ಮೈಸೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇವಿಎಂ, ವಿವಿ ಪ್ಯಾಟ್, ಮಾದರಿ ನೀತಿ ಸಂಹಿತೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು, ಈ ಸೌಂದರ್ಯ ಹಾಳಾಗದಂತೆ ಮುಕ್ತ, ನ್ಯಾಯಸಮ್ಮತ, ನಿರ್ಭೀತ, ಪಾರದರ್ಶಕ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ವ್ಯಾಟ್ಸ್‌ಆಪ್, ಫೇಸ್‌ಬುಕ್ ಇತ್ಯಾದಿಗಳಲ್ಲಿ ವ್ಯಕ್ತಿ, ಜಾತಿ, ಧರ್ಮದ ಆಧಾರದಲ್ಲಿ ಪ್ರಚಾರ ಮಾಡುವಂತಿಲ್ಲ. ಒಂದೊಮ್ಮೆ ಪ್ರಚಾರ ಮಾಡಿದರೆ ಅಂಥವರ ವಿರುದ್ಧ ಸೈಬರ್ ಕ್ರೈಂ ಪೊಲೀಶರು ಕ್ರಮಕೈಗೊಳ್ಳಲಿದ್ದಾರೆ.
ಮುಖ್ಯವಾಗಿ ಸರ್ಕಾರದ ಹಣ ವ್ಯಯ ಮಾಡಿ ಜಾಹೀರಾತು ನೀಡುವುದು, ಸರ್ಕಾರಿ ಜಾಗ ಬಳಕೆ, ಆಡಳಿತಯಂತ್ರದ ದುರುಪಯೋಗ, ಅನುಮತಿ ಇಲ್ಲದೆ ಖಾಸಗಿ ಜಾಗದಲ್ಲಿ ಸಭೆೆ-ಸಮಾರಂಭ ಆಯೋಜಿಸಬಾರದು ಎಂದು ಎಚ್ಚರಿಸಿದ ಅವರು, ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಹ್ಯಾಕ್ ಮಾಡಲಾಗದು: ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಮತಯಂತ್ರ ಬಳಸಿದರೆ ಯಾರಿಗೋ ಹಾಕಿದ ಮತ ಇನ್ಯಾರಿಗೋ ಹೋಗುತ್ತದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿವಿ ಪ್ಯಾಟ್ ಬಳಸಲಾಗುತ್ತಿದೆ.
ವಿವಿ ಪ್ಯಾಟ್‌ನ ಬಳಕೆಯಿಂದ ಮತದಾರರು ಯಾರಿಗೆ ಮತ ಹಾಕಿದ್ದಾರೆ ಎಂಬುದು 7 ಸೆಕೆಂಡ್‌ಗಳ ಕಾಲ ಪ್ರದರ್ಶನವಾಗುತ್ತದೆ. ಬಳಿಕ ಮತದಾನದ ಸ್ಲಿಪ್ ಅಲ್ಲಿಯೇ ಉಳಿದುಕೊಳ್ಳುತ್ತದೆ. ಆದಾಗ್ಯೂ ಮತದಾರರು ಒಂದು ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದಾಗ ಬೇರೆಯವರಿಗೆ ಮತ ಹೋಗಿದೆ ಎಂದು ಆರೋಪಿಸಿದರೆ ಅವರಿಗೆ ಮರು ಮತದಾನಕ್ಕೆ ಅವಕಾಶವಿರುತ್ತದೆ.
ಆದರೆ ಮರು ಮತದಾನದಲ್ಲಿ ಮತದಾರ ಚಲಾಯಿಸಿದ ಅಭ್ಯರ್ಥಿಗೆ ಮತ ದಾಖಲಾಗಿದ್ದರೆ ಅವರನ್ನು ಬಂಧಿಸಿ ಕ್ರಮವಹಿಸಲಾಗುವುದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್.ಮತ್ತಿತರರು ಹಾಜರಿದ್ದರು.