Advertisement

ಹಿಡಿತ ಸಾಧಿಸಲು ದಿಗ್ಗಜರ ಕಾಳಗ: ಸಿದ್ದು-ಗೌಡರಿಂದ ತಂತ್ರ-ಪ್ರತಿತಂತ್ರ

12:30 AM Mar 13, 2019 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದ ದಿಗ್ಗಜರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆ ಸೀಟು ಹಂಚಿಕೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಒಂದೊಂದೇ ‘ದಾಳ’ ಉರುಳಿಸುತ್ತಿದ್ದಾರೆ. ಇಬ್ಬರಿಗೂ ಮೈತ್ರಿಯ ಜತೆ ಜತೆಗೆ ತಂತಮ್ಮ ನೆಲೆಗಳನ್ನು ಭದ್ರಪಡಿಸಿಕೊಳ್ಳುವ ಹವಣಿಕೆ. ಹೀಗಾಗಿ ಇಬ್ಬರೂ ಅಸ್ತ್ರ -ಪ್ರತ್ಯಸ್ತ್ರಗಳನ್ನು ಬಿಡುತ್ತ ಲೇ ಇದ್ದಾರೆ. ಹೀಗಾಗಿ, ಮೈತ್ರಿಗಳ ನಡುವಿನ ಸೀಟು ಹೊಂದಾಣಿಕೆ ವಿಳಂಬವಾಗುತ್ತಲೇ ಇದೆ. ಒಂದೆಡೆ ಸೀಟು ಹಂಚಿಕೆಯಲ್ಲಿ ಹಾಸನ, ಮಂಡ್ಯ, ಶಿವಮೊಗ್ಗ ಜತೆಗೆ ತುಮಕೂರು ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಉತ್ತರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ದೇವೇಗೌಡರು ಪ್ರಭಾವ ಹೆಚ್ಚಿಸಿಕೊಂಡು ಜೆಡಿಎಸ್‌ಗೆ ಭದ್ರ ನೆಲೆ ಕಲ್ಪಿಸಲು ಪಟ್ಟು ಹಾಕುತ್ತಿದ್ದಾರೆ. ದೇವೇಗೌಡರಂತೆ ಪಳಗಿರುವ ಸಿದ್ದರಾಮಯ್ಯ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಭವಿಷ್ಯದಲ್ಲಿ ಕಾಂಗ್ರೆಸ್‌ನಲ್ಲಿಹಿಡಿತಕ್ಕೆ ‘ಅಸ್ತ್ರ’ ಪ್ರಯೋಗಿಸುತ್ತಿದ್ದಾರೆ.

Advertisement

ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಹಾಸನ, ಮಂಡ್ಯ ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗಿಬರಬಹುದು ಎಂಬುದು ಗೊತ್ತಿದ್ದರೂ ಮಾಜಿ ಸಚಿವ ಎ.ಮಂಜು ವರಾತ ತೆಗೆದು ದೇವೇಗೌಡರು ಹಾಸನದಲ್ಲಿ ಸ್ಪರ್ಧೆ ಮಾಡಿದರೆ ಮಾತ್ರ ಎಂದು ಷರತ್ತು ವಿಧಿಸಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ರಾಜಕೀಯ ಪ್ರವೇಶ ಘೋಷಣೆ ಮಾಡಿ ಜೆಡಿಎಸ್‌ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ ನಾಯಕರ ಸಹಕಾರ  ದಿಂದ ಅಖಾಡಕ್ಕಿಳಿದಿರುವುದರ ಹಿಂದಿರುವ ಪ್ರೇರಕ ಶಕ್ತಿಯ ಬಗ್ಗೆ ನಾನಾ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.

ಒಂದೆಡೆ ಮಂಡ್ಯ-ಹಾಸನ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಬೆಂಗಳೂರು ಉತ್ತರ ಬೇಕಾದರೂ ಸರಿ. ತುಮಕೂರು-ಚಿಕ್ಕಬಳ್ಳಾಪುರ ಸಾಧ್ಯವಿಲ್ಲ ಎಂಬ ಗಟ್ಟಿ ಧ್ವನಿ ಕಾಂಗ್ರೆಸ್‌ ನಲ್ಲಿ ಮೊಳಗುತ್ತಿರುವುದು. ಮೈಸೂರು ಕ್ಷೇತ್ರದ ವಿಚಾರದಲ್ಲಂತೂ ಕಡ್ಡಿ ತುಂಡಾದಂತೆ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲೇ ಸಿದ್ದರಾಮಯ್ಯ ಮಾತನಾಡಿರುವುದು ನೋಡಿದರೆ ಲೋಕಸಭೆ ಚುನಾವಣೆ ನೆಪ ಮಾತ್ರ. ಭವಿಷ್ಯದ ರಾಜಕಾರಣ ದೂರಾಲೋಚನೆ ಇರುವುದು ಕಂಡುಬರುತ್ತದೆ.

ಕಾಂಗ್ರೆಸ್‌-ಜೆಡಿಎಸ್‌ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರೂ ಮುಂದೆ ಇದೇ ರೀತಿಯ ಪರಿಸ್ಥಿತಿ ಇರುತ್ತದೆ ಎಂದು ಹೇಳಲು ಸಾಧ್ಯ ವಿಲ್ಲ. ಈಗ ಪಕ್ಷದ ಅಸ್ತಿತ್ವ ಕಳೆದುಕೊಂಡರೆ ಮತ್ತೆ ಪಕ್ಷ ಬೆಳೆಸಬೇಕಾದರೆ ವರ್ಷಗಳು ಬೇಕಾಗುತ್ತದೆ ಎಂಬ ವಾದ ಮುಂದಿಟ್ಟುಕೊಂಡು ಅದಕ್ಕೆ ಮೂಲ ಕಾಂಗ್ರೆಸ್ಸಿಗರ ಬೆಂಬಲವನ್ನು ಪಡೆದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಕಾರ್ಯತಂತ್ರ ಹಣೆದಿದ್ದಾರೆ. ಇದೇ ಕಾರಣಕ್ಕೆಹೈಕಮಾಂಡ್‌ಗೂ ಸೀಟು ಹಂಚಿಕೆ ಕಗ್ಗಂಟಾಗಿದೆ. ಆದರೆ, ಸಿದ್ದರಾಮಯ್ಯ ಅವರನ್ನೂ ಚೆನ್ನಾಗಿಯೇ ಬಲ್ಲ ಎಚ್‌ .ಡಿ.ದೇವೇಗೌಡರು ಮೊದಲಿಗೆ ಮೈಸೂರು ಕ್ಷೇತ್ರಕ್ಕೆ ಬೇಡಿಕೆ ಇಡುವ ಮೂಲಕ ಪ್ರತಿತಂತ್ರವನ್ನೇ ಹಣೆದಿದ್ದಾರೆ. ದೇವೇಗೌಡರು ಸ್ಪರ್ಧೆ ಮಾಡುವ ಕ್ಷೇತ್ರ ಯಾವುದೇ ಆಗಿರಲಿ ಕಾಂಗ್ರೆಸ್‌ ಗೆದ್ದಿದ್ದರೂ ಅವರು ಬಯಸಿದರೆ ಬಿಟ್ಟುಕೊಡಬೇಕು. ಆ ಬಗ್ಗೆ ಯಾರೂ ತಕರಾರು ತೆಗೆಯಬಾರದು ಎಂದು ಕಾಂಗ್ರೆಸ್‌ಹೈಕಮಾಂಡ್‌ ಹೇಳಿತ್ತು. ಆ ರೀತಿ ಹೇಳುವ ಸಂದರ್ಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಅಥವಾ ತುಮಕೂರು, ಇಲ್ಲವೇ ಚಿಕ್ಕಬಳ್ಳಾಪುರ ಜೆಡಿಎಸ್‌ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ನದಾಗಿತ್ತು. ಆದರೆ, ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ ತಲೆಕೆಳಗು ಮಾಡಿ ಮೈಸೂರು ಕ್ಷೇತ್ರವೇ ನಮಗೆ ಬೇಕು. ದೇವೇಗೌಡರು ಅಲ್ಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಜೆಡಿಎಸ್‌ ಇದೀಗ ಪಟ್ಟು ಹಿಡಿದಿದೆ. ಜತೆಗೆ, ಮೈಸೂರು ಜೆಡಿಎಸ್‌ಗೆ ಬಿಟ್ಟುಕೊಡೆದಿದ್ದರೆ ಮಂಡ್ಯದಲ್ಲಿ ಸ್ಪರ್ಧೆ ಬಯಸಿರುವ ಸುಮಲತಾ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿಸಿ ಎಂಬ ಸಂದೇಶ ರವಾನಿಸಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೂ ನುಂಗಲಾರದ ತುತ್ತಾಗಿದೆ.

ಹಾಗೆಂದು ಈ ಹಂತದಲ್ಲಿ ಫ್ರೆಂಡ್ಲಿ ಫೈಟ್‌ ಅಥವಾ ಹೊಂದಾಣಿಕೆ ಬೇಡ ಎಂಬ ನಿಲುವು ಕಷ್ಟ. ಏಕೆಂದರೆ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ. ಕೋಲಾರ, ಚಿತ್ರದುರ್ಗ, ದಾವಣಗೆರೆ, ಬೀದರ್‌, ಕಲಬುರಗಿ , ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಮೇಲೆ ಹಿಡಿತ ಹೊಂದಿರುವ ಜೆಡಿಎಸ್‌ ಬೆಂಬಲವೂ ಕಾಂಗ್ರೆಸ್‌ಗೆ ಸದ್ಯಕ್ಕೆ ಬೇಕಾಗಿದೆ. ಅದೇ ರೀತಿ ಜೆಡಿಎಸ್‌ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ನ ನೆರವು ಅಗತ್ಯ. ಅಂತಿಮವಾಗಿ ಯಾರ ಕೈ ಮೇಲಾಗುತ್ತದೆ ನೋಡಬೇಕಿದೆ. ಪಕ್ಷಗಳ ಸ್ಥಿತಿಗತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಮೂರು ದಿನಗಳು ಕಳೆದಿದ್ದು, ಎಲ್ಲ ರಾಜಕೀಯ ಪಕ್ಷಗಳು ತೂಗಿ ಅಳೆದು ಲೆಕ್ಕಾಚಾರ ಹಾಕುತ್ತಿವೆ.

Advertisement

ಕಾಂಗ್ರೆಸ್‌: ತುಮಕೂರು ಹೊರತುಪಡಿಸಿ ಉಳಿದ 9 ಹಾಲಿ ಸಂಸದರಿಗೆ ಪ್ರಚಾರ ಆರಂಭಿಸಲು ಸೂಚನೆ. ಮಾರ್ಚ್‌ 14 ರ ಕಾಂಗ್ರೆಸ್‌ ಚುನಾವಣಾಸಮಿತಿ ಸಭೆಯಲ್ಲಿ ಹೊಂದಾಣಿಕೆ ಅಂತಿಮಗೊಳ್ಳಲಿದೆ.

ಜೆಡಿಎಸ್‌: ಕಾಂಗ್ರೆಸ್‌ ಚುನಾವಣಾ ಸಮಿತಿ ನಿರ್ಧಾರವನ್ನು ಕಾಯುತ್ತಿದೆ.

ಬಿಜೆಪಿ: ಕಾಂಗ್ರೆಸ್‌-ಜೆಡಿಎಸ್‌ ಸೀಟು ಹಂಚಿಕೆಯನ್ನೇ ಕಾಯುತ್ತಿದ್ದು ಜತೆಗೆ, ಮಾ. 15ರ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳು ಅಂತಿಮಗೊಳ್ಳಬಹುದು.

ಮೈತ್ರಿಯಿಂದ ಜೆಡಿಎಸ್‌ಗೆ ಲಾಭ
ಒಂದೆಡೆ ಕಾಂಗ್ರೆಸ್‌, ಜೆಡಿಎಸ್‌ ಹೊಂದಾಣಿಕೆಯಲ್ಲಿ ಹೆಜ್ಜೆ ಹಾಕಲು ಹೆಣಗುತ್ತಿರುವಾಗಲೇ, ಕಾಂಗ್ರೆಸ್‌ನ ಮುಖಂಡ, ಮಾಜಿ ಸಚಿವ ಎ ಮಂಜು ಜೆಡಿಎಸ್‌ ವಿರುದ್ಧ  ಬಹಿರಂಗವಾಗಿ ಸೊಲ್ಲೆತ್ತಿದ್ದಾರೆ. “ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಯಿಂದ ಜೆಡಿಎಸ್‌ಗೆ ಮಾತ್ರ ಲಾಭವಾಗಲಿದೆ. ಮೈತ್ರಿ ಧರ್ಮವೆಂದರೆ ಇಬ್ಬರೂಪಾಲನೆ ಮಾಡಬೇಕು. ಆದರೆ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಗೊಳಿಸಲು ಜೆಡಿಎಸ್‌ ವ್ಯವಸ್ಥಿತ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ. ಮೈತ್ರಿಯಿಂದ ಜೆಡಿಎಸ್‌ ಕಾರ್ಯಕರ್ತರಿಗೂ ಲಾಭವಿಲ್ಲ. ಮೊಮ್ಮಕ್ಕಳನ್ನು ದಡ ಸೇರಿಸಲು ದೇವೇಗೌಡರು ಈ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next