ಇತ್ತೀಚೆಗೆ ಮಂಗಳೂರಿನ ನಾಗುರಿಯಲ್ಲಿರುವ ಮನೋಹರ್ ಉಪಾಧ್ಯಾಯರ ಸಾಕುಪ್ರಾಣಿ ಆಸ್ಪತ್ರೆಗೆ ಹೋಗಿದ್ದೆ. ವಿಧ ವಿಧ ಬಣ್ಣದ ನಾಯಿಗಳು, ಅಷ್ಟೇ ಮುದ್ದಾದ ಬೆಕ್ಕುಗಳ ಹಿಂಡು ಅಲ್ಲಿತ್ತು. ವಾರದ ಇಂಜೆಕ್ಷನ್, ಆಪರೇಶನ್, ಚೆಕಪ್, ಹೀಗೆ ಬೇರೆ ಬೇರೆ ಕಾರಣಕ್ಕೆ ಅವುಗಳನ್ನು ತಂದಿದ್ದರು. ಅಲ್ಲಿ ಪ್ರತಿದಿನ 40-50 ಟೋಕನ್ ಅಷ್ಟೇ ಸಿಗುವುದು. ಬೀದಿನಾಯಿಗಳಿಗೂ, ಲೋಕಲ್ ಬೆಕ್ಕುಗಳಿಗೂ ಸಂತಾನಹರಣ ಚಿಕಿತ್ಸೆಯನ್ನು ಅತೀ ಕಡಿಮೆ ದರದಲ್ಲಿ ಮಾಡುವ ವೈದ್ಯರಿವರು. ಉಚಿತವಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಬೇಕಾಗುವ ಸವಲತ್ತುಗಳು ಸರ್ಕಾರದ ಹೆಚ್ಚಿನ ಪಶು ಆಸ್ಪತ್ರೆಗಳಿಗೆ ಬರುತ್ತಿಲ್ಲವಂತೆ! ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ಕೆಲವೊಂದು ತಾಲೂಕು ಕೇಂದ್ರದಲ್ಲಿ ಇದ್ದಿರಬಹುದೆಂಬ ನಂಬಿಕೆ ನನ್ನದು.
ಹೋಬಳಿ, ಗ್ರಾಮ ಮಟ್ಟದಲ್ಲಂತೂ ಇಲ್ಲ.
ಡಾ. ಉಪಾಧ್ಯಾಯರು, ಪುತ್ತೂರಿನ ಶ್ವಾನ ಪ್ರೇಮಿ ಗಣೇಶ್ ಭಟ್ ಕೇರ ಅವರೊಂದಿಗೆ ಸೇರಿ ಪ್ರತಿ ತಿಂಗಳು ಕ್ಯಾಂಪ್ ಮಾಡಿ, ಅದೆಷ್ಟೊ ಬೀದಿನಾಯಿ, ಬೆಕ್ಕುಗಳಿಗೆ ಕಡಿಮೆ ದರದಲ್ಲಿ ಅಪರೇಶನ್ ಮಾಡಿಸಿದ ಪುಣ್ಯವಂತರು. ಅವರ ಬಗ್ಗೆ ನಂಗೆ ಗೌರವ ಬರಲು ಇನ್ನೊಂದು ಘಟನೆ ಇದೆ. ವಿಷ ತಿಂದು ರಕ್ತವಾಂತಿ ಮಾಡಿ ಸಾಯುವ ಘಳಿಗೆಯನ್ನು ಎಣಿಸುತ್ತಿದ್ದ, ನಮ್ಮ ಬಿಲ್ಲು ಬೆಕ್ಕನ್ನು ಅದೊಮ್ಮೆ ಅವರಲ್ಲಿಗೆ ತಗೊಂಡು ಹೋಗಿದ್ದೆ. ಸತ್ತ ಸ್ಥಿತಿಯಲ್ಲಿದ್ದ ಬೆಕ್ಕನ್ನು ಎರಡೇ ಇಂಜೆಕ್ಷನ್‌ನಲ್ಲಿ ಮನೋಹರ್ ಉಪಾಧ್ಯಾಯರು ಬದುಕಿಸಿದರು.
ಈ ದಿನ ನನ್ನ ಮನೆ ಬಳಿ ಯಾರೋ ಬಿಟ್ಟು ಹೋಗಿದ್ದ ಬೆಕ್ಕೊಂದಕ್ಕೆ ಆಪರೇಶನ್ ಮಾಡಿಸಲು ಹೋಗಿದ್ದಾಗ ತರಹೇವಾರಿ ನಾಯಿ, ಬೆಕ್ಕುಗಳ ದರ್ಶನವಾಯಿತು. ಅಷ್ಟೊತ್ತಿಗೆ ಫಾರ್ಚೂನರ್ ಕಾರಲ್ಲಿ ಅರವತ್ತರ ಹೆಂಗಸೊಬ್ಬರು ಇಳಿದು ಟೋಕನ್ ಪಡೆದರು. ನನ್ನ ಜೊತೆಗಿದ್ದ ಲೋಕಲ್ ಬೆಕ್ಕು ನೋಡಿ ಮಾತಿಗಳಿದರು. ಮಂಗಳೂರಿನ ಶ್ರೀಮಂತ ಬಡಾವಣೆಯ ಮಹಿಳೆ ಅವರು. ಅವರ ಮನೆಮುಂದೆ ಒಂದು ಬೀದಿ ಹೆಣ್ಣು ನಾಯಿ ಹಸಿವಿನಿಂದ ಇದ್ದುದನ್ನು ನೋಡಿ ಬಿಸ್ಕೆಟ್ ಎಸೆದಿದ್ದರಂತೆ. ಅಮೇಲೆ ಇವರ ಬಗ್ಗೆ ನಾಯಿ ಕಾಳಜಿ ವಹಿಸಲಾರಂಭಿಸಿತು. ಇವರಿಗೂ ಮಾತೃ ಹೃದಯ ಮಿಡಿದು ಮಿಕ್ಕಿದ ಅನ್ನ, ಸಾರನ್ನು ಅದಕ್ಕೆ ಹಾಕುತ್ತಿದ್ದರು. ನಿಷ್ಠೆಯಿಂದ ಮನೆ ಮುಂದಿನ ಮಾರ್ಗದಲ್ಲೇ ಕೂತು ಮನೆ ಕಾಯುತ್ತಿತ್ತು. ಮೈಲು ದೂರದಿಂದಲೇ ಇವರ ವಾಹನದ ಪರಿಚಯ ಹಿಡಿಯುತ್ತಿತ್ತು. ಇನ್ನು ಮರಿ ಇಟ್ಟು ತೊಂದರೆಯಾಗದಿರಲೆಂದು ಇವರೇ ಸಂತಾನಹರಣ ಆಪರೇಶನ್ ಮಾಡಿಸಿದ್ದರು. ಮೊನ್ನೆ ರಾತ್ರಿ ಇವರು ಮನೆಯಲ್ಲಿ ಇರಲಿಲ್ಲವಂತೆ. ಅವತ್ತು ರಾತ್ರಿ ಮನೆಯ ಮುಂದೆ ಕಾವಲು ಕುಳಿತಿದ್ದ ನಾಯಿಗೆ ಯಾವುದೋ ವಾಹನ ಹೊಡ್ಕೊಂಡು ಹೋಗಿ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ನೋವಿನಿಂದ ನಾಯಿ ಒದ್ದಾಡುತ್ತಿದ್ದುದನ್ನು ಕಂಡ ಇವರು ಅದನ್ನು ಕಾರಲ್ಲಿ ಹಾಕಿಕೊಂಡು ತಂದಿದ್ದರು. “ಇದು ಈ ಆಸ್ಪತ್ರೆಗೆ ಎರಡನೆ ವಿಸಿಟ್. ಹೇಗಾದರೂ ಮಾಡಿ ಇದನ್ನು ಬದುಕಿಸಿಕೊಳ್ಳಬೇಕು ಇವರೆ. ಸದ್ಯ ಇದು ಮಲಗಿದ್ದಲ್ಲಿಗೇ ಊಟ ತಗೊಂಡು ಹೋಗಿ ಹಾಕಿ ಬರ್ತೇನೆ. ಪಾಪ, ಅದೂ ಒಂದು ಜೀವವೇ ಅಲ್ಲಾ ಅಂದ್ರು. ಆ ತಾಯಿಯ ಮಾತು ಕೇಳಿ ಮಾತು ಹೊರಡದೆ ಕಣ್ಣು ಮಂಜಾಯಿತು…
ಮೂಕಪ್ರಾಣಿಗಳ ಜೀವ ಉಳಿಸಿ…:
ಪ್ರತಿಯೊಂದು ಊರಿನಲ್ಲಿಯೂ ಅನಾಥ ನಾಯಿ, ಬೆಕ್ಕುಗಳಿರುತ್ತವೆ. ಮನುಷ್ಯರನ್ನು ಅತಿಯಾಗಿ ಹಚ್ಚಿಕೊಳ್ಳುವ ಪ್ರಾಣಿಗಳಿವು. ಅವು ನಮ್ಮಿಂದ ಬಯಸುವುದು ಎರಡು ತುತ್ತು ಅನ್ನ, ಚೂರು ವಿಶ್ವಾಸವನ್ನು ಮಾತ್ರ. ಅದಕ್ಕೆ ಪ್ರತಿಯಾಗಿ ಅಪಾರ ನಿಷ್ಠೆ ಪ್ರದರ್ಶಿಸುತ್ತವೆ. ಪ್ರೀತಿ ತೋರಿಸುತ್ತವೆ. ಅನಾಥ ನಾಯಿ ಅಥವಾ ಬೆಕ್ಕು ಎದುರು ಬಂದಾಗ ಅವುಗಳಿಗೆ ಗದರಿಸುವ/ ಹೊಡೆಯುವ ಮುನ್ನ ಒಂದು ಸರಳ ಸತ್ಯವನ್ನು ತಿಳಿಯಬೇಕು: ಏನೆಂದರೆ, ಈ ಪ್ರಾಣಿಗಳಿಂದ ಮನುಷ್ಯನಿಗೆ/ ಮನೆಗೆ ಖಂಡಿತ ತೊಂದರೆ ಇಲ್ಲ. ಈ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆ , ತಾಲೂಕಿನಲ್ಲಿಯೂ ಪ್ರಾಣಿ ಸಂರಕ್ಷಣಾ ಕೇಂದ್ರಗಳಿವೆ. ನಿಮ್ಮ ಸುತ್ತಲಿನ ಪರಿಸರದಲ್ಲಿ ಅನಾಥ ನಾಯಿ, ಬೆಕ್ಕು ಕಾಣಿಸಿದರೆ ನಿಮ್ಮ ಊರಿನಲ್ಲಿ ಇರುವ ಅಥವಾ ಸಮೀಪದ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ತಿಳಿಸಿ. ಸಾಧ್ಯವಾದರೆ ನೀವೇ ತಗೊಂಡು ಹೋಗಿ ಬಿಟ್ಟುಬಂದರೂ ನಡೆಯುತ್ತದೆ. ಹಾಗೆ ಮಾಡಿದರೆ ಒಂದು ಪ್ರಾಣಿಯ ಜೀವ ಉಳಿಸಿದ ಪುಣ್ಯವೂ ನಿಮ್ಮದಾಗುತ್ತದೆ.
-ಹರೀಶ್ ಮಂಜೊಟ್ಟಿ