Advertisement

ಡ್ರಗ್‌ ಮಾಫಿಯಾ ಮೇಲೆ ಕಠಿನ ನಿಯಂತ್ರಣ ಅಗತ್ಯ

01:08 AM Mar 07, 2023 | Team Udayavani |

ಶಾಲಾ- ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ವೃತ್ತಿಪರರನ್ನೇ ಗುರಿಯಾಗಿಟ್ಟುಕೊಂಡು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಕಡೆ “ಡ್ರಗ್‌’ ಮಾಫಿಯಾ ಕಾರ್ಯಾಚರಣೆ ನಡೆಸುತ್ತಿರುವುದು ಹೊಸದೇನಲ್ಲ. ಅದರಲ್ಲೂ ವಿಶೇಷವಾಗಿ ರಾಜಧಾನಿ ಹಾಗೂ ಕರಾವಳಿ ಭಾಗದ ಡ್ರಗ್‌ ಮಾಫಿಯಾ ಕೈಚಳಕ ಬೆಚ್ಚಿಬೀಳಿಸುವಂತಿದೆ. ಚಾಕೋಲೇಟ್‌ನಂತೆ ಮಕ್ಕಳ ಕೈಗೆ ಮಾದಕ ವಸ್ತುಗಳು ಸಿಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಲಕ್ಷಾಂತರ ವಿದ್ಯಾರ್ಥಿಗಳ ಪೋಷಕರ ನೆಮ್ಮದಿ ಹಾಳು ಮಾಡಿದೆ.

Advertisement

ಬೆಂಗಳೂರುವೊಂದರಲ್ಲಿ ವರ್ಷಕ್ಕೆ 136 ಕೋಟಿ ರೂ.ಗಳ ಡ್ರಗ್‌ ವಹಿವಾಟು ನಡೆಯುತ್ತದೆ ಎಂಬ ಅಂಶ ಈ ಜಾಲ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದಕ್ಕೆ ಸಾಕ್ಷಿ.

ಹಲವು ವರ್ಷಗಳ ಹಿಂದೆ ರೀತಿ ಕದ್ದುಮುಚ್ಚಿ ನಡೆಯುತ್ತಿದ್ದ ಈ ಡ್ರಗ್‌ ದಂಧೆ ಇತ್ತೀಚಿನ ದಿನಗಳಲ್ಲಿ ಒಂದು ರೀತಿ ಬಹಿರಂಗ ವ್ಯವಹಾರವಾಗಿ ಮಾರ್ಪಾಟ್ಟಿರುವುದು ಕಾನೂನು ವ್ಯವಸ್ಥೆಯಲ್ಲಿನ ಲೋಪಕ್ಕೆ ಕೈಗನ್ನಡಿ ಹಿಡಿದಂತೆ ಅಗಿದೆ. ಈ ದಂಧೆಕೋರರು ಯಾವುದಕ್ಕೂ ಹೆದರುತ್ತಿಲ್ಲ ಎಂಬುದಕ್ಕೆ ಕ್ವಿಂಟಾಲ್‌ಗ‌ಟ್ಟಲೆ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಬೆಂಗಳೂರಿಗೆ ಡಂಪ್‌ ಮಾಡುತ್ತಿರುವುದಕ್ಕೆ ನಿದರ್ಶನ. ಅಲ್ಲೊಂದು-ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬಂದಾಗ ಎಚ್ಚೆತ್ತುಕೊಳ್ಳುವ ಬದಲಿಗೆ ಪೂರೈಕೆಯ ಮೂಲ ಹಾಗೂ ಮಾರಾಟ ಜಾಲದ ಬಗ್ಗೆ ಸದಾ ಕಣ್ಣಿಡುವ ಅಗತ್ಯವಿದೆ. ದೇಶ ಹಾಗೂ ವಿದೇಶಿ ಡ್ರಗ್‌ ಮಾಫಿಯಾ ವಿರುದ್ಧ ತಕ್ಷಣವೇ ಸಮರ ಸಾರುವ ಅನಿವಾರ್ಯತೆ ಎದುರಾಗಿದೆ.

ಈ ಚಟಕ್ಕೆ ಬಲಿಯಾದ ವಿದ್ಯಾರ್ಥಿಗಳು, ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾದಕ ವಸ್ತುಗಳ ಚಟಕ್ಕೆ ದಾಸನಾದರೆ ಅದರಿಂದ ಅವರನ್ನು ಹೊರತರುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ವಿದ್ಯಾಭ್ಯಾಸದ ವೇಳೆ ಈ ರೀತಿಯ ಚಟಗಳಿಗೆ ಬಿದ್ದು ಕಾಸಿಗಾಗಿ ಅನೇಕ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳಿಗೇನೂ ಕಡಿಮೆ ಇಲ್ಲ. ಇಂಥ ಮಕ್ಕಳ ಪೋಷಕರ ವ್ಯಥೆ ಹೇಳತೀರದು.
ಮನೋತಜ್ಞರಿಂದ ಕೌನ್ಸೆಲಿಂಗ್‌ ನಡೆಸಿದರೂ ಉಪವಾಗವಾಗದೆ ಅದೆಷ್ಟೋ ಪೋಷಕರು ಕೈಚೆಲ್ಲಿ ಕಣ್ಣೀರಿನಿಂದ ನಿತ್ಯ ಕೈತೊಳೆಯುತ್ತಿರುವ ಉದಾಹರಣೆಗಳು ಸಾಕಷ್ಟಿವೆ.

ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಿಗೆ ಡ್ರಗ್‌ ಪೂರೈಸುತ್ತಿರುವ ಮಾಫಿಯಾವನ್ನು ಬೇರು ಮಟ್ಟದಲ್ಲೇ ಕತ್ತರಿಸಿ ಹಾಕದಿದ್ದರೆ ಭವಿಷ್ಯದ ದಿನಗಳು ಮತ್ತಷ್ಟು ಆತಂಕಕಾರಿಯಾಗಲಿವೆ. ಇದರ ವಿರುದ್ಧ ಕೇವಲ ಕರ್ನಾಟಕ ಒಂಟಿಯಾಗಿ ಹೋರಾಡಿದರೆ ಸಾಲದು. ಹಲವು ರಾಜ್ಯಗಳು ಜಂಟಿಯಾಗಿ ಹೋರಾಡಲು ಕೈಜೋಡಿಸಬೇಕಿದೆ. ಜತೆಗೆ ತಮ್ಮ ತಮ್ಮ ರಾಜ್ಯಗಳ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮವಾಗಿ ಬೆಳೆಯುತ್ತಿರುವ ಗಾಂಜಾವನ್ನು ಪತ್ತೆ ಹಚ್ಚಿ ಭಸ್ಮ ಮಾಡಿದರೆ ಅರ್ಧ ಸಮಸ್ಯೆ ಬಗೆಹರಿದಂತೆ. ಈ ನಿಟ್ಟಿನಲ್ಲಿ ನೆರೆ-ಹೊರೆ ರಾಜ್ಯಗಳು ಒಟ್ಟಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುವುದು ಅಗತ್ಯವಿದೆ.

Advertisement

ಎಲ್ಲಕ್ಕಿಂತ ಮುಖ್ಯವಾಗಿ ಶಾಲಾ-ಕಾಲೇಜುಗಳು, ಯುವ ಸಮುದಾಯದಲ್ಲಿ ಈ ಬಗ್ಗೆ ತಕ್ಷಣವೇ ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ. ಪೊಲೀಸ್‌ ಇಲಾಖೆ ಜತೆಗೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಮಾತ್ರ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಕೇವಲ ಸಾಂಕೇತಿಕವಾಗಿ ವರ್ಷಕ್ಕೊಮ್ಮೆ ಜಾಗೃತಿ ಕಾರ್ಯಕ್ರಮ ನಡೆದರೆ ಸಾಲದು, ಇದೊಂದು ರೀತಿ ಅಭಿಯಾನ ಆಗಬೇಕಿದೆ. ಪ್ರತಿ ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳು, ಹಾಸ್ಟಲ್‌ಗ‌ಳಲ್ಲಿ ಡ್ರಗ್‌ ವಿರೋಧಿ ಸೆಲ್‌ ತೆರೆದು ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕಿದೆ. ದಂಧೆಕೋರರ ವಿರುದ್ಧ ಕಾನೂನು ಕುಣಿಕೆಗಳನ್ನು ಮತ್ತಷ್ಟು ಬಲಪಡಿಸಿ ಸಮಾಜಕ್ಕೆ ಒಂದು ಸಂದೇಶ ಕೊಡಬೇಕಿರುವುದು ಸರ್ಕಾರಗಳ ದೊಡ್ಡ ಜವಾಬ್ದಾರಿಯಾಗಿದೆ. ಡ್ರಗ್‌ ಮಾಫಿಯಾ ವಿರುದ್ಧ ಸರ್ಕಾರ ಹಾಗೂ ಸಮಾಜ ಎರಡೂ ಒಟ್ಟಿಗೆ ಹೋದರೆ ಮಾತ್ರ ಸ್ವಲ್ಪಮಟ್ಟಿಗೆ ಯಶ ಕಾಣಬಹುದು. ಇಲ್ಲದಿದ್ದರೆ ಮಾಫಿಯಾ ಕೈಮೇಲಾಗುವುದರಲ್ಲಿ ಎರಡು ಮಾತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next