Advertisement

ಕನ್ನಡಿಗರ ನಿಂದನೆಗೆ ಕಠಿನ ಕ್ರಮ: ಸ್ತುತ್ಯರ್ಹ ನಿಲುವು

11:19 PM Nov 01, 2024 | Team Udayavani |

“ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ಹೀಯಾಳಿಸುವುದು ನಾಡದ್ರೋಹ ಎಂದು ಪರಿಗಣಿಸಿ ಅಂತಹ ಕಿಡಿಗೇಡಿಗಳ ವಿರುದ್ಧ ಸರಕಾರ ಕಠಿನ ಕ್ರಮಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯ “ಭಾಷೆ’ಯಲ್ಲಿ ಹೇಳಿದ್ದಾರೆ.

Advertisement

ಮುಖ್ಯಮಂತ್ರಿಯವರ ಈ ಮಾತು ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯನ್ನು ಸಾರ್ಥಕಗೊಳಿಸುವ ಹೆಜ್ಜೆಗಳ ಪೈಕಿ ಅಗ್ರೇಸರ ಎನಿಸಲಿದೆ. ಒಬ್ಬ ಮುಖ್ಯಮಂತ್ರಿಯ ಮಾತಲ್ಲ; ಬದಲಿಗೆ ಏಳು ಕೋಟಿ ಕನ್ನಡಿಗರ ಮಾತಾಗಿದೆ.

ಆಧುನಿಕ ಪ್ರಪಂಚದಲ್ಲಿ ಸಾಮಾಜಿಕ ಜಾಲತಾಣ ಅನ್ನುವುದು ಒಂದು ರೀತಿಯಲ್ಲಿ ಲಂಗು-ಲಗಾಮು ಇಲ್ಲದ ಕುದು ರೆಯಂತಾಗಿದೆ. ಅದಕ್ಕೆ ಅಂಕೆಯೂ ಇಲ್ಲ, ಸೀಮೆಯೂ ಇಲ್ಲ. ಅಲ್ಲಿ ಬಳಸಲಾಗುವ ಭಾಷೆ, ಅಹಂ. ಅಲ್ಪ ಜ್ಞಾನ, ಸಣ್ಣತನಗಳು ರಾರಾಜಿಸುತ್ತಿರುತ್ತವೆ. ಅದರಲ್ಲಿ ಬರುವ ಬೇರೆ ವಿಷಯಗಳು, ವ್ಯಕ್ತವಾಗುವ ಅಭಿಪ್ರಾಯಗಳು ಯಾವಾಗ, ಏನು ಅಪಾಯ ತಂದೊಡ್ಡುತ್ತವೆ ಎಂದು ಊಹೆ ಮಾಡಲು ಸಾಧ್ಯವಿಲ್ಲ. ಅದರಂತೆ ಕನ್ನಡ ಭಾಷೆ, ಕನ್ನಡಿಗರ ಬಗ್ಗೆ ಹೀಯಾಳಿಸುವ, ಕೆರಳಿಸುವ, ಭಾವನೆಗಳಿಗೆ ಧಕ್ಕೆತರುವ ಕೆಲಸ ಇತ್ತೀ ಚಿ ನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಈ ಕೂಗುಮಾರಿಗಳಿಗೆ ಒಂದು ಕಠಿನ ಸಂದೇಶ ರವಾನೆಯಾ ಗಲೇಬೇಕಿತ್ತು. ಅದಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಅಡಿ ಇಟ್ಟಿರುವುದು ಸ್ವಾಗತಾರ್ಹ.

ಭಾಷೆ ಅನ್ನುವುದು ಕೇವಲ ಆಡುವ, ಬರೆಯವ ಪದಗಳು ಅಲ್ಲ, ಅದು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಒಟ್ಟು ಅಸ್ಮಿತೆ. ಸಂಸ್ಕೃತಿ- ಸಂಸ್ಕಾರಗಳ ಪ್ರತೀಕ. ಭಾಷೆ ಅಭಿಮಾನದ ಸಂಕೇತ. ಆಯಾ ಸ್ಥಳೀಯ ಭಾಷೆ ಅಲ್ಲಿನ ವಾಸಿಗಳಿಗೆ ತಾಯಿ ನುಡಿ, ಮಾತೃಭಾಷೆ. ಒಂದೊಮ್ಮೆ ಭಾಷೆಯನ್ನು ಅಥವಾ ಆ ಭಾಷೆ ಮಾತನಾಡುವವರನ್ನು ನಿಂದಿಸುವುದು ನಾಡಿಗೆ ದ್ರೋಹ ಹಾಗೂ ಹೆತ್ತತಾಯಿಗೆ ಅಪಮಾನ ಮಾಡಿದಂತೆ. ಈ ಅರ್ಥದಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವುದು ನಾಡದ್ರೋಹ ಎಂದು ಸಿಎಂ ಹೇಳಿರುವುದು ಸರಿ ಇದೆ.

ಅಲ್ಲದೆ ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಏಕತೆಗೆ ಧಕ್ಕೆ ತರುವುದು, ಭಾವನೆಗಳನ್ನು ಕೆರಳಿಸುವುದು ದೇಶದ್ರೋಹದ ಕೆಲಸವಾಗಲಿದೆ. ಅಂತಹ ದೇಶದ್ರೋಹಕ್ಕೆ ಕಠಿನ ಕಾನೂನುಗಳು ಇವೆ. ಅದೇ ರೀತಿ ಒಂದು ಭೌಗೋಳಿಕ ಪ್ರದೇಶದ ಸ್ಥಳೀಯ ಭಾಷೆಯನ್ನು ಮತ್ತು ಆ ಭಾಷೆ ಮಾತನಾ ಡುವವರನ್ನು ಮತ್ತೂಂದು ಭೌಗೋಳಿಕ ಪ್ರದೇಶದವರು ಹೀಯಾಳಿ ಸುವುದರಿಂದ ರಾಜ್ಯ-ರಾಜ್ಯಗಳ ನಡುವೆ ಘರ್ಷಣೆ ಉಂಟಾಗುತ್ತದೆ, ಎರಡೂ ರಾಜ್ಯಗಳ ನಡುವಿನ ಸಾಮಾಜಿಕ ಮತ್ತು ವಾಣಿಜ್ಯ ಸಂಬಂಧಗಳು ಹದಗೆಡುತ್ತವೆ.

Advertisement

ಕರ್ನಾಟಕದಲ್ಲಿ ಮೊದಲಿಂದಲೂ ಭಾಷಾ ಅನ್ಯೋನ್ಯತೆ ಮತ್ತು ಸಾಮರಸ್ಯ ಇದೆ. ಕನ್ನಡಿಗರು ಹೃದಯ ವೈಶಾಲಿಗಳು. ನೆರೆಯ ಆಂಧ್ರ, ತಮಿಳುನಾಡು, ಕೇರಳ ಭಾಷಿಕರು ಹಲವು ತಲೆಮಾರುಗಳಿಂದ ಇಲ್ಲಿ ವಾಸವಾಗಿದ್ದಾರೆ. ಇವರ ವಿಚಾರದಲ್ಲಿ ಭಾಷಾ ವೈಷಮ್ಯ ಅಷ್ಟಾಗಿ ಕೇಳಿ ಬರುವುದಿಲ್ಲ. ಆದರೆ ಕರ್ನಾಟಕ ಬಹುರಾಷ್ಟ್ರೀಯ ಕಂಪೆನಿಗಳ ನೆಚ್ಚಿನ ತಾಣವಾದ ಮೇಲೆ ಉತ್ತರ ಭಾರತದ ಹಿಂದಿ ಭಾಷಿಕರ ವಲಸೆ ಹೆಚ್ಚಾಯಿತು. ಹಿಂದಿ ಹೇರಿಕೆ, ಹಿಂದಿ ಹಾವಳಿ ಎಂಬ ಕೂಗು ಆಗಾಗ ಕೇಳಿ ಬರಲು ಆರಂಭವಾಯಿತು. ಅದಕ್ಕೆ ಸಾಕ್ಷಿ ಎಂಬಂತೆ ಇತ್ತಿಚಿನ ವರ್ಷಗಳಲ್ಲಿ ಕನ್ನಡ, ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನದ ಮಾತುಗಳು ಹೆಚ್ಚಾದವು. ಅದಕ್ಕೊಂದು ಕಡಿವಾಣ ಹಾಕುವ ಕಾಲ ಬಂದಿದ್ದು, ಮುಖ್ಯಮಂತ್ರಿಯವರ “ಕಠಿನ ಕ್ರಮದ’ ಮಾತು ಇಷ್ಟಕ್ಕೆ ಸಿಮೀತವಾಗದೆ, ಕಾರ್ಯರೂಪಕ್ಕೂ ಬರಬೇಕು. ಕನ್ನಡಿಗರ ತಾಳ್ಮೆಯನ್ನೂ ಯಾರಾದರೂ ದೌರ್ಬಲ್ಯವೆಂದು ಭಾವಿಸಿದರೆ ಮೂರ್ಖತನ ಆದೀತು.

Advertisement

Udayavani is now on Telegram. Click here to join our channel and stay updated with the latest news.

Next