Advertisement

ಬೀದಿ ಬದಿ ವ್ಯಾಪಾರಿಗಳ ದಿಢೀರ್‌ ಎತ್ತಂಗಡಿ : ಒಕ್ಕೂಟ ಅಸಮಾಧಾನ

11:32 PM Mar 26, 2019 | sudhir |

ಮಡಿಕೇರಿ: ಬೀದಿ ಬದಿ ವ್ಯಾಪಾರಿಗಳನ್ನು ಮುನ್ಸೂಚನೆ ನೀಡದೆ ದಿಢೀರ್‌ ಎತ್ತಂಗಡಿ ಮಾಡುವ ಮೂಲಕ ಬಡ ಕುಟುಂಬಗಳನ್ನು ಮಡಿಕೇರಿ ನಗರಸಭೆ ಬೀದಿಗೆ ತಳ್ಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕ ಹಾಗೂ ಮಡಿಕೇರಿ ತಾಲೂಕು ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದೆ.

Advertisement

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರೊಂದಿಗೆ ಅಸಹಾಯಕತೆ ವ್ಯಕ್ತಪಡಿಸಿದ ಸಂಘಟನೆಯ ಪ್ರಮುಖರು ಬೀದಿ ಬದಿ ವ್ಯಾಪಾರಿಗಳಿಗೆ ಮೂಲಭೂತ ಸೌಲಭ್ಯಗಳಿರುವ ಸೂಕ್ತ ಸ್ಥಳವನ್ನು ಗುರುತಿಸಿಕೊಡುವ ಮೂಲಕ ಸರಕಾರ‌ದ ಸೌಲಭ್ಯಗಳು ದೊರಕಿಸಿಕೊಡಲು ಸಹಕರಿಸ ಬೇಕೆಂದು ಮನವಿ ಮಾಡಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಆರ್‌.ಜಗದೀಶ್‌ ಮಾತನಾಡಿ ನಗರದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಬೆಳ್ಳಂಬೆಳಗ್ಗೆ ನಗರಸಭೆ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ತೆರವುಗೊಳಿಸಿದ್ದು, ಬಡ ಕುಟುಂಬಗಳು ಬೀದಿಗೆ ಬಿದ್ದಂತಾಗಿವೆೆ. ತಮ್ಮ ಮಕ್ಕಳ ವಿದ್ಯಾಭ್ಯಾಸ‌ಕ್ಕೆ ಅಡಚಣೆಯಾಗಿದ್ದು, ಮುಂದಿನ ಜೀವನದ ಬಗ್ಗೆ ಚಿಂತಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀದಿ ಬದಿ ವ್ಯಾಪಾರಿಗಳು ಸರಕಾರ‌ದ ಸೌಲಭ್ಯ ಪಡೆಯಲು ಅನುದಾನ ಪಡೆಯಬೇಕಾದರೆ ವ್ಯಾಪಾರದ ಸ್ಥಳದ ನಿಖರ ಮಾಹಿತಿ ನೀಡಬೇಕಾಗುತ್ತದೆ. ಆದರೆ ಅಧಿಕಾರಿ ವರ್ಗ ಬಡ ವ್ಯಾಪಾರಸ್ಥರ ಮೇಲೆ ಅಧಿಕಾರ ಪ್ರಯೋಗ ಮಾಡುತ್ತಿರುವುದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಒಕ್ಕೂಟದ ರಾಜ್ಯ ಸಂಚಾಲಕ ಎನ್‌.ಗುರುಸ್ವಾಮಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಮುನ್ಸೂಚನೆ ನೀಡದೆ ದಿಢೀರ್‌ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಧಿಕಾರಿಗಳ ಈ ರೀತಿಯ ವರ್ತನೆಯಿಂದ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯ ದಿದ್ದಲ್ಲಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಒಕ್ಕೂಟದ ಜಿಲ್ಲಾ ಉಸ್ತುವಾರಿ ಕೆ.ರವಿ, ಉಪಾಧ್ಯಕ್ಷ ಕೆ.ಕೆ.ದಿನೇಶ್‌, ಕಾರ್ಯದರ್ಶಿ ಆರ್‌.ವಿ.ಸತೀಶ್‌, ಗೌರವಾಧ್ಯಕ್ಷ‌ ಕೆ.ಬಿ.ರಾಜು, ಮಾಧ್ಯಮ ಸಲಹೆಗಾರ ಕೆ.ಟಿ.ಶ್ರೀನಿವಾಸ್‌, ಖಜಾಂಚಿ ಸೋಮಣ್ಣ ಹಾಗೂ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗಿರೀಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next