Advertisement

ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಬೀದಿ ನಾಯಿಗಳು

09:12 PM Jan 27, 2022 | Team Udayavani |

ಉಡುಪಿ: ನಗರದಲ್ಲಿ ಕೆಲವು ದಿನಗಳಿಂದ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಇದು ಸಾರ್ವಜನಿಕರಿಗೆ ಅತಿಯಾದ ಕಿರಿಕಿರಿ ಉಂಟುಮಾಡುವ ಜತೆಗೆ ರಾತ್ರಿ ವೇಳೆ ತಿರುಗಾಟಕ್ಕೂ ಭಯಪಡುವಂತಾಗಿದೆ.

Advertisement

ಬೀದಿ ನಾಯಿಗಳು ಹಗಲು, ರಾತ್ರಿ ಬೊಗಳುವುದು, ರಸ್ತೆಯಲ್ಲಿ ವಾಹನಗಳನ್ನು ( ವಿಶೇಷವಾಗಿ ದ್ವಿಚಕ್ರ ವಾಹನ) ಹಿಂಬಾಲಿಸಿಕೊಂಡು ಹೋಗುವುದು, ವಾಹನದ ಹತ್ತಿರ ಬಂದು ಸವಾರರಿಗೆ ಭಯ ಹುಟ್ಟಿಸುತ್ತಿವೆ.

ನಗರದ  ಕೆಲವು ಸಾರ್ವಜನಿಕ ಸ್ಥಳದಲ್ಲಿ ಬೀದಿನಾಯಿ ಗಳ ಅಡ್ಡಾದಿಟ್ಟಿ ಓಡಾಟ ಹೆಚ್ಚಾಗಿದೆ. ಬಸ್‌ ನಿಲ್ದಾಣ, ಶಾಲಾ ಆವರಣ, ಮಕ್ಕಳ ಪಾರ್ಕ್‌ಗಳು, ಸರ್ವಿಸ್‌, ಸಿಟಿಬಸ್‌ ನಿಲ್ದಾಣ, ಮಣಿಪಾಲ ಬಸ್‌ ನಿಲ್ದಾಣ, ಮಲ್ಪೆ  ಬಸ್‌ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿವೆ. ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಇವುಗಳ  ನಿಯಂತ್ರಣ ಸಮರ್ಪಕವಾಗಿ ಸಾಧ್ಯವಾಗಿಲ್ಲ. ನಗರಸಭೆ ವತಿಯಿಂದ ಸಂತಾನಹರಣ ಚಿಕಿತ್ಸೆ ನೀಡಿದರೂ ನಾಯಿಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ ಹಾಗೂ ಸಾರ್ವಜನಿಕರಲ್ಲಿ ಈ ನಾಯಿಗಳು ಭಯ ಹುಟ್ಟಿಸುವ ಘಟನೆ ನಿತ್ಯವೂ ನಡೆಯುತ್ತಿದೆ.

ಮಿಷನ್‌ ಕಾಂಪೌಂಡ್‌, ಕುಕ್ಕಿಕಟ್ಟೆ, ಚಿಟ್ಪಾಡಿ, ಕಲ್ಸಂಕ, ಗುಂಡಿಬೈಲು , ಕಲ್ಮಾಡಿ, ಮಲ್ಪೆ, ದೊಡ¡ಗುಡ್ಡೆ, ಅಜ್ಜರಕಾಡು, ಮಣಿಪಾಲದ ಟೈಗರ್‌ ಸರ್ಕಲ್‌, ಪೋಸ್ಟ್‌ ಆಫೀಸ್‌, ಈಶ್ವರನಗರ, ಪರ್ಕಳ, ಅಲೆವೂರು ರಸ್ತೆ, ಅಂಬಾಗಿಲು, ಇಂದ್ರಾಳಿ, ಪಿಪಿಸಿ ಮೀನು ಮಾರುಕಟ್ಟೆ, ಅಂಬಲಪಾಡಿ, ಆದಿಉಡುಪಿ ಸಹಿತ ಹಲವು ಭಾಗದಲ್ಲಿ ಬೀದಿ ನಾಯಿಗಳ ಉಪಟಳದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿವೆ.

ಬೀದಿನಾಯಿಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು, ಸಾರ್ವಜನಿಕರನ್ನು ಏಕಾಏಕಿ ಬೆನ್ನಟ್ಟುವ ಜತೆಗೆ ಕರ್ಕಶವಾಗಿ ಬೊಗಳಿ ಆತಂಕ, ಭಯ ಉಂಟುಮಾಡುತ್ತಿವೆ. ಕೆಲಸಕ್ಕೆ ಹೋಗಿ ಬರುವ ಕಾರ್ಮಿಕರ ಮೇಲೆಯೂ ದಾಳಿಗೆ ಯತ್ನಿಸುತ್ತವೆ.

Advertisement

ಅನಾರೋಗ್ಯ ಪೀಡಿತ ನಾಯಿಗಳು :

ಬೀದಿನಾಯಿಗಳಲ್ಲಿ ಕೆಲವು ಅನಾರೋಗ್ಯದಿಂದ ಬಳಲುತ್ತಿವೆ. ಮೈ ಮೇಲಿನ ಕೂದಲು ಉದುರಿ, ಚರ್ಮ  ಎದ್ದು ಕಾಣುತ್ತಿವೆ. ಅಲ್ಲಲ್ಲಿ ಗಾಯವಾಗಿವೆ.  ಸದಾ ಬಾಯಿಯಲ್ಲಿ ನೀರು ಸೋರುತ್ತಿರುತ್ತವೆ. ಇವುಗಳಿಗೆ  ಕನಿಷ್ಠ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನಾದರೂ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಮಾಡಬೇಕು.

ನಗರಕ್ಕೆ ವಲಸೆ ಹೆಚ್ಚಳ  :

ನಗರಕ್ಕೆ ಆಹಾರ ಅರಸಿಕೊಂಡು ಗ್ರಾಮಾಂತರ ದಿಂದ ಬೀದಿನಾಯಿಗಳ ವಲಸೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಿಂದ ಬಂದ ನಾಯಿಗಳು ಇಲ್ಲಿನ ಆಹಾರ, ಇತರೆ ನಾಯಿಗಳ ಸಂಗಡದಿಂದ ಇಲ್ಲಿಯೇ ವಾಸ ಮಾಡುತ್ತವೆ.  ಪ್ರತಿವರ್ಷ ಲಸಿಕೆ, ಚಿಕಿತ್ಸೆ ನೀಡಿದರೂ ನಿಯಂತ್ರಣ ಕಷ್ಟಸಾಧ್ಯ. ನಾಯಿ ಹೆಣ್ಣು ಮರಿಹಾಕಿದ ತತ್‌ಕ್ಷಣವೇ ಆ ಮರಿಯನ್ನು ಬೀದಿಗೆ ಬಿಡುವ ಪರಿಪಾಠವೂ ಇದೆ. ಇದು ಬದಲಾಗಬೇಕು. ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಲು ಇದು ಕೂಡ ಒಂದು ಕಾರಣ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪಾಲ ಪೋಸ್ಟ್‌ ಆಫೀಸ್‌ ಸುತ್ತಲೂ ಬೀದಿ ನಾಯಿ ಸಮಸ್ಯೆ  :

ಮಣಿಪಾಲದಲ್ಲಿರುವ ಅಂಚೆ ಕಚೇರಿ, ಪೊಲೀಸ್‌ ಠಾಣೆ ಸಮೀಪ ವೃತ್ತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೀದಿ ನಾಯಿಗಳು ಸೇರಿಕೊಂಡಿವೆ. ಸಂಜೆಯಾಗುತ್ತಿದ್ದಂತೆ ವಿಪರೀತ ಬೊಗಳುವುದು. ವಾಹನಗಳನ್ನು ಹಿಂಬಾಲಿಸುವುದು ನಡೆಯುತ್ತದೆ. ಶಾಲಾ, ಕಾಲೇಜು ಮಕ್ಕಳು ಈ ರಸ್ತೆಯಲ್ಲಿ ಹೆಚ್ಚು ಓಡಾಡುವುದರಿಂದ ವಿದ್ಯಾರ್ಥಿಗಳಲ್ಲೂ ಬೀದಿನಾಯಿಗಳು ಭಯ ಹುಟ್ಟಿಸುತ್ತಿವೆ. ಪೋಸ್ಟ್‌ ಆಫೀಸ್‌, ಪೊಲೀಸ್‌ಠಾಣೆಗೆ ಬರುವ ಸಾರ್ವಜನಿಕರಿಗೂ ಬೀದಿ ನಾಯಿಗಳು ಉಪಟಳ ನೀಡುತ್ತಿವೆ. ಅಂಚೆ ಕಚೇರಿಯಲ್ಲಿ ಗ್ರಾಹಕರು,  ಸಿಬಂದಿ ವರ್ಗದವರ ಬೈಕ್‌ ಸೀಟುಗಳಿಗೆ ಬೀದಿ ನಾಯಿಗಳು, ಕೆಲವು ಬೆಕ್ಕುಗಳು ಹಾನಿ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ.

ಬೀದಿನಾಯಿಗಳ ಉಪಟಳ ನಿಯಂತ್ರಣಕ್ಕೆ ಚುಚ್ಚುಮದ್ದು, ಸಂತಾನಹರಣ  ಚಿಕಿತ್ಸೆ ಹೊರತುಪಡಿಸಿ ಬೇರೆ ಪರ್ಯಾಯ ಮಾರ್ಗವಿಲ್ಲ. ಎಲ್ಲ ವಾರ್ಡ್‌ಗಳಲ್ಲಿ  ಒಂದು ವಾರದಿಂದ  ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್‌ ಚುಚ್ಚುಮದ್ದು ನೀಡುವ  ಕಾರ್ಯ ನಗರಸಭೆಯಿಂದ  ನಡೆಯುತ್ತಿದೆ. – ಕರುಣಾಕರ್‌ ವಿ. ಹಿರಿಯ ಆರೋಗ್ಯ ನಿರೀಕ್ಷಕರು. ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next