ಲಾಕ್‌ಡೌನ್ ಉಲ್ಲಂಘಿಸಿದರೆ ಕಠಿನ ಕ್ರಮ: ಎಸ್‌ಪಿ ಎಚ್ಚರಿಕೆ
Team Udayavani, Mar 24, 2020, 12:18 AM IST
ಮಡಿಕೇರಿ: ಸರಕಾರದ ಆದೇಶದಂತೆ ಕೊಡಗು ಜಿಲ್ಲೆ ಕೂಡ ಮಾ.31ರ ವರೆಗೆ ಲಾಕ್‌ಡೌನ್ ಆಗಲಿದ್ದು ನಿಯಮ ಉಲ್ಲಂಘಿಸುವವರ ವಿರುದ್ದ ಪೊಲೀಸ್ ಇಲಾಖೆ ಕಠಿನ ಕ್ರಮ ಕೈಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸುಮನ್ ಡಿ. ಪನ್ನೇಕರ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಅಂತಾರಾಜ್ಯ ಮತ್ತು ಅಂತರ್ ಜಿಲ್ಲೆಗಳನ್ನು
ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಒಟ್ಟು 13 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವ ಎಲ್ಲ ವಾಹನಗಳಿಗೆ ತಡೆ ಒಡ್ಡಲಾಗುತ್ತಿದ್ದು, ತುರ್ತು ಕೆಲಸ ಮತ್ತು ಅಗತ್ಯ ವಸ್ತುಗಳ ಪೂರೈಕೆಯ ವಾಹನಗಳನ್ನು ತಪಾಸಣೆಯೊಂದಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಶಾಲಾ ಮಕ್ಕಳನ್ನು ಜಿಲ್ಲೆಯ ಹೊರ ಭಾಗಗಳಿಂದ ಕರೆ ತರಲು ಪೊಲೀಸ್ ಇಲಾಖೆಯ ಮೂಲಕವೇ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ನಗರ, ಪಟ್ಟಣ ಪ್ರದೇಶದಲ್ಲಿ ಜನರು ಮನೆಗಳಿಂದ ಹೊರ ಬಂದು ಯಾವುದೇ ಕಾರಣಕ್ಕೂ ಗುಂಪು ಸೇರುವಂತಿಲ್ಲ. ಹೀಗಿದ್ದರೂ ಕೂಡ ಸಾರ್ವಜನಿಕರು ಅನಾವಶ್ಯಕವಾಗಿ ತಿರುಗಾಡುತ್ತಿರುವ ದೂರುಗಳು ಕೇಳಿ ಬಂದಿದೆ. ಆದ್ದರಿಂದ ಸಾರ್ವಜನಿಕರನ್ನು ಚದುರುಸಲು ಅನಿವಾರ್ಯವಾಗಿ ಬಲ
ಪ್ರಯೋಗಿಸಲು ಕೂಡ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೂ ಬಗ್ಗದಿದ್ದರೆ ಅತ್ಯಂತ ಕಠಿನ ಕ್ರಮಕ್ಕೂ ಮುಂದಾಗಲಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಇದನ್ನು ಅರಿತುಕೊಳ್ಳಬೇಕು ಎಂದು ಎಸ್‌ಪಿ ಮನವಿ ಮಾಡಿದರು.
2 ವರ್ಷ ಜೈಲು
ಕೆಲವು ವ್ಯಕ್ತಿಗಳಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಮನೆ ಸಂಪರ್ಕ ತಡೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಆದರೆ ಕೆಲವರು ಈ ಆದೇಶವನ್ನು ಉಲ್ಲಂಘಿಸುತ್ತಿದ್ದು, ಇಂತಹ ಒಂದು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಆದರೆ ಇಲಾಖೆಯ ಆದೇಶವನ್ನು ಉಲ್ಲಂ ಸುವ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲು ಮಾಡಲು ಅವಕಾಶವಿದ್ದು, ಇಂತಹ ವ್ಯಕ್ತಿಗೆ 2 ವರ್ಷ ಶಿಕ್ಷ ಹಾಗೂ ದಂಡವನ್ನೂ ವಿಧಿಸಲಾಗುತ್ತದೆ. ಹೀಗಾಗಿ ಮನೆಯಿಂದ ಹೊರ ಬಂದು ತೊಂದರೆಗೆ ಸಿಲುಕಿಕೊಳ್ಳಬೇಡಿ ಎಂದು ಎಸ್‌ಪಿ ಮನವಿ ಮಾಡಿದರು.