Advertisement
ಬೆಂಗಳೂರು: ಐವತ್ತಕ್ಕಿಂತ ಹೆಚ್ಚು ಪ್ಲ್ರಾಟ್‌ಗಳಿರುವ ವಸತಿ ಸಂಕೀರ್ಣಗಳು (ಅಪಾರ್ಟ್‌ಮೆಂಟ್) ಡಿ.31ರೊಳಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಿಕೊಳ್ಳದಿದ್ದರೆ ಜನವರಿ 1ರಿಂದ ದಂಡ ಪಾವತಿಸಬೇಕಾಗುತ್ತದೆ.
Related Articles
Advertisement
ಎಸ್‌ಟಿಪಿ ಕಡ್ಡಾಯ ಯಾರಿಗೆ ಅನ್ವಯ?: 50ಕ್ಕಿಂತಲೂ ಹೆಚ್ಚಿನ ಮನೆಗಳಿರುವ ಹಳೆಯ ಅಪಾರ್ಟ್‌ಮೆಂಟ್‌ಗಳು, ಹೊಸದಾಗಿ ನೀರಿನ ಸಂಪರ್ಕ ಪಡೆಯುವ 20ಕ್ಕೂ ಹೆಚ್ಚು ಮನೆಗಳಿರುವ ಅಪಾರ್ಟ್‌ಮೆಂಟ್‌ಗಳು ಅಥವಾ 5 ಸಾವಿರ ಚದರ ಮೀಟರ್‌ಗಳಲ್ಲಿ ನಿರ್ಮಿಸಲಾಗುವ ವಸತಿ ಉದ್ದೇಶಿತ ಕಟ್ಟಡಗಳಿಗೆ ಎಸ್‌ಟಿಪಿ ಕಡ್ಡಾಯ ನಿಯಮ ಅನ್ವಯವಾಗಲಿದ್ದು, ಎಸ್‌ಟಿಪಿ ಅಳವಡಿಸಿಕೊಳ್ಳದವರಿಗೆ ಜನವರಿ 1ರಿಂದ ದಂಡ ಬೀಳಲಿದೆ ಎಂದು ಮಂಡಳಿಯ ನಿರ್ವಹಣಾ ವಿಭಾಗದ ಮುಖ್ಯ ಅಭಿಯಂತರ ಎಚ್.ಎಂ.ರವೀಂದ್ರ ತಿಳಿಸಿದರು. ಇದರೊಂದಿಗೆ 2 ಸಾವಿರ ಚ.ಮೀ.ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಉದ್ದೇಶಿತ ಕಟ್ಟಡಗಳು, 5 ಸಾವಿರ ಚ.ಮೀ.ಗೂ ಹೆಚ್ಚಿನ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಶಿಕ್ಷಣ ಸಂಸ್ಥೆಗಳು, 10 ಎಕರೆ ಅಥವಾ ಅದಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಾಣವಾಗುವ ಟೌನ್‌ಶಿಪ್ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಎಸ್‌ಟಿಪಿ ಅಳವಡಿಕೆ ಕಡ್ಡಾಯವಾಗಿರುತ್ತದೆ ಎಂದರು. ದಂಡದ ಪ್ರಮಾಣವೇನು?: ಗೃಹ ಸಂಪರ್ಕಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕದ ಮೇಲೆ ಮೊದಲು ಮೂರು ತಿಂಗಳು ಶೇ.25ರಷ್ಟು, ನಂತರದ ತಿಂಗಳಿನಿಂದ ಶೇ.50ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಇನ್ನು ಗೃಹೇತರ ಸಂಪರ್ಕಗಳಲ್ಲಿ ಮೊದಲು ಮೂರು ತಿಂಗಳು ನೀರಿನ ಬಿಲ್‌ನ ಶೇ.50ರಷ್ಟು ಹಾಗೂ ನಗರದ ತಿಂಗಳಲ್ಲಿ ಶೇ.100ರಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ರವೀಂದ್ರ ಎಚ್ಚರಿಕೆ ನೀಡಿದರು. 3769 ಕಟ್ಟಡಗಳಿಗೆ ದಂಡ ವಾಪಸ್: 2016ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ 20 ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿದರಿಂದ 3769 ಕಟ್ಟಡಗಳಿಗೆ ದಂಡ ವಿಧಿಸಲಾಗಿತ್ತು. ಆ ಸಂದರ್ಭದಲ್ಲಿ ಮೂರು ಸಭೆಗಳನ್ನು ಸಾರ್ವಜನಿಕರೊಂದಿಗೆ ನಡೆಸಿ ಸಲಹೆಗಳನ್ನು ಪಡೆದು, 20 ಮನೆಗಳಿರುವ ಅಪಾರ್ಟ್‌ಮೆಂಟ್‌ಗಳಿಗೆ ನಿಯಮ ಮಾರ್ಪಾಡುಗೊಳಿಸುವಂತೆ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಸರ್ಕಾರ ಹಳೆಯ 50 ಮನೆಗಳಿರುವ ಮತ್ತು ಹೊಸದಾಗಿ ನಿರ್ಮಾಣಗೊಳ್ಳುವ 20 ಮತ್ತು ಅದಕ್ಕಿಂತ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಅಳವಡಿಕೆ ಕಡ್ಡಾಯಗೊಳಿಸಿದೆ. ಆ ಹಿನ್ನೆಲೆಯಲ್ಲಿ ಈ ಹಿಂದೆ 3769 ಕಟ್ಟಡಗಳಿಗೆ ವಿಧಿಸಲಾಗಿದ್ದ ದಂಡ ವಾಪಸ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಂಡಳಿಯ ತ್ಯಾಜ್ಯ ನೀರು ನಿರ್ವಹಣಾ ವಿಭಾಗದ ಮುಖ್ಯ ಅಭಿಯಂತರ ಸತೀಶ್ ಹಾಜರಿದ್ದರು. 746 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್: ಬೆಳ್ಳಂದೂರು ಕೆರೆಯಲ್ಲಿ ತೀವ್ರ ಪ್ರಮಾಣದಲ್ಲಿ ಕಲುಷಿತಗೊಂಡ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಜಂಟಿ ಪರಿಶೀಲನೆ ವೇಳೆ ಎಸ್‌ಟಿಪಿ ಅಳವಡಿಸದ 746 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಇದರೊಂದಿಗೆ ಎಸ್‌ಟಿಪಿ ಅಳವಡಿಸದ ಕಟ್ಟಡಗಳು ತ್ಯಾಜ್ಯ ನೀರನ್ನು ಮೈಸೂರು ರಸ್ತೆಯ ವೃಷಭಾವತಿ ಕಣಿವೆಯಲ್ಲಿರುವ ಜಲಮಂಡಳಿಗೆ ಸರಬರಾಜು ಮಾಡಿ ಸಂಸ್ಕರಿಸಲು ಮುಂದಾಗುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ಆದರೆ, ಕೆಲವು ವಾಣಿಜ್ಯ ಸಂಸ್ಥೆಗಳು ಮಾತ್ರವೇ ಅದನ್ನು ಅನುಸರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.