ತುಮಕೂರು: ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆಗೆ ಮಹಾನಗರ ಪಾಲಿಕೆ ಮುಂದಾಗಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಡೇ-ನಲ್ಮ್ ಯೋಜನೆಯ ಬೀದಿ ವ್ಯಾಪರಸ್ತರಿಗೆ ಬೆಂಬಲ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ-2014ಹಾಗೂ ನಿಯಮಗಳು 2019ರಂತೆ ಬೀದಿ ವ್ಯಾಪಾರಿಗಳಿಗೆ ಪುನರ್‌ವಸತಿ ಕಲ್ಪಿಸಿ ಜೀವನೋಪಾಯವನ್ನು ಸಂರಕ್ಷಣೆ ಮಾಡುವಂತ ಕೆಲಸವನ್ನು ನಗರಪಾಲಿಕೆ ಮಾಡಬೇಕು ಎಂದರು.
ಬೀದಿಬದಿ ವ್ಯಾಪಾರಿಗಳ ವಲಯಗಳ ಗುರುತು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈಗಾಗಲೇ 3 ವೆಂಡಿಂಗ್ ಝೋನ್ ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಕೆಲಸವಾಗುತ್ತಿದ್ದು ಸಮೀಕ್ಷೆಯಲ್ಲಿ ಸಿಗದಿರುವ ಬೀದಿವ್ಯಾಪಾರಿಗಳನ್ನು ಗುರುತಿಸಲು ನಿಯಮಾನುಸಾರ ಸಮೀಕ್ಷೆಯನ್ನು ಕಾಲಕಾಲಕ್ಕೆ ಕೈಗೊಳ್ಳಬೇಕು ಈ ಹಿಂದೆ ನೀಡಿರುವ 1502 ಗುರುತಿನ ಚೀಟಿಗಳನ್ನು ಕಾಯಿದೆಯಲ್ಲಿ ಉಲ್ಲೇಖೀಸಿರುವಂತೆ ನವೀಕರಣ ಮಾಡಬೇಕು ಎಂದು ಹೇಳಿದರು. ಬೀದಿ ವ್ಯಾಪಾರಿಗಳಿಗೆ ಪೋಲಿಸ್‌ಇಲಾಖೆಯಿಂದ ಆಗುತ್ತಿರುವ ಪಿಟ್ಟಿ ಕೇಸ್‌ಗಳನ್ನು ಈ ಕೋವಿಡ್ ಸಂದರ್ಭದಲ್ಲಿ ಹಾಕದಂತೆ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಎಂ.ಜಿ ರಸ್ತೆ ಬೀದಿ ವ್ಯಾಪಾರಿಗಳಿಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಮುಗಿಯುವವರೆಗೆ ಸಬ್ ರಸ್ತೆಗಳಲ್ಲಿ ಪುನರ್ ವಸತಿ ಕಲ್ಪಿಸಬೇಕು. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿರುವ ಬೀದಿ ವ್ಯಾಪಾರಸ್ತರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಲು ಸ್ಥಳೀಯ ಸಂಸ್ಥೆಗಳು ಹೆಚ್ಚು ಪ್ರಗತಿಯನ್ನು ಸಾಧಿಸಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭ, ನಗರಪಾಲಿಕೆ ಆಯುಕ್ತೆ ರೇಣುಕಾ, ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯ ಎನ್.ಕೆ ಸುಬ್ರಮಣ್ಯ, ಎ.ನರಸಿಂಹಮೂರ್ತಿ ವಾಸೀಂ ಅಕ್ರಂ, ಮುತ್ತುರಾಜು, ಜಗದೀಶ್, ಲೀಡ್ ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ನಗರ ಪೋಲಿಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್, ನಗರಪಾಲಿಕೆ ವೈದ್ಯಾಧಿಕಾರಿ ಡಾ.ನಾಗೇಶ್, ಸಮುದಾಯ ಸಂಘಟನಾ ಅಧಿಕಾರಿ ಹಾಗೂ ನಗರಪಾಲಿಕೆ ಸದಸ್ಯ ಸೈಯದ್‌ನಯಾಜ್ ಇದ್ದರು.