Advertisement

ಹೆದ್ದಾರಿಯಲ್ಲಿ ಬೆಳಗದ ಬೀದಿ ದೀಪ: ಮನವಿ

07:29 PM Jan 13, 2022 | Team Udayavani |

ಕುಂದಾಪುರ: ನಗರದಲ್ಲಿ ದಶಕಗಳ ಕಾಲ ಕಾಮಗಾರಿ ನಡೆದು ಎದ್ದು ನಿಂತ ಫ್ಲೈಓವರ್‌ನಲ್ಲಿ ಕಾಮಗಾರಿ ಪೂರ್ಣಗೊಂಡು ವರ್ಷವಾ ಗುತ್ತಾ ಬಂದರೂ ಇನ್ನೂ ಬೀದಿ ದೀಪಗಳು ಬೆಳಗುತ್ತಿಲ್ಲ. ಈ ಕುರಿತು ಸಾರ್ವಜನಿಕರು ಸಾಮೂಹಿಕ ಸಹಿ ಸಂಗ್ರಹಿಸಿ ಮನವಿ ನೀಡಿದ್ದಾರೆ.

Advertisement

ಸಮಸ್ಯೆಗಳ ಹೆದ್ದಾರಿ:

ರಾಷ್ಟ್ರೀಯ ಹೆದ್ದಾರಿ ಎನ್ನುವುದು ಕುಂದಾಪುರದ ಪಾಲಿಗೆ ಸಮಸ್ಯೆಗಳ ಹೆದ್ದಾರಿ ಎಂದಾಗಿದೆ. ರಸ್ತೆ ಅಗೆದು ಹಾಕಿ ದಶಕಗಳ ಕಾಲ ಕಾಮಗಾರಿ ನಡೆಸದೇ ಆದ ಅಧ್ವಾನ ಒಂದು ಕಡೆ. ಅದೆಲ್ಲ  ಜನರ ಮನಸಿಂದ ಮರೆಯಾಗುತ್ತಿದೆ ಎನ್ನುವಾಗ ದಾರಿ ಕೊಡದ ಸಮಸ್ಯೆ ಧುತ್ತೆಂದು ಮುಂದೆ ನಿಂತಿದೆ. ಹಂಗಳೂರಿನಲ್ಲಿ ಸರ್ವಿಸ್‌ ರಸ್ತೆಗೆ ಹೆದ್ದಾರಿಯಿಂದ  ಪ್ರವೇಶ ಅವಕಾಶ ನೀಡಿದ್ದಾರೆ. ಅದು ಕೋಡಿ ಭಾಗಕ್ಕೆ ತೆರಳಲು ಅನುಕೂಲವಾಗುತ್ತದೆ. ಅಲ್ಲಿ ರಿಕ್ಷಾ ಚಾಲಕರು, ಸಾರ್ವಜನಿಕರು ಯು ಟರ್ನ್ ಕೇಳಿದ್ದರೂ ಕೊನೆವರೆಗೂ ಮುಂಗೈಗೆ ಬೆಲ್ಲ ಸವರಿ ಮಾತಿನಲ್ಲೇ ಆಕಾಶ ತೋರಿಸಿದ್ದು ವಿನಾ ಕೇಳಿದ ಬೇಡಿಕೆ ಈಡೇರಲೇ ಇಲ್ಲ. ಹಂಗಳೂರಿನ ಪ್ರವೇಶವನ್ನೇ ಕುಂದಾಪುರ ನಗರಕ್ಕೆ ಪ್ರವೇಶ ಎಂದು ಈಗ ಹೇಳುತ್ತಿದ್ದಾರೆ. ಅಸಲಿಗೆ ನಗರಕ್ಕೆ ಪ್ರತ್ಯೇಕ ದಾರಿಯನ್ನೇ ನೀಡಿಲ್ಲ. ತಾಂತ್ರಿಕ ಕಾರಣ ನೀಡಿ ನಿರಾಕರಿಸಲಾಗುತ್ತಿದೆ. ಎಪಿಎಂಸಿ ಬಳಿ ಯು ಟರ್ನ್ ನೀಡಲಾಗಿದೆ. ಇದನ್ನು ದಾಟಿ ಬಂದರೂ ಸಂಗಂವರೆಗೆ ಬಂದು ಹಿಂಬಾಗಿಲ ಮೂಲಕ ಕುಂದಾಪುರ ನಗರಕ್ಕೆ ಬರಬೇಕಾಗುತ್ತದೆ.

ದೀಪ ಇಲ್ಲ :

ಹೆದ್ದಾರಿಯಲ್ಲಿ ದೀಪಗಳೇ ಮಿನುಗುತ್ತಿಲ್ಲ. ಬೈಂದೂರು, ಶಿರೂರು ಮೊದಲಾದೆಡೆ ಐಆರ್‌ಬಿ ಸಂಸ್ಥೆ ಹೆದ್ದಾರಿ ಹಾಗೂ ಫ್ಲೈಓವರ್‌ ಮೇಲೆ ದೀಪಗಳು ಬೆಳಗುವಂತೆ ಮಾಡಿದೆ. ಅಸಲಿಗೆ ನವಯುಗ ಸಂಸ್ಥೆಯ ಕಾಮಗಾರಿ ಆರಂಭವಾದ ಬಳಿಕ ಗುತ್ತಿಗೆ ಪಡೆದ ಐಆರ್‌ಬಿ ಸಂಸ್ಥೆ ತನ್ನೆಲ್ಲ ಕೆಲಸ ಕಾರ್ಯ ಮುಗಿಸಿದೆ. ಆದರೆ ನವಯುಗ 10 ವರ್ಷ ತಿಂದದ್ದೇ ಅಲ್ಲದೆ ಇನ್ನೂ ಕಾಮಗಾರಿ ಪೂರ್ಣಗೊಳಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಿಲ್ಲ. ದೀಪಗಳು ಬೆಳಗುತ್ತಿಲ್ಲ, ಕಾಮಗಾರಿ ಅಸಮರ್ಪಕವಾಗಿದೆ, ಸರ್ವಿಸ್‌ ರಸ್ತೆಯಲ್ಲಿ ಹೊಂಡಗಳಿವೆ ಎಂಬ ದೂರುಗಳನ್ನು ನೀಡಿದಾಕ್ಷಣ ಕಾಮಗಾರಿಯೇ ಪೂರ್ಣವಾಗಿಲ್ಲ ಎಂಬ ಸಿದ್ಧ ಉತ್ತರ ದೊರೆಯುತ್ತದೆ. ಹಾಗಿದ್ದರೆ ವಾಹನಗಳ ಓಡಾಟಕ್ಕೆ ಬಿಟ್ಟದ್ದು ಯಾಕೆ ಎಂಬ ಪ್ರಶ್ನೆಗೆ ಯಾರೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.

Advertisement

ಸಭೆಗೆ ಗೈರು:

ನಗರಕ್ಕೆ ಪ್ರವೇಶಕ್ಕೆ ಅವಕಾಶ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳು ಸಹಾಯಕ ಕಮಿಷನರ್‌ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ಸಭೆಗೆ ಈವರೆಗೂ ಹೆದ್ದಾರಿ ಪ್ರಾಧಿಕಾರದಿಂದ ಯೋಜನಾಧಿಕಾರಿ ಹಾಜರಾಗಲೇ ಇಲ್ಲ. ತಾಂತ್ರಿಕ ಕಾರಣ ನೀಡಿ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ ವಿನಾ ಬದಲಿ ಮಾರ್ಗ ಹುಡುಕುವ ಯತ್ನವನ್ನೇ ಮಾಡಿಲ್ಲ. ಕುಂದಾಪುರ ನಗರ ಎಂಬ ಫ‌ಲಕವನ್ನೂ ಅಳವಡಿಸಿಲ್ಲ. ಅಷ್ಟೂ ಅಸಡ್ಡೆ ಮಾಡಲಾಗಿದೆ. ಹಿಂದೊಮ್ಮೆ ಅಂಕದಕಟ್ಟೆ ಬಳಿ ಕುಂದಾಪುರ ಎಂಬ ಫ‌ಲಕವೂ ಇತ್ತು. ಅದಾದ ಬಳಿಕ ಈಗ ಹಂಗಳೂರಿನಲ್ಲಿದೆ. ಫ್ಲೈಓವರ್‌ ಸಮಾಚಾರ ಎಂದರೆ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಬೇಡದ ವಿಷಯವಾಗಿದೆ.

ಮನವಿ:

ಕುಂದಾಪುರದ ನಾಗರಿಕರು ನೂರಾರು ಮಂದಿಯ ಸಹಿ ಸಂಗ್ರಹಿಸಿ ಹೆದ್ದಾರಿ ಅವಸ್ಥೆ ಸರಿಪಡಿಸುವಂತೆ ಮನವಿ ನೀಡಿದ್ದಾರೆ. ಮನವಿಯ ಪ್ರತಿಯನ್ನು ನವಯುಗ ಸಂಸ್ಥೆಗೂ ನೀಡಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿದ್ದಾರೆ. ವಿನಾಯಕ ಥಿಯೇಟರ್‌ನಿಂದ ಕೆಎಸ್‌ಆರ್‌ಟಿಸಿವರೆಗೆ ಸರ್ವಿಸ್‌ ರಸ್ತೆ ಹದಗೆಟ್ಟಿದೆ. ಹೆದ್ದಾರಿಯಲ್ಲಿ ದೀಪಗಳಿಲ್ಲ. ಫ್ಲೈಓವರ್‌ ಸಮೀಪ ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳಿವೆ.  ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಇದು ತೊಂದರೆಯಾಗುತ್ತಿದೆ.  ಆದ್ದರಿಂದ ಡಾಮರು ಹಾಕಿ ಹೊಂಡ ಮುಚ್ಚಿಸಿ ದೀಪ ವ್ಯವಸ್ಥೆ ಮಾಡಬೇಕೆಂದು ವಿವರಿಸಲಾಗಿದೆ.

ದಂಡ :

ನವಯುಗ ಸಂಸ್ಥೆ ಕಾಮಗಾರಿ ಸಕಾಲದಲ್ಲಿ ಪೂರೈಸದ ಕಾರಣ ಪ್ರಾಧಿಕಾರ ಸಂಸ್ಥೆಗೆ ದಂಡ ವಿಧಿಸಿದೆ. ಆದರೆ ದಂಡ ಕಟ್ಟಿರುವ ಸಂಸ್ಥೆ ಕಾಮಗಾರಿಯನ್ನಂತೂ ಮಾಡಿಲ್ಲ. ಟೋಲ್‌ ವಸೂಲಿ ನಡೆಯುತ್ತಿದೆ. ಇದಕ್ಕೂ ಸಿದ್ಧ ಉತ್ತರ ದೊರೆತಿದ್ದು, ನಗರ ವ್ಯಾಪ್ತಿಯ 2.5 ಕಿ.ಮೀ. ರಸ್ತೆಗೆ ಸುಂಕ ಪಡೆಯುತ್ತಿಲ್ಲ ಎಂದು. ಫ್ಲೈಓವರ್‌ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟ ಕ್ಷಣದಿಂದ ಮತ್ತೆ ಸುಂಕ ಏರಿಕೆಯಾಗಲಿದೆ ಎನ್ನುವುದಕ್ಕೆ ಇದು ಸೂಚನೆ.

ಕೇಸು :

ಬೆಂಗಳೂರಿನಲ್ಲಿ ಅಸಮರ್ಪಕ ಹೆದ್ದಾರಿ ಕಾಮಗಾರಿಯಿಂದ ಅಪಘಾತ ಸಂಭವಿಸಿದರೆ ಗುತ್ತಿಗೆದಾರ ಸಂಸ್ಥೆ ಮೇಲೆ ಕೇಸು ದಾಖಲಿಸುವುದಾಗಿ ಅಲ್ಲಿನ ಪೊಲೀಸ್‌ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕುಂದಾಪುರ ಫ್ಲೈಓವರ್‌ನ ಮೇಲೆ ನಡೆದ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತಗಳೂ ಕೆಲವು ನಡೆದಿವೆ. ಗುತ್ತಿಗೆದಾರರ ಮೇಲೆ ಕೇಸು ಮಾತ್ರ ಯಾರೂ ಹಾಕಿಲ್ಲ.

ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ನವಯುಗ ಕಂಪೆನಿಯವರಿಗೆ ಲಿಖೀತ ಮನವಿ ನೀಡಿದ್ದೇವೆ. ಎಪ್ರಿಲ್‌ ತಿಂಗಳಿನಿಂದ ಕಾಮಗಾರಿ ಸರಿಯಾಗಿ ನಡೆಸುತ್ತಾರೆ ಎಂದು ಕಾದು ಕಾದು ಸಾಕಾಯಿತು. ನಗರಕ್ಕೆ ಪ್ರವೇಶವನ್ನೂ ನೀಡಿಲ್ಲ, ಫ್ಲೈಓವರ್‌ ಕೆಳಗೆ ಪಾರ್ಕಿಂಗ್‌ಗೂ ಅವಕಾಶ ನೀಡಿಲ್ಲ. ಬೀದಿದೀಪಗಳನ್ನೂ ಅಳವಡಿಸಿಲ್ಲ. ಸರಕಾರದ ಅಂಕೆ ಇಲ್ಲದ ಸಂಸ್ಥೆಯಂತಿದೆ.ಕೋಡಿ ಅಶೋಕ್‌ ಪೂಜಾರಿ ಸಾಮಾಜಿಕ ಕಾರ್ಯಕರ್ತರು  

Advertisement

Udayavani is now on Telegram. Click here to join our channel and stay updated with the latest news.

Next