Advertisement

ಲಾಕ್ ಡೌನ್ ಕಾರಣದಿಂದ ಅನ್ಯ ರಾಜ್ಯಗಳಲ್ಲಿ ಸಿಲುಕಿರುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ

08:07 AM Apr 30, 2020 | Hari Prasad |

ನವದೆಹಲಿ: ಕಳೆದ ಮಾರ್ಚ್ 25ರಂದು ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾದ ದಿನದಿಂದ ತಮ್ಮ ಸ್ವಂತ ಊರು, ಮನೆಗಳನ್ನು ತೊರೆದು ಬೇರೆ ಕಡೆಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಗೆ ಇದೀಗ ತಮ್ಮ ಮನೆಗಳನ್ನು ಸೇರಿಕೊಳ್ಳುವ ಸಮಯ ಒದಗಿಬಂದಿದೆ.

Advertisement

ಈ ಕುರಿತಾದಂತೆ ಕೇಂದ್ರ ಗೃಹ ಸಚಿವಾಲಯವು ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಅನ್ಯ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳು ತಮ್ಮ ರಾಜ್ಯಕ್ಕೆ ವಾಪಾಸಾಗಲು ಈ ಮಾರ್ಗಸೂಚಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಸಂಬಂಧಿತ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೇ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿರುತ್ತದೆ.

ಈ ರೀತಿಯಾಗಿ ತಮ್ಮ ಸ್ವಂತ ರಾಜ್ಯಕ್ಕೆ ಮರಳಲು ಬಯಸುವ ವ್ಯಕ್ತಿಗಳನ್ನು ಅವರು ಈಗ ಇರುವ ಸ್ಥಳದಲ್ಲಿ ಹಾಗೂ ಅವರು ತಲುಪುವ ಸ್ಥಳದಲ್ಲಿ ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಕಡ್ಡಾಯವಾಗಿರುತ್ತದೆ. ಮತ್ತು ಆ ಬಳಿಕ ಅಂತಹ ವ್ಯಕ್ತಿಗಳು ಬಳಿಕ ಸೂಚಿತ ನಿರ್ಧಿಷ್ಟ ಅವಧಿಯವರೆಗೆ ಗೃಹ ಅಥವಾ ಸಾಂಸ್ಥಿಕ ನಿರ್ಬಂಧದಲ್ಲಿರುವುದು (ಕ್ವಾರೆಂಟೈನ್) ಕಡ್ಡಾಯವಾಗಿರುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳೂ ಈ ಉದ್ದೇಶಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಹಾಗೂ ಈ ರೀತಿಯಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಅಲ್ಲಿಂದ ಕಳುಹಿಸಿಕೊಡಲು ಹಾಗೂ ತಮ್ಮ ಸ್ವಂತ ಪ್ರದೇಶದಲ್ಲಿ ಬರಮಾಡಿಕೊಳ್ಳಲು ಸೂಕ್ತ ನಿಯಮಾವಳಿಗಳನ್ನು ರೂಪಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಸರಕಾರಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ.

ಕೇಂದ್ರ ಗೃಹ ಇಲಾಖೆಯ ಈ ಹೊಸ ನಿರ್ದೇಶನದ ಪ್ರಕಾರ, ಲಾಕ್ ಡೌನ್ ಕಾರಣದಿಂದ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಇದೀಗ ತಮ್ಮ ಸ್ವಂತ ಊರುಗಳಿಗೆ ತಲುಪಲು ಹಾದಿ ಸುಗಮಗೊಂಡಂತಾಗಿದೆ.

Advertisement

ಈ ಉದ್ದೇಶಕ್ಕಾಗಿ ಬಸ್ಸು, ರೈಲು ಅಥವಾ ವಿಮಾನ ಸೇವೆಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಆಯಾಯ ರಾಜ್ಯ ಸರಕಾರಗಳಿಗೆ ಕೇಂದ್ರ ನೀಡಿದೆ. ಇದಕ್ಕಾಗಿ ಬಳಸುವ ಬಸ್ಸುಗಳನ್ನು ಸೂಕ್ತ ರೀತಿಯಲ್ಲಿ ಸೋಂಕುಮುಕ್ತಗೊಳಿಸಿರಬೇಕು ಹಾಗೂ ಸಾಮಾಜಿಕ ಅಂತರ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗೃಹ ಸಚಿವಾಲಯ ಸ್ಪಷ್ಟ ನಿರ್ದೇಶನ ನೀಡಿದೆ.

ಈ ರೀತಿಯ ತೆರವು ಕಾರ್ಯಾಚರಣೆಗೂ ಮೊದಲು ನಿರ್ಧಿಷ್ಟ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ರಾಜ್ಯಗಳು ಪರಸ್ಪರ ಸೂಕ್ತ ಸಮಾಲೋಚನೆಯನ್ನು ನಡೆಸಿಕೊಳ್ಳುವುದು ಅಗತ್ಯವಾಗಿರುತ್ತದೆ ಹಾಗೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಉದ್ದೇಶಕ್ಕಾಗಿ ತಮ್ಮ ರಾಜ್ಯದ ಗಡಿಗಳನ್ನು ಮುಕ್ತಗೊಳಿಸುವುದು ಅಗತ್ಯವಾಗಿರುತ್ತದೆ ಎಂದೂ ಸಹ ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ರೀತಿಯಾಗಿ ಅನ್ಯ ರಾಜ್ಯಗಳಿಂದ ತಮ್ಮ ಸ್ವಂತ ಊರಿಗೆ ಆಗಮಿಸಿದ ವ್ಯಕ್ತಿಗಳು ಅಲ್ಲಿನ ಜಿಲ್ಲಾಡಳಿತದ ನಿರ್ದೇಶನದನ್ವಯ ಕ್ವಾರೆಂಟೈನ್ ಗೆ ಒಳಗಾಗಬೇಕಾಗಿರುತ್ತದೆ ಮಾತ್ರವಲ್ಲದೇ ಅಂತಹ ವ್ಯಕ್ತಿಗಳು ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವುದೂ ಸಹ ಅಗತ್ಯವಾಗಿರುತ್ತದೆ. ಮತ್ತು ಇಂತಹ ವ್ಯಕ್ತಿಗಳ ಚಲನಚಲನಗಳ ಮೆಲೆ ನಿಗಾ ವಹಿಸಲು ಈ ವ್ಯಕ್ತಿಗಳು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಇವರಿಗೆ ಸರಕಾರ ಸೂಚಿಸುವ ಸಾಧ್ಯತೆಗಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next