Advertisement

ಬೌ ಬೌ ಕಾಟ:ಸಂತಾನ ನಿಯಂತ್ರಣ ಪೀಕಲಾಟ; 9 ತಿಂಗಳಲ್ಲಿ ಕೇವಲ 1700 ನಾಯಿಗಳಿಗೆ ಶಸ್ತ್ರಚಿಕಿತ್ಸೆ

05:41 PM Apr 12, 2023 | Team Udayavani |

ಬೆಳಗಾವಿ: ಮಹಾನಗರದಲ್ಲಿ ಬೀದಿ ಬೀದಿಯಲ್ಲಿ ನಾಯಿಗಳ ಹಾವಳಿಯಿಂದ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ನಾಯಿಗಳ ಹಲ್ಲೆ, ದಾಳಿ ಹೊಡೆತದಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯಿಂದ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಸಂತಾನಶಕ್ತಿ ಹರಣ(ಎಬಿಸಿ) ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೂ ಅಂದುಕೊಂಡಷ್ಟು ಗುರಿ ತಲುಪಲಾಗಿಲ್ಲ.

Advertisement

ಬೆಳಗಾವಿ ಮಹಾನಗರದಲ್ಲಿರುವ ನಾಯಿಗಳ ಸಂಖ್ಯೆ ಮತ್ತು ದಾಳಿ ತಡೆಗಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಪಾಲಿಕೆ ನಿರ್ಧಾರ ತೆಗೆದುಕೊಂಡಿದೆ. ಅದರಂತೆ 2022ರ ಜುಲೈದಿಂದ ನಗರದಲ್ಲಿರುವ ನಾಯಿಗಳ ಸಂತಾನ ಶಕ್ತಿಹರಣ ಅಭಿಯಾನ ಶುರುವಾಗಿದೆ. ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಸುಮಾರು 21 ಸಾವಿರಕ್ಕಿಂತಲೂ ಹೆಚ್ಚು ನಾಯಿಗಳಿದ್ದು, ಈವರೆಗೆ ಕೇವಲ 1700 ನಾಯಿಗಳ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

60 ಲಕ್ಷ ರೂ. ಅನುದಾನ ಮೀಸಲು: ಮಹಾನಗರ ಪಾಲಿಕೆಯಿಂದ ಈ ವರ್ಷ 60 ಲಕ್ಷ ರೂ. ಅನುದಾನವನ್ನು ನಾಯಿಗಳ ಸಂತಾನಶಕ್ತಿ ಹರಣಕ್ಕೆ ತೆಗೆದಿರಲಾಗಿದೆ. ಬೆಂಗಳೂರಿನ ಕೇರ್‌ ಪಾರ್‌ ವೈಸ್‌ಲೆಸ್‌ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಇಲ್ಲಿಯ ಶ್ರೀನಗರದಲ್ಲಿ ನಾಯಿಗಳ ಶಸ್ತ್ರಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆ ಮಾಡಲಾಗಿದೆ. ಇಲ್ಲಿ ನುರಿತ ಪಶು ವೈದ್ಯರು ಸಂತಾನ ಶಕ್ತಿ ಹರಣ ಕಾರ್ಯ ಕೈಗೊಳ್ಳುತ್ತಿದ್ದಾರೆ. ಮಹಾನಗರ ಪಾಲಿಕೆ ಅಂದುಕೊಂಡಷ್ಟು ಶಸ್ತ್ರಚಿಕಿತ್ಸೆ ಆಗಿಲ್ಲ ಎಂಬುದೇ ಬೇಸರದ ಸಂಗತಿ.

ಸಂತಾನ ನಿಯಂತ್ರಣಕ್ಕೆ ಇನ್ನೂ ಎಷ್ಟು ವರ್ಷ?: ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ವೇಗ ಹೆಚ್ಚಿಸುವ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಫೆಬ್ರವರಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಂತರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ. ನಗರದಲ್ಲಿ 21 ಸಾವಿರ ನಾಯಿಗಳಿದ್ದು, 9 ತಿಂಗಳಲ್ಲಿ ಕೇವಲ 1700 ನಾಯಿಗಳ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನುಳಿದ ನಾಯಿಗಳ ಚಿಕಿತ್ಸೆಗೆ ಇನ್ನೂ ಎಷ್ಟು ವರ್ಷ ಬೇಕಾದೀತು ಎಂಬ ಪ್ರಶ್ನೆ ನಾಗರಿಕರಲ್ಲಿ ಕಾಡುತ್ತಿದೆ. ನಗರದಲ್ಲಿರುವ ಬೀದಿ ನಾಯಿಗಳ ಕಾಟದಿಂದ ಜನರು, ಚಿಕ್ಕ ಮಕ್ಕಳು ರೋಸಿ ಹೋಗಿದ್ದಾರೆ. ಬೀದಿ ನಾಯಿಗಳು ಕಚ್ಚಿ ಅನೇಕರು ಗಾಯಗೊಂಡಿರುವ ಉದಾಹರಣೆಗಳು ಇವೆ. ದಿನದಿಂದ ದಿನಕ್ಕೆ ನಾಯಿಗಳ ಸಂತಾನೋತ್ಪತ್ತಿ ವೃದ್ಧಿಯಾಗುತ್ತಿದೆ ಹೊರತು ಕ್ಷೀಣಿಸುತ್ತಿಲ್ಲ. ನಗರದಲ್ಲಿ ಆಹಾ ಹುಡುಕಿಕೊಂಡು ನೆಲೆಸಿರುವ ನಾಯಿಗಳ ಉತ್ಪತ್ತಿ ಹೆಚ್ಚಿದೆ. ಬೇರೆ ಬೇರೆ ಹಳ್ಳಿಗಳಿಂದಲೂ ನಾಯಿಗಳು ನಗರಕ್ಕೆ ಸ್ಥಳಾಂತರಗೊಂಡಿವೆ.

ನಾಯಿಗಳ ಕಾಟದ ಬಗ್ಗೆ ಮಾರ್ಚ್‌ 6ರಂದು ಪಾಲಿಕೆ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು. ಶಾಸಕ ಅಭಯ ಪಾಟೀಲ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ ನಾಯಿಗಳನ್ನು ನಗರದ ಹೊರ ಪ್ರದೇಶದಲ್ಲಿ ಬಿಡುವಂತೆ ಸೂಚಿಸಿದ್ದರು. ಅವುಗಳಿಗೆ ಅಗತ್ಯ ಆಹಾರದ ವ್ಯವಸ್ಥೆ ಮಾಡುವಂತೆಯೂ ತಿಳಿಸಿದ್ದರು. ಆದರೆ ಈ ಸೂಚನೆಗೆ ಯಾರೂ ಕಿವಿಗೊಡದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

Advertisement

ನಿತ್ಯ ಮೂರ್‍ನಾಲ್ಕು ನಾಯಿಗಳಿಗೆ ಚಿಕಿತ್ಸೆ ಮೊದಲು ಹೆಣ್ಣು ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕೆಂಬ ನಿಯಮವಿದೆ. ಆದರೆ ನಾಯಿಗಳನ್ನು ಬಲೆಗೆ ಬೀಳಿಸುವಾಗ ಸಮಸ್ಯೆ ಆಗುತ್ತಿದೆ. ನಾಯಿಗಳನ್ನು ಹಿಡಿಯಲು ಹೋದಾಗ ಓಡಿ ಹೋಗುತ್ತಿವೆ. ಹೀಗಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಎಲ್ಲ ನಾಯಿಗಳಿಗೂ ಅಗತ್ಯ ಇರುವುದರಿಂದ ಕೈಗೆ ಸಿಕ್ಕ ನಾಯಿಗಳನ್ನು ಹಿಡಿದು ಚಿಕಿತ್ಸೆ ನೀಡಲಾಗುತ್ತಿದೆ. ದಿನಾಲೂ 3-4 ನಾಯಿಗಳ ಚಿಕಿತ್ಸೆ ಮಾಡಲಾಗುತ್ತಿದೆ.

ಹಳ್ಳಿ ನಾಯಿಗಳು ಸಿಟಿಗೆ ವಲಸೆ
ಬೆಳಗಾವಿ ಮಹಾನಗರದಲ್ಲಿ ಮಾತ್ರ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಬೀದಿ ನಾಯಿಗಳ ಸಂಖ್ಯೆ ಬಹಳಷ್ಟಿದೆ. ಆದರೆ ಗ್ರಾಮಿಣ ಪ್ರದೇಶದ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ. ನಗರದಲ್ಲಿ ನಾಯಿಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಂದ ನಾಯಿಗಳು ಬೆಳಗಾವಿಗೆ ಬರುತ್ತಿವೆ. ಬೆಕ್ಕಿನಕೇರಿ, ಹಿಂಡಲಗಾ, ಕಾಕತಿ, ಹೊನಗಾ, ಯಳ್ಳೂರು ಹೀಗೆ ವಿವಿಧ ಹಳ್ಳಿಗಳಿಂದ ನಾಯಿಗಳು ಆಹಾರ ಹುಡುಕಿಕೊಂಡು ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಂತೂ ನಗರದಲ್ಲಿ ಚಿಕನ್‌, ಮಾಂಸದ ಅಂಗಡಿಗಳು, ನಾನ್‌ವೆಜ್‌ ಹೊಟೇಲ್‌ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಇಲ್ಲಿ ಬಂದ ನಾಯಿಗಳು ಮತ್ತೆ ವಾಪಸ್‌ ಹಳ್ಳಿಯತ್ತ ಮುಖ ಮಾಡುವುದೇ ಇಲ್ಲ. ಹೀಗಾಗಿ ನಾಯಿಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ ಎಂದು ಪಶು ವೈದ್ಯರೊಬ್ಬರು ತಿಳಿಸಿದರು.

ಸಂತಾನ ನಿಯಂತ್ರಣ ನಿರಂತತೆ ಇರಲಿ
ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು (ಎಬಿಸಿ) ನಿರಂತರವಾಗಿ ಹಾಗೂ ವ್ಯಾಪಕವಾಗಿ ನಡೆಸಿದರೆ ಮಾತ್ರ ಬೀದಿ ನಾಯಿಗಳ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯವಿದೆ. ನಿರಂತರತೆ ಕಾಯ್ದುಕೊಳ್ಳದಿದ್ದರೆ ನಾಯಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗುವುದು ಸಹಜ. ಎಬಿಸಿ ಕಾರ್ಯಕ್ರಮವನ್ನಷ್ಟೇ ಅನುಷ್ಠಾನಗೊಳಿಸಿದರೆ ಸಾಲದು. ಅದು ವ್ಯಾಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯ ಯಾವುದೇ ಸ್ಥಳದಿಂದ ಕರೆ ಬಂದರೂ ತಕ್ಷಣ ಸ್ಥಳಕ್ಕೆ ಹೋಗಿ ನಾಯಿ ಹಿಡಿದು ಅವುಗಳಿಗೆ ಶಸ್ತ್ರಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಸಾರ್ವಜನಿಕರು.

ಬೆಳಗಾವಿ ಮಹಾನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬೇರೆ ಬೇರೆ ಕಡೆಯಿಂದ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳು ಬರುತ್ತಿವೆ. ಸದ್ಯ ನಗರದಲ್ಲಿರುವ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ 2022ರ ಜುಲೈದಿಂದ ಆರಂಭಿಸಲಾಗಿದೆ. ಹಂತ ಹಂತವಾಗಿ ಚಿಕಿತ್ಸೆ ನಡೆಸಿ ಸಂತಾನೋತ್ಪತ್ತಿ ನಿಯಂತ್ರಿಸಲಾಗುತ್ತಿದೆ.ಇದಕ್ಕಾಗಿಯೆ ಪಾಲಿಕೆಯಿಂದ 60 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.
ಡಾ| ಸಂಜೀವ ಡುಮ್ಮಗೋಳ, ಆರೋಗ್ಯಾಧಿಕಾರಿ,
ಮಹಾನಗರ ಪಾಲಿಕ

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next