Advertisement

ಬೀದಿದೀಪ, ಟ್ರಾಫಿಕ್‌ ಇನ್ಮುಂದೆ ಆನ್‌ಲೈನ್‌ ನಿರ್ವಹಣೆ

06:39 PM Nov 05, 2019 | Suhan S |

ತುಮಕೂರು: ಸಮಗ್ರ ಕಟ್ಟಡ ನಿರ್ವಹಣೆ, ನಗರ ಸಂಪರ್ಕ ಸಾರಿಗೆ, ತ್ಯಾಜ್ಯ ನಿರ್ವಹಣೆ, ಬೀದಿದೀಪ, ಇಂಟರ್‌ನೆಟ್‌, ಮೂಲಸೌಕರ್ಯ, ಡೇಟಾ ಸೆಂಟರ್‌ ನಿಯಂತ್ರಣ ಮತ್ತು ನಿರ್ವಹಣೆ ಇನ್ನೂ ಮುಂದೆ ಆನ್‌ ಲೈನ್‌ ಮೂಲಕ ನಡೆಯಲಿದೆ.

Advertisement

ಹೌದು… ಇಂತಹದೊಂದು ಯೋಜನೆ ಸ್ಮಾರ್ಟ್‌ ಸಿಟಿಯಡಿ ಆರಂಭವಾಗಲಿದ್ದು, ಹೈಟೆಕ್‌ ಇಂಟಿ ಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ (ನಿಯಂತ್ರಣ ಕೇಂದ್ರ) ಪ್ರಾರಂಭಿಸಲು ನೀಲನಕ್ಷೆ ರೂಪಿಸಲಾಗಿದೆ. ನಾಗರಿಕರ ಸುರಕ್ಷತೆ ಹಾಗೂ ನೀರು, ವಿದ್ಯುತ್‌ ಪೂರೈಕೆ, ಸಂಚಾರ ವ್ಯವಸ್ಥೆ, ವಾಯು ಮಾಲಿನ್ಯ ಮಾಪನ ಸೇರಿ ವಿವಿಧ ಸೌಲಭ್ಯ ಒಂದೇ ಸೂರಿನಡಿ ಸಿಗಲಿದೆ. ನಗರದ ಸುರಕ್ಷತೆಗಾಗಿ ಹೈಟೆಕ್‌ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ತೆರೆದು ವಿವಿಧ ಸೌಲಭ್ಯಗಳ ಉಸ್ತುವಾರಿ ಯನ್ನೂ ವಹಿಸುವ ಹೆಜ್ಜೆಯನ್ನಿಟ್ಟಿದೆ.

12 ಕೋಟಿ ರೂ. ವೆಚ್ಚ: ಕೇಂದ್ರವನ್ನು ಜಿಐಎಸ್‌ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮೂಲಕ ನಿರ್ವಹಿಸ ಲಾಗುವುದು. ಮಹಾನಗರ ಪಾಲಿಕೆ ಟೌನ್‌ ಹಾಲ್‌ ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌(ಐಸಿಎಂಸಿಸಿ) 2020ರೊಳಗೆ 12 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ಯಾಲಯ ಆವರಣದ 1918 ಚದರ ಮೀಟರ್‌ ಜಾಗದಲ್ಲಿ 3 ಅಂತಸ್ತಿನ ಶಾಶ್ವತ ಕಟ್ಟಡ ನಿರ್ಮಾಣವಾಗಲಿದೆ.

ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಮಾರ್ಗದರ್ಶನದಲ್ಲಿ ಯೋಜನಾ ನಿರ್ವಹಣಾ ಸಲಹೆಗಾರ ಸಂಸ್ಥೆ ಐಪಿಇ ಗ್ಲೋಬಲ್‌ ಲಿಮಿಟೆಡ್‌ ಹಾಗೂ ಗ್ರಾಂಟ್‌ ಥಾನನ್‌ ಎಲ್‌ಎಲ್ಪಿ ಮತ್ತು ಆರ್ಯವರ್ತ ಡಿಸೈನ್‌ ಕನ್ಸಲ್ಟೆಂಟ್ಸ್‌ನ ನುರಿತ ತಜ್ಞರ ತಂಡ ಯೋಜನೆ ಸಿದ್ಧಪಡಿಸಿದೆ.

ಸಂಚಾರ ವ್ಯವಸ್ಥೆ ಮೇಲೆ ಹದ್ದಿನ ಕಣ್ಣು: ಕೇಂದ್ರ ದಲ್ಲಿ ವಿಶ್ವದರ್ಜೆಯ ತಂತ್ರಾಂಶ ಸಹಿತ ಎಲ್ಲ ಬಗೆಯ ಉಪಕರಣ ಅಳವಡಿಸಲಾಗುವುದು. ನಗರದ ಸುಮಾರು 47,000 ಬೀದಿ ದೀಪ ನಿಯಂತ್ರಣ ವ್ಯವಸ್ಥೆ ಇರಲಿದೆ. ಇದರಿಂದ ವಿದ್ಯುತ್‌ ಉಳಿಸಲು ಸಾಧ್ಯವಿದೆ. ಸಂಚಾರ ವ್ಯವಸ್ಥೆ ಮೇಲೂ ಹದ್ದಿನ ಕಣ್ಣಿಡಲಿದೆ. ಇದಕ್ಕಾಗಿ ನಗರದ ವೃತ್ತಗಳಲ್ಲಿ 360 ಡಿಗ್ರಿ ತಿರುಗುವ ಒಟ್ಟು 300 ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ.

Advertisement

ಪ್ರಥಮ ಹಂತದಲ್ಲಿ ನಗರದ ಪ್ರಮುಖ 6 ವೃತ್ತಗಳಲ್ಲಿ 63 ಕ್ಯಾಮರಾ ಈಗಾಗಲೇ ಅಳವಡಿಸ ಲಾಗಿದೆ. ನಿಯಮ ಉಲ್ಲಂಘಿಸಿದ ವಾಹನ ಚಾಲಕ ರನ್ನು ಕೂಡಲೇ ಪತ್ತೆ ಮಾಡಿ ನೋಟಿಸ್‌ ರವಾನಿಸಲು ಅವಕಾಶವಿದೆ. ಕೇಂದ್ರ ವ್ಯಾಪ್ತಿಗೆ ಬಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಒಳಪಡಿಸಲಾಗುವುದು. ಇದರಿಂದ ಸ್ಮಾರ್ಟ್‌ ಬಸ್‌ ನಿಲ್ದಾಣಗಳಲ್ಲಿ ರಿಯಲ್‌ ಟೈಮ್‌ ಫ‌ಲಕಗಳು ಬೆಳಗಲಿದ್ದು, ಬಸ್‌ರೂಟ್‌ ನಂಬರ್‌, ಸಮಯ, ಪ್ಸ್ತು ತ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ನೀರು ಸರಬರಾಜು ಮೇಲೆ ನಿಗಾ: ಕೇಂದ್ರವು ನೀರು ಸರಬರಾಜು ವ್ಯವಸ್ಥೆ ಮೇಲೂ ನಿಗಾ ಇರಿಸಲಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಕೆರೆಗಳಿಂದ ನೀರು ಶುದ್ಧೀಕರಣ ಘಟಕಕ್ಕೆ ಎಷ್ಟು ಪ್ರಮಾಣದಲ್ಲಿ ಬಂದಿದೆ. ಪ್ರಮುಖ ನೀರಿನ ಟ್ಯಾಂಕ್‌ ಗಳಿಗೆ ಸರಬರಾಜಾದ ನೀರಿನ ಪ್ರಮಾಣ, ಎಷ್ಟು ಪ್ರಮಾಣದ ನೀರಿನ ಸೋರಿಕೆ ಅಥವಾ ಕಳವು ಆಗುತ್ತಿದೆ ಎಂಬುದರ ಮಾಹಿತಿ ತಿಳಿಯಲಿದೆ. ಅಲ್ಲದೆ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಜಿಪಿಎಸ್‌ ಅಳವಡಿಸಿ ಕಸ ಸಂಗ್ರಹದ ಮೇಲೆ ನಿಗಾ ವಹಿಸುವುದು ಸೇರಿ ಮತ್ತಿತರ ವ್ಯವಸ್ಥೆ ಕೇಂದ್ರದ ಅಧೀನಕ್ಕೆ ತರುವ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಸ್ಮಾರ್ಟ್ಪಾರ್ಕಿಂಗ್‌: ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆಯಡಿ ನಗರದ ಪಾರ್ಕಿಂಗ್‌ ವ್ಯವಸ್ಥೆ ಕೇಂದ್ರಕ್ಕೆ ಜೋಡಿಸುವ ಚಿಂತನೆಯೂ ಇದೆ. ಇದಕ್ಕಾಗಿ ಹೊಸ ಮೊಬೈಲ್‌ ಅಪ್ಲಿಕೇಶನ್‌ ಸಿದ್ಧಪಡಿಸಲಾಗುತ್ತಿದೆ. ಈ ಆ್ಯಪ್‌ ಮೂಲಕ ನಗರದಲ್ಲಿರುವ ಪಾರ್ಕಿಂಗ್‌ ಸ್ಥಳಾವಕಾಶದ ಮಾಹಿತಿ ಪಡೆಯಬಹುದು. ರಾತ್ರಿ ಗಸ್ತಿನಲ್ಲಿರುವ ಪೊಲೀಸರ ಕಾರ್ಯ ನಿರ್ವಹಣೆ ಬಗ್ಗೆ ತಿಳಿಯಲು ನಿಗದಿತ ಪ್ರದೇಶಗಳಲ್ಲಿ ಅಳವಡಿಸಿರುವ ಕ್ಯಾಮರಾಗಳ ಮುಂದೆ ಕಾಣಿಸಿಕೊಂಡು ರಿಯಲ್‌ ಟೈಂ ಅಟೆಂಡೆನ್ಸ್‌ ನೀಡಬೇಕು. ಬ್ಯಾಂಕುಗಳ ಹೊರ ಆವರಣ, ಮಹಿಳೆಯರ ಪಿ.ಜಿ., ಕಾಲೇಜು ಆವರಣ ಮತ್ತಿತರ ಪ್ರದೇಶಗಳಲ್ಲಿ ಜನರ ಚಲನವಲನದ ಮೇಲೆ ಕಣ್ಣಿಡಲು ಕ್ಯಾಮರಾ ಅಳವಡಿಸಲಾಗುವುದು. ನಗರ ವ್ಯಾಪ್ತಿಯ ಹಲವು ಜಂಕ್ಷನ್‌ಗಳಲ್ಲಿ ಹೈ ರೆಸೊಲ್ಯೂಷನ್‌ ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನಿಷನ್‌ ಕ್ಯಾಮರಾ ಅಳವಡಿಸಲಾಗಿದೆ. ಇದರಿಂದ ಅನುಮಾನಾಸ್ಪದ ವಾಹನ ಸಂಖ್ಯೆ ಸರ್ವರ್‌ನಲ್ಲಿ ನಮೂದಿಸಿದರೆ ಆ ವಾಹನ ಓಡಾಡಿದ ಮಾರ್ಗ ತಿಳಿಯಲು ಸಾಧ್ಯವಿದೆ

Advertisement

Udayavani is now on Telegram. Click here to join our channel and stay updated with the latest news.

Next