ಮಹಾನಗರ: ಕದ್ರಿ ಜಿಂಕೆ ಉದ್ಯಾನವನದಲ್ಲಿ ಲೇಸರ್ ಶೋ, ಸಂಗೀತ ಕಾರಂಜಿ ಮೂರು ದಿನಗಳ ಹಿಂದೆಯಷ್ಟೇ ಪುನರಾರಂಭಗೊಂಡಿದ್ದು, ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಬೀದಿ ನಾಯಿಗಳ ಕಾಟ ಶುರುವಾಗಿದೆ.
ಕದ್ರಿ ಜಿಂಕೆ ಉದ್ಯಾನವನದಲ್ಲಿ ಸಂಜೆ 7.30ರಿಂದ 8 ಗಂಟೆಯವರೆಗೆ ಲೇಸರ್ ಶೋ ಪ್ರದರ್ಶನವಿದ್ದು, ಅಲ್ಲಿಗೆ ಆಗಮಿಸುವ ಮಂದಿ ಉದ್ಯಾನವನದೊಳಗೆ ಬೀದಿನಾಯಿ ಉಪಟಳದಿಂದ ಭಯಭೀತರಾಗಿದ್ದಾರೆ. ಸಂಜೆಯಾದಂತೆ ಉದ್ಯಾನವನದ ಒಳಗೆ 4 ರಿಂದ 5 ಬೀದಿ ನಾಯಿಗಳು ಓಡಾಡುತ್ತಿದ್ದು, ಅವುಗಳ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ.
ಕದ್ರಿ ಜಿಂಕೆ ಉದ್ಯಾನವನದಲ್ಲಿ ದ್ವಾರದಲ್ಲಿ ಯಾವುದೇ ಕಾವಲುಗಾರರಿರುವುದಿಲ್ಲ. ಇದೇ ಕಾರಣದಿಂದಾಗಿ ಸುತ್ತಮುತ್ತಲು ತಿರುಗಾಡುತ್ತಿರುವ ಬೀದಿ ನಾಯಿಗಳು ಉದ್ಯಾನವನದ ಒಳಗೆ ಬಂದು ಬಿಡುತ್ತವೆ ಇದರಿಂದ ಪ್ರವಾಸಿಗರು ಭಯಭೀತರಾಗಿದ್ದಾರೆ.
ಲೇಸರ್ ಶೋಗೆ ಪ್ರವಾಸಿಗರಿಲ್ಲ ಲೇಸರ್ ಶೋ ಪುನರಾರಂಭ ಗೊಂಡರೂ, ಪ್ರವಾಸಿಗರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಪ್ರವೇಶ ದರ ಹೆಚ್ಚಳ. ಕದ್ರಿ ಲೇಸರ್ ಶೋ ಆರಂಭವಾದ ಮೂರು ತಿಂಗಳುಗಳ ಕಾಲ ಪ್ರವೇಶ ದರ ನಿಗದಿಪಡಿಸಿರಲಿಲ್ಲ. ಆದರೆ ಎ. 20 ರಿಂದ ಸಂಗೀತ ಕಾರಂಜಿ- ಲೇಸರ್ ಶೋಗೆ ವಯಸ್ಕರಿಗೆ 50 ರೂ., ಮಕ್ಕಳಿಗೆ 25 ರೂ. ಮತ್ತು ಕೇವಲ ಉದ್ಯಾನವನ ವೀಕ್ಷಣೆಗೆ 10 ರೂ. ನಿಗದಿಪಡಿಸಲಾಯಿತು.
ದರ ಹೆಚ್ಚಳದ ಕಾರಣದಿಂದಾಗಿ ಕಾರಂಜಿ ವೀಕ್ಷಣೆಗೆ ಜನ ಬರುತ್ತಿಲ್ಲ. ಮುಂದಿನ ತಿಂಗಳು ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಆರಂಭವಾಗಲಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.