Advertisement

ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ

01:04 AM Dec 22, 2019 | Lakshmi GovindaRaj |

ಬೆಂಗಳೂರು: ಮತಬ್ಯಾಂಕ್‌ ರಾಜಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗಲಭೆಗೆ ಪ್ರಚೋದನೆ ನೀಡಿ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಪೌರತ್ವ ಸಂಶೋಧನೆ ಅಧಿನಿಯಮ-2019 ಒಂದು ಪರಿಚಯ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಆತಂಕ ಹುಟ್ಟಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವವರಿಗೆ ಕಾಯ್ದೆ ಕುರಿತ ಸಂಪೂರ್ಣ ಮಾಹಿತಿ ಇರುವ ಕೈಪಿಡಿ ತಲುಪಿಸ ಲಾಗುವುದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಯಾವುದೇ ವಿಷಯವನ್ನು ವಿರೋಧಿಸಲೇ ಬೇಕು ಎಂದು ವಿರೋಧಿಸುವುದು ಸರಿಯಲ್ಲ. ಪ್ರತಿಪಕ್ಷಗಳ ಇಂತಹ ನಡೆ ಸರಿಯಲ್ಲ. ನಿಜಕ್ಕೂ ಇದು ಉತ್ತಮವಾದ ತಿದ್ದುಪಡಿಯಾಗಿದ್ದು, ಯಾವಾಗಲೋ ಆಗಬೇಕಾಗಿರುವುದು ಈಗ ಆಗಿದೆ. ಬೇರೆ ದೇಶದಲ್ಲಿ ಕಿರುಕುಳ ಸಹಿಸಲಾಗದೆ ವಾಪಸ್‌ ಬಂದ ನಮ್ಮ ಜನರಿಗೆ ಈ ಕಾಯ್ದೆಯಿಂದ ರಕ್ಷಣೆ ಸಿಗಲಿದೆ. ಕಾನೂನನ್ನು ಕೈಗೆ ತೆಗೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕ ಆಸ್ತಿ-ಪಾಸ್ತಿ, ಜೀವ ಹಾನಿಯಾದರೆ ಸಹಿಸಲಾಗುವುದಿಲ್ಲ. ಯಾವುದೇ ಕಾರಣಕ್ಕೂ ಅಂತಹವರ ವಿರುದ್ಧ ಮೃದು ಧೋರಣೆ ತಾಳಲಾಗುವುದಿಲ್ಲ. ಶಾಂತಿ ಸುವ್ಯವಸ್ಥೆ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲ. ಕಿಡಿಗೇಡಿಗಳ ದುಷ್ಕೃತ್ಯ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕಾನೂನಿನ ಬಿಸಿ ಮುಟ್ಟಿಸಲಾಗುವುದು ಎಂದು ತಿಳಿಸಿದರು.

ನೆರೆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಆಗಲೂ ಅವರ ರಕ್ಷಣೆಗೆ ಪ್ರತಿಪಕ್ಷಗಳು ಹೋಗಲಿಲ್ಲ. ಭಾರತಕ್ಕೆ ಆ ಜನ ಅಕ್ರಮವಾಗಿ ವಲಸೆ ಬಂದಾಗ ಅವರನ್ನು ಓಟ್‌ ಬ್ಯಾಂಕ್‌ ಮಾಡಿಕೊಂಡರು. ಈಗ ಬಿಜೆಪಿ ಆ ಜನರಿಗೆ ಪೌರತ್ವ ನೀಡುತ್ತಿದೆ. ಇದರಲ್ಲಿ ಪ್ರತಿಪಕ್ಷಗಳು ಏನು ಹುಳುಕು ಕಂಡಿ ವೆಯೋ ಗೊತ್ತಿಲ್ಲ. ಕಾಯ್ದೆ ಕುರಿತು ಸರಿಯಾದ ಮಾಹಿತಿ ನೀಡದೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

ಕಾಯ್ದೆ ಜಾರಿಯಿಂದ ನಿರ್ದಿಷ್ಟ ಕೋಮಿಗೆ ಸೇರಿದ ಜನರನ್ನು ದೇಶದಿಂದ ಹೊರ ಹಾಕಲಾಗುವುದು, ದೇಶದಲ್ಲಿ ನೆಲೆಸಲು ದಾಖಲೆ ಒದಗಿಸಬೇಕು ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಜನರ ದಾರಿ ತಪ್ಪಿಸುತ್ತಿರುವ ನಾಯಕರಿಗೆ ಈ ಕೈಪಿಡಿ ತಲುಪಿಸಲಾಗಿದೆ. ತಿಳುವಳಿಕೆ ಇಲ್ಲದೆ ಬಾಯಿಗೆ ಬಂದಂತೆ ಹೇಳಿಕೆ ನೀಡುವವರಿಗೂ ಕೈಪಿಡಿ ತಲುಪಬೇಕು ಎಂದು ಹೇಳಿದರು.

ಮಂಗಳೂರು ಭೇಟಿಗೆ ಸರ್ಕಾರ ಅವಕಾಶ ಕೊಡಲಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿರುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆ ಸರ್ಕಾರ ನಡೆಸುವವರಿಗೆ ಇರುತ್ತದೆ. ಅಹಿತಕರ ಘಟನೆಗಳು ನಡೆದಾಗ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜ್ಯದ ಜನತೆಗೆ ಉತ್ತರಿಸಬೇಕಾಗುತ್ತದೆ.

ಹೀಗಾಗಿ ಅವರು ಅಲ್ಲಿಗೆ ಹೋಗಲೇಬೇಕು. ಪರಿಸ್ಥಿತಿ ತಿಳಿಯಾದ ಬಳಿಕ ಯಾವ ನಾಯಕರು ಬೇಕಾದರೂ ಅಲ್ಲಿಗೆ ಹೋಗಿ ಪರಿಸ್ಥಿತಿ ಅವಲೋಕಿಸಬಹುದು ಎಂದರು. ಮಾಜಿ ಸಚಿವ ಸಿ.ಎಂ.ಉದಾಸಿ, ಶಾಸಕ ಪ್ರೀತಂ ಗೌಡ, ವಕೀಲ ವಿವೇಕ್‌ ರೆಡ್ಡಿ, ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌. ಆನಂದ್‌, ಯುವಮೋರ್ಚಾದ ಕರುಣಾಕರ್‌ ಕಾಸ್ಲೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next