Advertisement

ಬೀದಿ ನಾಯಿಗಳಿಗೂ ಕೋವಿಡ್ 19 ವೈರಸ್ ‌ಗೂ ಸಂಬಂಧವಿಲ್ಲ

01:10 PM May 01, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ಜನ್ಮ ತಳೆಯುವಲ್ಲಿ ಬೀದಿ ನಾಯಿಗಳ ಪಾತ್ರವೂ ಸಾಕಷ್ಟಿದೆ ಎಂದು ಪ್ರತಿಪಾದಿಸಿದ ಅಧ್ಯಯನವನ್ನು ಪುಷ್ಟೀಕರಿಸುವ ಯಾವುದೇ ಆಧಾರಗಳಿಲ್ಲ. ಹೀಗಾಗಿ ಇದು ಕೇವಲ ಊಹೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಕೋವಿಡ್ 19 ವೈರಸ್ ‌ನ ಮೂಲದೊಂದಿಗೆ ಬೀದಿ ನಾಯಿಗಳನ್ನು ತಳಕು ಹಾಕಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ವಿಜ್ಞಾನಿಗಳು, ಇಂತಹ ದಾರಿತಪ್ಪಿಸುವ ಅಧ್ಯಯನಗಳಿಂದ ಶ್ವಾನಗಳನ್ನು ಸಾಕುವವರು ಅವುಗಳನ್ನು ಬೀದಿಗೆ ಬಿಡುವ ಅಪಾಯ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಪ್ರಿಲ್‌ ಆರಂಭದಲ್ಲಿ ಎರಡು ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕೆನಡಾದ ಒಟ್ಟಾವ ವಿವಿಯ ಕ್ಸುಹುವಾ ಕ್ಸಿಯಾ ಎಂಬುವರು ಬರೆದ ಅಧ್ಯಯನ ವರದಿಯಲ್ಲಿ ಬೀದಿ ನಾಯಿಗಳು ಮತ್ತು ಕೋವಿಡ್ 19 ವೈರಸ್ ‌ನ ಮೂಲಕ್ಕೂ ಸಂಬಂಧ ಕಲ್ಪಿಸಲಾಗಿತ್ತು.

ಮುಖ್ಯವಾಗಿ ಶ್ವಾನಗಳ ಕರುಳು ವೈರಸ್‌ನ ವಿಕಸನ ಹಾಗೂ ವಾಸಕ್ಕೆ ಅನುಕೂಲಕರವಾಗಿರುವ ವಾತಾವರಣ ಹೊಂದಿರುತ್ತದೆ ಎಂದು ಕ್ಸಿಯಾ ಅಭಿಪ್ರಾಯ ಪಟ್ಟಿದ್ದರು. ಹೀಗಾಗಿ, ಬೀದಿ ನಾಯಿಗಳಲ್ಲಿ ವೈರಸ್‌ ಪತ್ತೆಗೆ ಮುಂದಾಗುವಂತೆ ಸಲಹೆ ನೀಡಿದ್ದರು.

ಆದರೆ ಈ ವಾದವನ್ನು ಭಾರತೀಯ ವಿಜ್ಞಾನಿಗಳು ಅಲ್ಲಗಳೆದಿದ್ದಾರೆ. ಇದೊಂದು ಸೈದ್ಧಾಂತಿಕ ಅಧ್ಯಯನ. ಇಲ್ಲಿ ಶ್ವಾನಗಳನ್ನು ವೈರಸ್‌ ಜತೆ ತಳುಕುಹಾಕುವ ಅಂಶಗಳನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಗಳಿಲ್ಲ. ಅಲ್ಲದೆ, ಅಧ್ಯಯನದಲ್ಲಿ ಉಲ್ಲೇಖಿಸಿರುವ ನಿರ್ದಿಷ್ಟ ಬದಲಾವಣೆಗಳನ್ನು ಮಾಡುವುದರಿಂದ ವೈರಸ್‌ನ ಪ್ರಭಾವ ಕಡಿಮೆ ಆಗುತ್ತದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ರೀತಿಯ ಪ್ರಯೋಗಗಳನ್ನು ಸಹ ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶ್ವಾನಗಳ ಕರುಳಿನಲ್ಲಿ ವೈರಸ್‌ ವಿಕಸನ ಹೊಂದುತ್ತದೆ ಎಂಬುದು ಅತಿ ದೊಡ್ಡ ಊಹೆಯಾಗಿರಲಷ್ಟೇ ಸಾಧ್ಯ ಎಂದು ಕೋಲ್ಕತಾದ ಐಐಸಿಬಿ ವಿಜ್ಞಾನಿ ಸುಭಜಿತ್‌ ಬಿಸ್ವಾಸ್‌ ಹೇಳಿದ್ದಾರೆ.

Advertisement

ಶ್ವಾನಗಳಿಗೆ ವೈರಸ್‌ ಪತ್ತೆ ತರಬೇತಿ
ಶ್ವಾನಗಳು ಕೋವಿಡ್ 19 ವೈರಸ್‌ ಪತ್ತೆ ಹಚ್ಚಬಲ್ಲವೇ? ಹೌದು ಎನ್ನುತ್ತಿದೆ ಮೆಡಿಕಲ್‌ ಡಿಟೆಕ್ಷನ್‌ ಡಾಗ್ಸ್‌ ಎಂಬ ಬ್ರಿಟಿಷ್‌ ಸಂಸ್ಥೆ. ಮಾತ್ರವಲ್ಲ, ವೈರಸ್‌ನ ಸ್ಯಾಂಪಲ್‌ಗ‌ಳ ವಾಸನೆ ತೋರಿಸುವ ಮೂಲಕ ಶ್ವಾನಗಳಿಗೆ ತರಬೇತಿ ಸಹ ನೀಡಲಾಗುತ್ತಿದೆ. ಪ್ರತಿಯೊಂದು ರೋಗವೂ ಒಂದು ನಿರ್ದಿಷ್ಟ ವಾಸನೆ ಹೊಂದಿರುತ್ತದೆ.

ಹಾಗೇ ಶ್ವಾನಗಳು ಅಂತಹ ವಾಸನೆಯನ್ನು ಗ್ರಹಿಸುವ ವಿಶಿಷ್ಟ ಶಕ್ತಿ ಹೊಂದಿವೆ ಎಂಬ ಅಂಶಗಳ ಆಧಾರದಲ್ಲಿ ಈ ತರಬೇತಿ ನಡೆಯುತ್ತಿದೆ. ಸಂಸ್ಥೆಯು ಈ ಹಿಂದೆ ಕ್ಯಾನ್ಸರ್‌ ಮತ್ತು ಪಾರ್ಕಿನ್ಸನ್‌ ಕಾಯಿಲೆಗಳ ಪತ್ತೆಗೆ ಹಾಗೂ ಬ್ಯಾಕ್ಟೀರಿಯಾ ಮೂಲಕ ಹರಡುವ ಸೋಂಕುಗಳನ್ನು ಪತ್ತೆ ಮಾಡಲು ಶ್ವಾನಗಳನ್ನು ಬಳಸಿಕೊಂಡು, ಅದರಲ್ಲಿ ಯಶಸ್ವಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next