ರಾಯೋಗಿಕವಾಗಿ 10 ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಲಾಗಿದೆ ಎಂದರು.
Related Articles
ಆ್ಯಪ್ ಬಿಡುಗಡೆ
ಮಂಡಳಿ ಉದ್ದಿಮೆದಾರರು ತಮ್ಮ ಸಮ್ಮತಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತಹ ನೂತನ ಮೊಬೈಲ್ ಅಪ್ಲಿಕೇಶನ್‌ನನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಡಾ.ಶಾಂತ್ ಎ.ತಿಮ್ಮಯ್ಯ, ಸದಸ್ಯ ಕಾರ್ಯದರ್ಶಿ ಎಚ್.ಸಿ.ಗಿರೀಶ್, ಅಧಿಕಾರಿಗಳಾದ ವಿಜಯ್ ಕೃಷ್ಣನ್ ವೆಂಕಟೇಶ್, ವೆಂಕಟಗಿರಿ ಇತರರಿದ್ದರು.
ಸಿದ್ದು ಸ್ಪರ್ಧೆಗೆ ಸ್ವಾಗತ
ಸಿದ್ದರಾಮಯ್ಯ ಅವರನ್ನು ವಿಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್, 224 ಕ್ಷೇತ್ರದಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಸಿದ್ದರಾಮಯ್ಯ ನನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ, ವಿರೋಧಿಸುವುದಿಲ್ಲ. ಸೋಲು-ಗೆಲುವು ಜನತೆ ತೀರ್ಮಾನಿಸುತ್ತಾರೆ ಎಂದು ಹೇಳಿದರು.