Advertisement

ಉಡುಪಿ ನಗರದಲ್ಲಿ ದಾರಿದೀಪ, ಹೈಮಾಸ್ಟ್‌ಗೆ ಗ್ರಹಣ

02:10 AM Jun 20, 2018 | Team Udayavani |

ವಿಶೇಷ ವರದಿ – ಉಡುಪಿ: ನಗರದಲ್ಲಿ ದಾರಿದೀಪ, ಹೈಮಾಸ್ಟ್‌ ದೀಪಗಳಿಗೆ ಗ್ರಹಣ ಬಡಿದಿದೆ. ದೀಪಗಳು ಆಗಾಗ್ಗೆ ಕೈ ಕೊಡುತ್ತಿದ್ದರೂ, ಅವುಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

ಹೈಮಾಸ್ಟ್‌ ದೀಪ ಸ್ವಿಚ್‌ ಆಫ್
ತೆಂಕಪೇಟೆ ವಾರ್ಡ್‌ನಲ್ಲಿರುವ ಶ್ರೀಕೃಷ್ಣ ಮಠದ ರಥಬೀದಿಯ ನಾಲ್ಕು ದಿಕ್ಕುಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಈ ಪೈಕಿ ಶ್ರೀ ಸೋದೆ ಮಠ ಮತ್ತು ಶ್ರೀ ಪೇಜಾವರ ಮಠದ ಸಮೀಪದಲ್ಲಿರುವ ದೀಪಗಳು ಕೈಕೊಟ್ಟು ತಿಂಗಳುಗಳೇ ಕಳೆದಿವೆೆ. ಉಡುಪಿ ಸಿಟಿ ಬಸ್ಸು ನಿಲ್ದಾಣದಲ್ಲೂ ಇದೇ ಕಥೆ. ಒಂದು ತಿಂಗಳಿನಿಂದ ಕೆಟ್ಟು ಹೋಗಿದ್ದ ಹೈಮಾಸ್ಟ್‌ ದೀಪವನ್ನು ಜೂನ್‌ ಮೊದಲ ವಾರಗಳಲ್ಲಿ ಸರಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಹೈವೋಲ್ಟೇಜ್‌ ಬಂದು ಹೈಮಾಸ್ಟ್‌ ದೀಪ ಮತ್ತೆ ಕೆಟ್ಟು ಹೋಗಿದೆ. ಉಳಿದಂತೆ ರಥಬೀದಿ, ರಾಜಾಂಗಣ, ಸರ್ವೀಸ್‌, ಸಿಟಿ ಬಸ್‌ ನಿಲ್ದಾಣ, ಸಿಪಿಸಿ ಪ್ಲಾಜಾದ ಬಳಿ ಇನ್ನಿತರ ಕಡೆಗಳಲ್ಲಿ ಹೈಮಾಸ್ಟ್‌ ದೀಪಗಳಿವೆೆ.

ನಿರ್ವಹಣೆ ಕಳಪೆ 
ದಾರಿದೀಪ ನಿರ್ವಹಣೆ ಕಳಪೆಯಾಗಿದೆ ಎಂದು ನಗರಸಭೆ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ದನಿ ಎತ್ತಿದ್ದರು. ನಿರ್ವಹಣೆ ಸರಿಯಾಗಿ ಮಾಡಿ, ಇಲ್ಲವಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಗಲಾಟೆಯನ್ನೂ ಮಾಡಿದ್ದರು. ಆದರೂ ಸಮಸ್ಯೆ ಹಾಗೆಯೇ ಇದೆ. ನಗರಸಭೆಗೆ ದೂರು ಕೊಟ್ಟು ಸಮಸ್ಯೆ ಬಗೆಹರಿಯದ ಕಾರಣ ಜನ ರೋಸಿ ಹೋಗಿದ್ದಾರೆ. ರಾತ್ರಿ ಹೊತ್ತು ಕತ್ತಲಲ್ಲಿ ಮಕ್ಕಳು, ಮಹಿಳೆಯರು ಭಯದಿಂದಲೇ ನಡೆದಾಡುವ ದುಃಸ್ಥಿತಿ ಇದೆ. ಮಳೆಗಾಲವಾದ್ದರಿಂದ ಅಲ್ಲಲ್ಲಿ ಸಮಸ್ಯೆಯಾಗಿದೆ. ಶೀಘ್ರ ಸರಿಯಾಗುತ್ತದೆ ಎಂದು ನಗರಸಭೆಯವರು ಹೇಳುತ್ತಾರೆ. ಈ ಬಾರಿಯ ಸಿಡಿಲಿಗೆ ನಗರದಲ್ಲಿನ ಕಂಬಗಳಲ್ಲಿದ್ದ 200ಕ್ಕೂ ಅಧಿಕ ಟೈಮರ್‌ ಗಳು ಕೆಟ್ಟು ಹೋಗಿದೆ.

ರಾತ್ರಿ ಉರಿಯದ ದೀಪ ಹಗಲು ಉರಿಯುತ್ತದೆ! 
ನಗರದಲ್ಲಿ ದಾರಿದೀಪಗಳ ನಿರ್ವಹಣೆ ಸಮಸ್ಯೆ ವಿಪರೀತ ಹೆಚ್ಚುತ್ತಲಿದೆ. ದೂರು ಕೊಟ್ಟು ತಿಂಗಳು ಕಳೆದರೂ ದೀಪಗಳ ದುರಸ್ತಿಯಾಗುತ್ತಿಲ್ಲ. ಕೆಲ ಕಡೆಗಳಲ್ಲಿ ರಾತ್ರಿ ದೀಪಗಳು ಉರಿಯುತ್ತಿಲ್ಲ. ಕಂಬದಲ್ಲಿ ಅಳವಡಿಸಿರುವ ಟೈಮರ್‌ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಗಲಲ್ಲೂ ದಾರಿದೀಪ ಉರಿಯುವಂತಾಗಿದೆ.

ದುರಸ್ತಿ ಸಮಸ್ಯೆ ಇದೆ
ಹೈಮಾಸ್ಟ್‌ ದೀಪ ಹಾಳಾಗಿರುವ ಬಗ್ಗೆ ನಗರಸಭೆ ಗಮನಕ್ಕೆ ತಂದಿದ್ದೆ. ಆದರೆ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಉಡುಪಿಯವರಿಗೆ ಟೆಂಡರ್‌ ಕೊಡದೆ ಅನ್ಯಜಿಲ್ಲೆಯವರಿಗೆ ಕೊಟ್ಟರೆ ಇದೇ ಸಮಸ್ಯೆ. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರೂ ಆಡಳಿತ ನಡೆಸುತ್ತಿರುವವರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ನಗರಸಭೆಯ ಆನ್‌ಲೈನ್‌ ದೂರು ಸ್ವೀಕರಿಸುವ ಜನಹಿತ ವಿಭಾಗವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ.
– ಶ್ಯಾಂ ಪ್ರಸಾದ್‌ ಕುಡ್ವ, ನಗರಸಭಾ ಸದಸ್ಯ

Advertisement

ತಿಂಗಳಾಂತ್ಯದೊಳಗೆ ಸರಿಯಾಗುತ್ತದೆ
5 ಲ.ರೂ.ಗಿಂತ ಜಾಸ್ತಿ ಮೊತ್ತದ ಕಾಮಗಾರಿಗಳಿಗೆ ಇ-ಪ್ರೊಕ್ಯೂರ್‌ವೆುಂಟ್‌ ಪ್ರಕಾರ ಆನ್‌ಲೈನ್‌ ಟೆಂಡರ್‌ ಕರೆಯಬೇಕು ಎನ್ನುವ ನಿಯಮ ಇದೆ. ಆ ಪ್ರಕಾರ ಟೆಂಡರ್‌ ಶಿವಮೊಗ್ಗದ ಗುತ್ತಿಗೆದಾರರ ಪರವಾಗಿದೆ.  ಹೊಸ ಟೆಂಡರ್‌ ನಲ್ಲಿ ಸಮಸ್ಯೆ ಸರಿಯಾಗಲಿದೆ. ಈ ನಡುವೆ ಸಿಡಿಲಿಗೆ 200 ಟೈಮರ್‌ಗಳು  ಹಾಳಾಗಿವೆೆ. ಹಾಳಾದ ಹೈಮಾಸ್ಟ್‌ ದೀಪಕ್ಕೆ ಅಗತ್ಯ ಸಲಕರಣೆ ಹೊಂದಾಣಿಕೆಯಾಗದೆ ತಡವಾಗಿದೆ. ಈ ತಿಂಗಳಾಂತ್ಯದೊಳಗೆ ಸಮಸ್ಯೆ ಬಗೆಹರಿಯುತ್ತದೆ.
– ಜನಾರ್ದನ ಭಂಡಾರ್ಕರ್‌, ನಗರಸಭೆ ಸದಸ್ಯರು

ಇಂದೇ ಚರ್ಚೆ ನಡೆಸುವೆ
ನಗರಸಭೆ ಅಧಿಕಾರಿಗಳೊಂದಿಗೆ ಜೂ. 20ರ ಅಪರಾಹ್ನ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದೇನೆ. ದಾರಿದೀಪ, ಹೈಮಾಸ್ಟ್‌ ದೀಪಗಳ ನಿರ್ವಹಣೆ ಕುರಿತು ಇದೇ ಸಭೆಯಲ್ಲಿ ಚರ್ಚಿಸಲಿದ್ದೇನೆ. ಕಳಪೆ ನಿರ್ವಹಣೆ ಬಗ್ಗೆ ನಗರದ ಸಾರ್ವಜನಿಕರಿಂದ ನನಗೂ ದೂರುಗಳು ಬಂದಿವೆೆ. ಹಿಂದೆ ಉಡುಪಿ ನಗರದ ಗುತ್ತಿಗೆದಾರರೊಬ್ಬರು ಉತ್ತಮವಾಗಿ ದಾರಿದೀಪಗಳ ನಿರ್ವಹಣೆ ಕಾರ್ಯ ಮಾಡುತ್ತಿದ್ದರು. ಈಗ ಶಿವಮೊಗ್ಗದ ಗುತ್ತಿಗೆದಾರರಿಗೆ ಟೆಂಡರ್‌ ಕೊಟ್ಟಿದ್ದಾರೆ. ಇದೇ ಪ್ರಮುಖ ಸಮಸ್ಯೆ. ರೀಟೆಂಡರ್‌ ಕರೆಯಲು ಸೂಚಿಸುತ್ತೇನೆ.
– ಕೆ. ರಘುಪತಿ ಭಟ್‌, ಉಡುಪಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next