Advertisement

ಅಪಘಾತಕ್ಕೆ ಸಿಲುಕಿದ್ದ ಬೀದಿ ನಾಯಿ ಮರಿಗೆ ಚಿಕಿತ್ಸೆ

02:29 PM May 19, 2021 | Team Udayavani |

ಬಾಗಲಕೋಟೆ: ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಲ್ಲಿದ್ದ ಶ್ವಾನವೊಂದಕ್ಕೆ ಸಕಾಲದಲ್ಲಿ ಆಹಾರ, ಚಿಕಿತ್ಸೆ ಕೊಡಿಸಿ ಮರುಜೀವ ನೀಡಿದ ಪ್ರಸಂಗ ನಗರದಲ್ಲಿ ನಡೆದಿದ್ದು, ಈ ಪ್ರಾಣಿಪ್ರಿಯ ಪ್ರಸಂಗಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

ಚಲನಚಿತ್ರ ನಿರ್ಮಾಪಕ, ಪ್ರಾಣಿಪ್ರಿಯ ಘನಶಾಂ ಭಾಂಡಗೆ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನವನಗರ ಬೈಪಾಸ್‌ ರಸ್ತೆಯ ಯಮನೂರಪ್ಪನ ದರ್ಗಾ ಬಳಿ ಎರಡು ದಿನಗಳ ಹಿಂದೆ ಅಪಘಾತಕ್ಕೆ ಸಿಲುಕಿದ್ದ ಬೀದಿ ನಾಯಿ ಮರಿಯೊಂದು ಹಿಂದಿನ ಕಾಲುಗಳಿಗೆ ಒಳಪೆಟ್ಟಾಗಿ ಅರೆಪ್ರಜ್ಞಾವಸ್ಥೆಯಲ್ಲಿ ನರಳಾಡುತ್ತಿತ್ತು. ಕೊರೊನಾ ಕರ್ಫ್ಯೂ ನಿಯಮ ಜಾರಿಯಲ್ಲಿರುವುದರಿಂದ ಜನರ ಸಂಚಾರವೂ ಕಡಿಮೆಯಿದ್ದ ಈ ಸ್ಥಳಕ್ಕೆ ಕೆಲವು ಕ್ಷಣಗಳ ನಂತರ ಅನಿರೀಕ್ಷಿತವಾಗಿ ಆಗಮಿಸಿದ ಘನಶಾಂ, ಹತ್ತಿರ ಹೋಗಿ ಶ್ವಾನ ಉಸಿರಾಡುತ್ತಿರುವುದನ್ನು ಗಮನಿಸಿದರು. ಅದನ್ನು ಹತ್ತಿರದ ಕೆಂಚಮ್ಮ ದೇವಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ನೀರು ಕುಡಿಸಿದರು. ಅದು ತಕ್ಷಣ ಚೇತರಿಸಿಕೊಳ್ಳದೆ ಇದ್ದಾಗ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಾ|ಈರಣ್ಣ ಜಿಗಜಿನ್ನಿ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಡಾ|ಜಿಗಜಿನ್ನಿ, ನಾಯಿ ಮರಿಗೆ ಪ್ರಾಥಮಿಕ ಚಿಕಿತ್ಸೆ ಜೊತೆಗೆ ಎರಡು ಇಂಜೆಕ್ಷನ್‌ ನೀಡಿದರು.

ಕೆಲ ಹೊತ್ತಿನ ನಂತರ ಘನಶಾಂ ಸಿರೇಂಜ್‌ ಮೂಲಕ ನಾಯಿಮರಿಗೆ ಹಾಲು ಕುಡಿಸಿದರು. ಮರು ದಿನವೂ ಬಂದು ಅದಕ್ಕೆ ಆಹಾರ ನೀಡಿದರು. ಡಾ.ಜಿಗಜಿನ್ನಿ ಕೂಡ ಮೂರ್‍ನಾಲ್ಕು ಬಾರಿ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರು. ಸದ್ಯ ನಾಯಿಮರಿ ಚೇತರಿಸಿಕೊಳ್ಳುತ್ತಿದೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರುಮಾಡಿದ ಭಾಂಡಗೆ ಅವರಿಗೆ ಕಣ್ಣೀರಿನಿಂದಲೇ ಕೃತಜ್ಞತೆ ಸಲ್ಲಿಸುತ್ತಿದೆ. ಇದನ್ನು ಕಂಡ ಪ್ರಾಣಿಪ್ರಿಯರು ಭಾಂಡಗೆ ಅವರ ಕಳಕಳಿ, ಸಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಕಾಳಜಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಬೀದಿ ನಾಯಿಗಳು ಸೇರಿದಂತೆ ಎಲ್ಲ ಪ್ರಾಣಿಗಳಿಗೂ ನಿತ್ಯ ಆಹಾರ ನೀಡುವ ಘನಶಾಂ ಭಾಂಡಗೆ ಈ ಕಾರ್ಯವನ್ನು ಪ್ರಸ್ತುತ ಆಹಾರಕ್ಕಾಗಿ ಪ್ರಾಣಿಗಳು ಪರದಾಡುತ್ತಿರುವ ಕೊರೊನಾ ಸಂದರ್ಭದಲ್ಲೂ ಮುಂದುವರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next