ಶಿರಹಟ್ಟಿ: ಶಿರಹಟ್ಟಿ ತಾಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರಳು ಸಾಗಾಣಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂತಹ ಕಾನೂನು ಬಾಹಿರವಾಗಿ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ನಡೆಸಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಮರಳು ಟಾಸ್ಕ್ಫೋರ್ಸ್ ಸಮಿತಿ ಸಭೆ ಹಾಗೂ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಇರುವಂತಹ ಅಧಿಕೃತ ಪರವಾನಗಿ ಪಡೆದಿರುವ ಪ್ರತಿಯೊಂದು ಸ್ಟಾಕ್ ಯಾರ್ಡ್‌ನಲ್ಲಿ ಸಿಸಿ ಟಿವಿ ಅಳವಡಿಸುವುದು ಕಡ್ಡಾಯವಿದ್ದು, ಇದನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಕಚೇರಿ ಮಾಹಿತಿ ಲಭ್ಯವಾಗುವ ರೀತಿಯಲ್ಲಿ ಎಕ್ಸೆಸ್ ಮಾಡಬೇಕು. ಯಾರು ಸಿಸಿ ಟಿವಿ ಅಳವಡಿಸಿಲ್ಲವೋ ಅವರೆಲ್ಲರೂ ಒಂದು ವಾರದೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
ಜೊತೆಗೆ ರಜಿಸ್ಟರ್ ನಿರ್ವಹಣೆ ಮಾಡಬೇಕು ಎಂದರು. ಬೌಂಡರಿ ಮಾರ್ಕಿಂಗ್ ಸಹ ನಿಯಮಾನುಸಾರ ಮಾಡಬೇಕು. ಸರಕಾರ ನಿಗದಿಪಡಿಸಿದ ರಾಜಸ್ವ ತುಂಬಿದ ನಂತರವೇ ಮರಳು ನೀಡಬೇಕು. ಜೀರೋದಲ್ಲಿ ಮರಳು ಸಾಗಿಸಿದ್ದು, ಸಿಕ್ಕರೆ ಅಂತಹ ಸಮಯದಲ್ಲಿಯೂ ವಾಹನದ ಜೊತೆಗೆ ಸ್ಟಾಕ್‌ಯಾರ್ಡ್‌ನವರಿಗೆ ತೊಂದರೆಯಾಗಲಿದೆ. ಆದ್ದರಿಂದ ಇಂತಹುದಕ್ಕೆ ಅವಕಾಶ ಕಲ್ಪಿಸದೇ ಸರಕಾರದ ನಿಯಮಾನುಸಾರ ಮರಳು ಮಾರಾಟ ಮಾಡಬೇಕು.
ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಕ್ರಮ: ರಾತ್ರಿ ಹಾಗೂ ಹಗಲು ವೇಳೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವುದಕ್ಕಾಗಿ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗುವುದು. ಹಗಲು ಮತ್ತು ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸಲು ರೋಟೇಶನ್ ಪದ್ಧತಿಯಲ್ಲಿ ಸಿಬ್ಬಂದಿ ನೇಮಿಸಿ ಇದಕ್ಕೆ ಕಡಿವಾಣ ಹಾಕಲಾಗುವುದು ಎಂದರು.
ಬ್ಲಾಸ್ಟಿಂಗ್‌ಗೆ ಅವಕಾಶವಿಲ್ಲ!: ಕಲ್ಲು ಗಣಿಗಾರಿಕೆ ಲೈಸನ್ಸ್ ಹೊಂದಿದವರು ಕಾನೂನು ಬಾಹಿರವಾಗಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಬ್ಲಾಸ್ಟಿಂಗ್ ಲೈಸನ್ಸ್ ಹೊಂದಿದವರಿಂದ ಮಾತ್ರ ಬ್ಲಾಸ್ಟಿಂಗ್ ಮಾಡಬೇಕು. ಯಾವುದೇ ಕಾರಣಕ್ಕೂ ಬ್ಲಾಸ್ಟಿಂಗ್ ಸಾಮಗ್ರಿಗಳನ್ನು ಸ್ಟಾಕ್ ಇಟ್ಟುಕೊಳ್ಳಬಾರದು. ಕಾನೂನು ಉಲ್ಲಂಘನೆ ಆಗದಂತೆ ಷರತ್ತುಗಳಿಗನುಸಾರವಾಗಿ ಕಲ್ಲು ಗಣಿಗಾರಿಕೆ ನಡೆಸಬೇಕೆಂದು ಹೇಳಿದರು. ಸಭೆಗೆ ಬಾರದವರಿಗೆ ನೋಟಿಸ್: ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿಯ ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸಭೆಗೆ ಹಾಜರಾಗಿರುವುದಕ್ಕೆ ಗರಂ ಆದ ಎಸಿ ಹತ್ತಿರದಲ್ಲಿಯೇ ಇದ್ದಂತ ತಹಶೀಲ್ದಾರವರಿಗೆ ಅ ಧಿಕಾರಿಗಳೇಕೆ ಹಾಜರಾಗಿಲ್ಲ ಅವರಿಗೆ ನೋಟಿಸ್ ನೀಡಿದೆಯೇ? ಎಂದು ಪ್ರಶ್ನಿಸಿದರು. ಯಾವ ಯಾವ ಇಲಾಖೆಯೆ ಅಧಿಕಾರಿಗಳು ಗೈರಾಗಿದ್ದಾರೆಯೋ ಅವರಿಗೆಲ್ಲ ನೋಟಿಸ್ ಜಾರಿ ಮಾಡಿ, ಕಾಟಾಚಾರಕ್ಕೆ ಸಭೆಯನ್ನು ನಡೆಸುತ್ತಿದೆಯಾ? ಎಂದು ಗರಂ ಆಗಿ ನೋಟಿಸ್ ನೀಡಿದ ಪ್ರತಿಯನ್ನು ನನಗೆ ತಲುಪಿಸುವಂತೆ ಸೂಚಿಸಿದರು.
ತಹಶೀಲ್ದಾರ್ ಯಲ್ಲಪ್ಪ ಗೋಣೇಣ್ಣನವರ, ತಾಪಂ ಇಒ ಡಾ| ಎನ್.ಎಚ್. ಓಲೇಕಾರ, ಸಮಾಜ ಕಲ್ಯಾಣಾ ಧಿಕಾರಿ ಎಸ್.ಬಿ. ಹರ್ತಿ, ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ್, ಪಿಡಿಒಗಳು ಉಪಸ್ಥಿತರಿದ್ದರು.