Advertisement

ಅನುಷ್ಠಾನ ತೃಪ್ತಿಕರವಾಗಿರದಿದ್ದರೆ ಕಠಿಣ ಕ್ರಮ

04:41 PM Sep 05, 2022 | Team Udayavani |

ಹುಬ್ಬಳಿ: ಮಹಾನಗರದ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಚುರುಕುಗೊಳ್ಳಬೇಕು. ಗುತ್ತಿಗೆ ಪಡೆದಿರುವ ಸಂಸ್ಥೆ ಸ್ಥಳೀಯ ಜನಪ್ರತಿನಿಧಿಗಳ ಸಲಹೆ-ಸಹಕಾರ ಪಡೆದು ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

Advertisement

ಖಾಸಗಿ ಹೋಟೆಲ್‌ನಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳ ಸಲಹೆ-ಸಹಕಾರ ಪಡೆದು ಜಲ ಸಂಗ್ರಹಾಗಾರ ಹಾಗೂ ಕೊಳವೆ ಮಾರ್ಗ ನಿರ್ಮಿಸಬೇಕು. ಪ್ರತಿ ತಿಂಗಳು ಯೋಜನೆ ಪ್ರಗತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅರ್ಪಣಾ ಭಾವದಿಂದ ಯೋಜನೆ ಜಾರಿಗೊಳಿಸಿ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆಗಳನ್ನು ಪಡೆಯಬೇಕು. ಇದು ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ಕೆಯುಐಡಿಎಫ್‌ಸಿ ಹಾಗೂ ಎಲ್‌ ಆ್ಯಂಡ್‌ ಟಿ ಸಂಸ್ಥೆಗಳು ಜಂಟಿಯಾಗಿ ನ್ಯಾಯಾಲಯಕ್ಕೆ ಉತ್ತರ ನೀಡಲಿ. ಆಡಳಿತ ವ್ಯವಸ್ಥೆ, ಹಣಕಾಸು ನಿರ್ವಹಣೆಯಲ್ಲಿ ವಿಕೇಂದ್ರೀಕರಣ ಮಾಡಿ ತ್ವರಿತತೆ ತರಬೇಕು. ಇದು ಯಾವುದೇ ಕಟ್ಟಡ ಕಾಮಗಾರಿಯಲ್ಲ. ಎಲ್ಲಾ ಸಾರ್ವಜನಿಕರಿಗೆ ಅಗತ್ಯವಾಗಿರುವ ಕುಡಿಯುವ ನೀರಿನ ಯೋಜನೆಯಾಗಿದೆ. ಗುತ್ತಿಗೆ ಸಂಸ್ಥೆಯು ತನ್ನ ಸಮಸ್ಯೆಗಳನ್ನು ನಿರ್ವಹಿಸಿಕೊಳ್ಳುವ ಸಾಮರ್ಥ್ಯದೊಂದಿಗೆ ಮುನ್ನಡೆಯಬೇಕು. ಜಿಲ್ಲಾಡಳಿತ, ಸರ್ಕಾರ ಈ ನಿಟ್ಟಿನಲ್ಲಿ ಸಹಕರಿಸಲಿದೆ. ಅನುಷ್ಠಾನ ತೃಪ್ತಿಕರವಾಗಿರದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂತಹ ಕ್ರಮಗಳಿಗೆ ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು.

ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಇದು ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಅನುಷ್ಠಾನದಲ್ಲಿ ಉದಾಸೀನ ಮನೋಭಾವ ತಾಳಬಾರದು. ಕೆಲವೆಡೆ 6ರಿಂದ 8 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ನಾಗರಿಕರಿಂದ ದೂರುಗಳು ಬರುತ್ತಿವೆ. ಕೆಯುಡಿಎಫ್‌ಸಿ ಹಾಗೂ ಎಲ್‌ ಆ್ಯಂಡ್‌ ಟಿ ಸಂಸ್ಥೆಗಳು ಪರಸ್ಪರ ಸಮನ್ವಯದೊಂದಿಗೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಗಣಿ ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ, ಕೈಮಗ್ಗ, ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಸಿ.ಎಂ.ನಿಂಬಣ್ಣವರ, ವಿಧಾನ ಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ್‌, ಮೇಯರ್‌ ಈರೇಶ ಅಂಚಟಗೇರಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್‌, ಕಾರ್ಯದರ್ಶಿ ಅಜಯ ನಾಗಭೂಷಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|ಆರ್‌. ವಿಶಾಲ್‌, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಚೋಳನ್‌, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಇನ್ನಿತರರಿದ್ದರು.

Advertisement

ನಗರಾಭಿವೃದ್ಧಿ ಇಲಾಖೆ ಮೇಲ್ವಿಚಾರಣೆ

ಮಹಾನಗರದಲ್ಲಿ ಅನುಷ್ಠಾನಗೊಳ್ಳಲಿರುವ ನಿರಂತರ ಯೋಜನೆ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿದೆ. ಕಾಮಗಾರಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುನ್ನಡೆಯುವಂತೆ ಸೂಚಿಸಲಾಗಿದೆ. ಯೋಜನೆಯ ಪ್ರತಿಯೊಂದು ಪ್ರಗತಿಯನ್ನು ನಗರಾಭಿವೃದ್ಧಿ ಇಲಾಖೆ ಮೇಲ್ವಿಚಾರಣೆ ನಡೆಸಲಿದೆ. ಪ್ರಗತಿ ವರದಿಯನ್ನು ಕೂಡ ಪಡೆಯುವಂತೆ ಸೂಚಿಸಲಾಗಿದೆ ಎಂದು ಸಭೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.

ನನ್ನನ್ನು ಯಾಕೆ ಕರೆಸಿದ್ದೀರಿ?

ನಿರಂತರ ಕುಡಿಯುವ ನೀರು ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರದ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ಕರೆದಿದ್ದರು. ಸಭೆಯಲ್ಲಿ ಕೆಲ ಗಂಭೀರ ಸಮಸ್ಯೆಗಳು, ಎಲ್‌ ಆ್ಯಂಡ್‌ ಟಿ ಕಂಪನಿ ನಡೆದುಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ವ್ಯಕ್ತವಾದವು. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಹೀಗಾಗಿ ಜನರು ನಮ್ಮನ್ನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಶಾಸಕರೊಬ್ಬರು ದೂರಿದರು. ಇಂತಹ ಹಲವು ಸಭೆಗಳನ್ನು ಮಾಡಿ ಸಾಕಷ್ಟು ಸೂಚನೆ ನೀಡಿದರೂ ಸುಧಾರಣೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಮಾತುಗಳಿಂದ ಕೊಂಚ ಗರಂ ಆದ ಮುಖ್ಯಮಂತ್ರಿಗಳು ಹಾಗಾದರೆ ಸಭೆಗೆ ನನ್ನನ್ಯಾಕೆ ಕರೆಸಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಜಾಲಾಡಿದ ಜನಪ್ರತಿನಿಧಿಗಳು

ಯೋಜನೆ ಅನುಷ್ಠಾನ ವಿಚಾರದಲ್ಲಿ ಉದ್ಭವವಾಗಿರುವ ಗೊಂದಲಗಳು ಕುರಿತು ಜನಪ್ರತಿನಿಧಿಗಳು ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ 15 ಜಲ ಸಂಗ್ರಹಾಗಾರಕ್ಕೆ ಸ್ಥಳ ಗುರುತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಎಲ್ಲಿ, ಯಾರ ಗಮನಕ್ಕೆ ತಂದು ಸ್ಥಳ ಗುರುತಿಸಿದ್ದಾರೆ ಎಂದು ಶಾಸಕರು ಗರಂ ಆದರು. ಆರಂಭದಿಂದಲೂ ಕಂಪನಿ ಇದೇ ಗೊಂದಲ ಮಾಡಿಕೊಂಡು ಬರುತ್ತಿದೆ ಎಂದು ಒಕ್ಕೊರಲಿನಿಂದ ಕಂಪನಿ ನಡೆ ಖಂಡಿಸಿದರು. ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿದ ರಸ್ತೆಯನ್ನು ಅಗೆದಿದ್ದಾರೆ. ಸ್ಥಳೀಯವಾಗಿ ಯಾರನ್ನು ಸಂಪರ್ಕಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಯಾವ ನಗರದಲ್ಲಿ ಕಲುಷಿತ ನೀರು ಬರುತ್ತಿದೆ, ಎಷ್ಟು ದಿನಕ್ಕೊಮ್ಮೆ ನೀರು ಬರುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಮುಖರ ಪ್ರತ್ಯೇಕ ಸಭೆ

ನಿರಂತರ ಕುಡಿಯುವ ನೀರು ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗಳು ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರಮುಖರ ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಕೆಯುಡಿಐಎಫ್‌ಸಿ, ಮಹಾನಗರ ಪಾಲಿಕೆ ಅಧಿಕಾರಿಗಳು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ಗದರಿದರು. ಹೀಗಾಗಿ ಬೇರೊಂದು ಸಭಾಂಗಣದಲ್ಲಿ ಜನಪ್ರತಿನಿಧಿಗಳು, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next