ರಾಯಚೂರು: ಯಾವುದೇ ನಿಯಮ ಪಾಲಿಸದೆ ನಿರ್ಮಿಸಿರುವ ಅಕ್ರಮ ಬಡಾವಣೆಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಯಾಪಚೆಟ್ಟು ಗೋಪಾಲರೆಡ್ಡಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.ರಸ್ತೆ, ವಿದ್ಯುತ್, ಉದ್ಯಾನ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಕಲ್ಪಿಸದೆ ಅಕ್ರಮವಾಗಿ ನಿರ್ಮಿಸಲಾದ ಬಡಾವಣೆಗಳ ವಿವರ ಪಡೆಯಲಾಗುವುದು. ಆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸದಸ್ಯರ ಸಹಭಾಗಿತ್ವದಲ್ಲಿ ಕೆಲಸ ಮಾಡಲಾಗುವುದು. ನಗರಕ್ಕೆ ಏನೆಲ್ಲ ಅಗತ್ಯ ಸೌಲಭ್ಯ ಕಲ್ಪಿಸಬಹುದು ಎಂಬ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಕೊರೊನಾ ವೈರಸ್‌ನಿಂದ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ರಿಂಗ್ ರಸ್ತೆ ನಿರ್ಮಾಣ ತಡವಾಗುತ್ತಿದೆ. ಮುಂಬರುವ ದಿನಗಳಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳಿಗೆ ಚುರುಕು ನೀಡಲಾಗುವುದು ಎಂದು ಹೇಳಿದರು.
ಮಾವಿನ ಕೆರೆ ಅಭಿವೃದ್ಧಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ 10 ಕೋಟಿ ರೂ. ನೀಡಿದೆ. ಈ ಹಣದಲ್ಲಿ ಸುಂದರವಾಗಿ ಕೆರೆ ನಿರ್ಮಾಣ ಮಾಡಲಾಗುವುದು. ಅದರ ಜತೆಗೆ ನಗರದಲ್ಲಿರುವ ಉದ್ಯಾನಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎಂಬ ಯಾವುದೇ ಭಿನ್ನಭಿಪ್ರಾಯಗಳಿಲ್ಲ. ಪಕ್ಷಕ್ಕಾಗಿ ದುಡಿಯುವ ಎಲ್ಲ ಕಾರ್ಯಕರ್ತರು ಸಮಾನರು. ಎಲ್ಲರ ಒಮ್ಮತದ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕ, ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಹಾಗೂ ನಮ್ಮ ಸಹಕಾರ ಸದಾ ಇರುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಎ. ಪಾಪಾರೆಡ್ಡಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಜಲ್ದಾರ, ಆರ್‌ಡಿಎ ನೂತನ ಸದಸ್ಯರಾದ ಶೇಖರ ವಾರದ, ಭೀಮಣ್ಣ ಮಂಚಾಲಿ, ಎ.ಚಂದ್ರಶೇಖರ ಮಡಿವಾಳ, ಜಿ.ವಾಣಿಶ್ರೀ ಇದ್ದರು.