Advertisement
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಜಂಕ್ಷನ್‌ನಿಂದ ಪಣಿಯೂರಿಗೆ ತೆರಳುವ ಪಿಡಬ್ಲ್ಯೂಡಿ ರಸ್ತೆಯ ಇಕ್ಕೆಲಗಳ ಚರಂಡಿಗಳಲ್ಲಿ ಸ್ಥಳೀಯ ಬಡಾ ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳು ಮಾತ್ರವಲ್ಲದೇ ಪಣಿಯೂರು, ಎಲ್ಲೂರು ಮತ್ತು ಬೆಳಪು ಕಡೆಯಿಂದ ಸಂಚರಿಸುತ್ತಿದ್ದ ವಾಹನ ಸವಾರರು ಕೂಡಾ ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗೆ ಕಸ-ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗುತ್ತಿದ್ದರು.
ಇದೀಗ ಬಡಾ ಗಾ.ಪಂ. ಸ್ಥಳೀಯ ತ್ಯಾಜ್ಯ ವಿಲೇವಾರಿಯ ಗುತ್ತಿಗೆದಾರರ ಮೂಲಕ ಉಚ್ಚಿಲ-ಪಣಿಯೂರು ರಸ್ತೆಯ ಇಕ್ಕೆಲಗಳಲ್ಲಿ ಸುರಿಯಲಾಗಿದ್ದ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿಸಿದೆ. ಕಸವನ್ನು ಶುಚಿಗೊಳಿಸಿ, ಚರಂಡಿಯನ್ನು ಬಿಡಿಸಿಕೊಟ್ಟಿರುವುದು ಮಾತ್ರವಲ್ಲದೇ ರಸ್ತೆಗೆ ಅಡ್ಡವಾಗಿ ಚಾಚಿದ್ದ ಗಿಡ – ಮರಗಳ ಗೆಲ್ಲುಗಳನ್ನೂ ತೆರವುಗೊಳಿಸಿದೆ.
Related Articles
ತ್ಯಾಜ್ಯ ತೆರವಿನ ಬಳಿಕ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿರುವ ಗ್ರಾಮ ಪಂಚಾಯತ್ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ತ್ಯಾಜ್ಯ ತಂದು ಎಸೆಯುವವರನ್ನು ಪತ್ತೆ ಹಚ್ಚಲು ಮುಂದಾಗಿದೆ. ಇದಕ್ಕಾಗಿ ಉಚ್ಚಿಲ ಪಣಿಯೂರು ರಸ್ತೆ, ಎನ್.ಎಚ್. 66 ಮತ್ತು ರಾಘವೇಂದ್ರ ಮಠದ ಬಳಿಯ ಪ್ರದೇಶವನ್ನು ಗೊತ್ತುಪಡಿಸಲಾಗಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕುಶಾಲಿನಿ ತಿಳಿಸಿದ್ದಾರೆ.
Advertisement
ತ್ಯಾಜ್ಯ ಎಸೆದವರಿಗೆ ದಂಡ ; ಹಿಡಿದು ಕೊಟ್ಟವರಿಗೆ ಬಹುಮಾನಮಾತ್ರವಲ್ಲದೇ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿರುವಂತೆ ತ್ಯಾಜ್ಯ ಎಸೆದವರಿಗೆ 2 ಸಾವಿರ ರೂ. ದಂಡ ಮತ್ತು ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ಕೊಟ್ಟವರಿಗೆ 1 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಂಘ ಸಂಸ್ಥೆಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಪಂಚಾಯತ್ ಮೂಲಕ ನಡೆಯುತ್ತಿದೆ. ಕಂದಾಯ ಇಲಾಖೆಗೆ ಮನವಿ
ಗ್ರಾಮ ಪಂಚಾಯತ್ ನಿಗದಿ ಪಡಿಸಿದ ಸ್ಥಳದಲ್ಲಿ ತ್ಯಾಜ್ಯ ವಿಲೇ ಮಾಡಲು ಕೆಲವೊಂದು ತೊಡಕುಗಳಿದ್ದು, ಅದನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಬಗ್ಗೆ ಬೆಳಪು ಗ್ರಾಮದಲ್ಲಿನ ಸರಕಾರಿ ಭೂಮಿಯನ್ನು ಗೊತ್ತುಪಡಿಸಿ, ಅಲ್ಲಿ ಮೂರು ಗ್ರಾಮಗಳನ್ನು ಸೇರಿಸಿಕೊಂಡು ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲು ಜಾಗ ನೀಡುವಂತೆ ಕಂದಾಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಬಡಾ ಗ್ರಾಮ ಪಂಚಾಯತ್ ಕೂಡಾ ಬೆಂಬಲ ನೀಡಿದೆ. ಈ ಬಗ್ಗೆ ಮುಂದಿನ ತಿಂಗಳು ಸಭೆ ನಡೆಸಿ ಚರ್ಚಿಸಲಿದ್ದೇವೆ
-ಕುಶಾಲಿನಿ, ಪಿಡಿಒ, ಬಡಾ ಗ್ರಾಮ ಪಂಚಾಯತ್ ಕಠಿನ ಕ್ರಮ
ಉಚ್ಚಿಲ – ಪಣಿಯೂರು ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಗ್ರಾಮದ ನೈರ್ಮಲ್ಯಕ್ಕೆ ಕುಂದುಂಟಾಗುತ್ತಿದೆ. ಕಸ ಎಸೆಯುವವರ ವಿರುದ್ಧ ಗ್ರಾ. ಪಂ. ಕಠಿನ ಕ್ರಮಕ್ಕೆ ಮುಂದಾಗಿದೆ. ಪಣಿಯೂರು ರಸ್ತೆಯ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ವಿಲೇ ಮಾಡಲಾಗಿದೆ. ಮುಂದೆ ಇಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಗೂಡಂಗಡಿ ಹಾಕಿಸಿ ಅವರ ಮೂಲಕ ತ್ಯಾಜ್ಯ ತಂದು ಸುರಿಯುವವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುವುದು.
-ರಫೀಕ್ ದೀವ್, ಸದಸ್ಯರು, ಬಡಾ ಗ್ರಾ. ಪಂ.