ಹುಮನಾಬಾದ: ಪ್ರಸಕ್ತ ಸಾಲಿನಲ್ಲಿ ಶಾಲೆಗಳ ಮಾನ್ಯತೆ ನವೀಕರಣ ಮಾಡುವಲ್ಲಿ ಯಾವುದೇ ಭ್ರಷ್ಟಾಚಾರ ನಡೆದರೆ ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ ಜರುಗಿಸುವುದಾಗಿ ಕಲಬುರಗಿ ಶಿಕ್ಷಣ ಇಲಾಖೆಯ ಎಡಿಎಂ ವಿಭಾಗದ ಜಂಟಿ ನಿರ್ದೇಶಕ ವಿಜಯಕುಮಾರ ಜಿ.ಎಮ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು, ಶಾಲೆಗಳ ಮಾನ್ಯತೆಗೆ ಸಂಬಂಧಿಸಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಲೋಪ ಎಸಗಿರುವ ಮಾಹಿತಿ ಕೇಳಿ ಬಂದರೆ, ಅಂತಹ ಶಾಲೆಗಳ ಕಡತಗಳು ಕಚೇರಿಗೆ ತರಿಸಿ ಮರು ಪರಿಶೀಲನೆ ನಡೆಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ಸೇರಿದಂತೆ ಸರ್ಕಾರದ ನಿಯಮಗಳಂತೆ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದರು.
ಆರ್.ಟಿ.ಇ ಯೋಜನೆ: ಅಡಿಯಲ್ಲಿ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳು ಯೋಜನೆಯ ನಿಯಮಗಳು ಪಾಲನೆ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರ್.ಟಿ.ಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಸರ್ಕಾದಿಂದ ನಿಗದಿತ ಅನುದಾನ ನೀಡಲಾಗುತ್ತಿದೆ. ಸ್ಥಳಿಯ ಅಧಿಕಾರಿಗಳು ಅಂತಹ ಶಾಲೆಗಳಿಗೆ ಖುದ್ದು ಭೇಟಿ ನೀಡಿ ನಿಯಮ ಅನುಸಾರ ಇರಬೇಕಾದ ಎಲ್ಲಾ ಸೌಲಭ್ಯ ಹಾಗೂ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ ವರದಿ ಪಡೆದುಕೊಳ್ಳಬೇಕು. ಸಮಸ್ಯೆ ಇರುವ ಶಾಲೆಗಳ ಪಟ್ಟಿ ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಸರ್ಕಾರದ ನಿಯಮ ಪಾಲಿಸದ ಶಾಲೆಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಅನಿರೀಕ್ಷಿತ ಭೇಟಿ ನೀಡಿ
ಹುಮನಾಬಾದ ಪಟ್ಟಣದ ಸರ್ಕಾರಿ ಕನ್ಯಾ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ವಿಜಯಕುಮಾರ್ ಜಿ.ಎಂ ವಿವಿಧ ವರ್ಗಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಪರಿಶೀಲನೆ ನಡೆಸಿದರು.