Advertisement
ಚಂದ್ರಶೇಖರ ಕಂಬಾರರು ನನಗೆ ಮೇಷ್ಟ್ರಾಗಿದ್ದರು. ಹಂಪಿಯ ವಿರೂಪಾಕ್ಷ ದೇವಾಲಯದ ಎದುರಿನ ಸಾಲು ಮಂಟಪವೇ ನಮ್ಮ ವಿಶ್ವವಿದ್ಯಾಲಯ. ಅಲ್ಲಿದ್ದ ಕಂಬಗಳಿಗೆ ಬೆಡ್‌ಷೀಟೋ, ರಟ್ಟೋ ಸುತ್ತಿದರೆ ಅದೇ ಕಾಲೇಜು. ಇಂಥ ಕಡೆಯಲ್ಲೂ ಕಂಬಾರರು ತನ್ಮಯರಾಗಿ ಪಾಠ ಮಾಡುತ್ತಿದ್ದರು. ವಿದ್ಯಾರ್ಥಿಗಳನ್ನು ವಿಷಯದಲ್ಲಿ ಅದ್ದಿ, ಮೀಯಿಸಿ ಹೊರತರುತ್ತಿದ್ದರು. ಆ ಸಾಲು ಮಂಟಪದ ಕಾಲೇಜಿನ ಮೂಲೆಯೊಂದರಲ್ಲಿ ಪುಸ್ತಕಗಳು ತುಂಬಿದ್ದವು. ಬೇಕಾದಾಗ ತೆಗೆದು ಕೊಂಡು ಓದುತ್ತಿದ್ದೆವು. ಒಂದು ದಿನ ಎಂದಿನಂತೆ ಬಂದು ನೋಡುತ್ತೇವೆ: ಒಂದೇ ಒಂದು ಪುಸ್ತಕವೂ ಇಲ್ಲ. ತುಂಗಭದ್ರೆ ಮುನಿದು, ವಿರೂಪಾಕ್ಷ ದೇವಾಲಯದ ಸುತ್ತ ಪ್ರದಕ್ಷಿ ಹಾಕಿದ್ದರಿಂದ ನಮ್ಮ ಪಬ್ಲಿಕ್ ಲೈಬ್ರರಿ ಅದರಲ್ಲಿ ಮಿಂದು ನದಿ ಸೇರಿಬಿಟ್ಟಿದೆ. ಆ ದಿನ ಕಂಬಾಬರರಿಗೆ ಇನ್ನಿಲ್ಲದ ನೋವಾಗಿ, ಎಲ್ಲ ಕಡೆ ದೊಡ್ಡ ಸುದ್ದಿಯಾಯಿತು. ಮಾರನೆ ದಿನ ನಾನು ಮತ್ತು ಕಂಬಾರರು ಅಳಿದುಳಿದ ಪುಸ್ತಕಗಳನ್ನು ಒಟ್ಟುಗೂಡಿಸಿದ್ದು ಇನ್ನೂ ನೆನಪಿದೆ.
Related Articles
Advertisement
ನಾನು ಎನ್‌ಜಿ ಇಎಫ್ನಲ್ಲಿ ಕೆಲಸ ಮಾಡುತ್ತಿದ್ದಾಗ, ಕಂಬಾರರ ಜೋಕುಮಾರಸ್ವಾಮಿ ನಾಟಕ ನಿರ್ದೇಶಿಸಿದ್ದೆ. ಚಂದ್ರು ಲೈಟಿಂಗ್, ಗಂಗರಾಜ್, ಅಂದರೆ ಈಗಿನ ಹಂಸಲೇಖರ ಸಂಗೀತವಿತ್ತು. ಬಹಳ ಅದ್ಬುತವಾಗಿ ಮೂಡಿ ಬಂತು. ಅದರಲ್ಲಿ ನೂನೂ ಪಾತ್ರ ಮಾಡಿದ್ದೆ. ನಾಟಕ ಮಾಡಲು ಕಂಬಾರರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಕಂಬಾರರು ಬಹಳ ಕೋಪಿಷ್ಟರು, ಸಿಡುಕುತ್ತಾರೆ ಅಂತೆಲ್ಲ ಪ್ರಚಾರದಷ್ಟೇ ಅಪಪ್ರಚಾರವೂ ಇತ್ತು. ಹೀಗಾಗಿ, ಅವರಲ್ಲಿ ಅನುಮತಿ ಕೇಳುವ ಧೈರ್ಯ ಇರಲಿಲ್ಲ. ನಮ್ಮ ನಾಟಕದ ಯಶಸ್ಸು ಹೇಗೋ ಕಂಬಾರರ ಕಿವಿಗೆ ತಲುಪಿ ಬಿಟ್ಟಿತ್ತು. ನನಗೆ ಹೇಳದೇ ಕೇಳದೆ ನಾಟಕ ಮಾಡ್ಯಾನಲ್ಲ- ಲೇ, ಆ ಪ್ರಕಾಶನ ಕರಕೊಂಡು ಬನ್ನಿ ಅಂತ ಗುಟುರು ಹಾಕಿ ಹೇಳಿ ಕಳುಹಿಸಿದ್ದರು. ನಾನು ಹೋಗಲಿಲ್ಲ. ಎರಡು ಮೂರು ಬಾರಿ ಪುನರಾವರ್ತನೆಯಾದ ಮೇಲೆ ವಿಧಿಯಿಲ್ಲದೇ ನಾಲ್ಕನೇ ಬಾರಿಗೆ ಕೆಂಗೇರಿ ಉಪನಗರದಲ್ಲಿದ್ದ ಅವರ ಮನೆಗೆ ಹೊಕ್ಕರೆ, ಕಂಬಾರರು ಮುಖದಲ್ಲಿ ಕೋಪ ಇರಿಸಿಕೊಂಡು ಕುಳಿತಿದ್ದರು.
ನನ್ನ ನೋಡುತ್ತಿದ್ದಂತೆ “ಪ್ರಕಾಶ, ನಿನ್ನದೋ ಈ ಕೆಲಸ? ನಿನ್ನನ್ನ, ಶೂಲಕ್ಕೆ ಏರಿಸಿಬಿಡ್ತೀನಿ. ಲೇಖಕರಿಗೆ ಗೌರವಿಸಬೇಕು ಅಂತ ಗೊತ್ತಾಗಲ್ವ? ಹೇಳದೆ ಕೇಳದೆ ನನ್ನ ನಾಟಕ ಮಾಡಿದ್ದೀಯ. ಈ ಫ್ಯಾಕ್ಟರೀ ಅವ್ರು ಅದುಹೇಗೆ ನಾಟಕ ಮಾಡ್ತಾರೋ, ಏನೋ’ ಕೋಪದಿಂದ ಹುಟ್ಟುವ ಕೆಂಪಿನ ರಂಗನ್ನು ಮುಖ ಪೂರ್ತಿ ಏರಿಸಿಕೊಂಡು ಅಂದರು.
“ನೀನು ಮೂರು ತಪ್ಪು ಮಾಡಿದ್ದೀಯ.1) ನನ್ನ ಅನುಮತಿ ಇಲ್ಲದೇ ನಾಟಕವಾಡಿದ್ದು, 2) ಗೌರವಧನ ಕೊಡದೇ ಇರುವುದು, 3) ಈ ಎರಡೂ ಬಿಡು. ನಾಟಕ್ಕಕ್ಕಾದರೂ ಕರೆಯಬೇಕಲ್ಲ.. ಅದನ್ನೂ ಮಾಡಿಲ್ಲ. ಹೇಳು, ನಿನ್ನ ಏನು ಮಾಡಬೇಕು ಈಗ’ ಎಂದು ಮತ್ತೆ ಪ್ರಶ್ನೆ ಎಸೆದರು. ನಾನು ಹಾಗೇ ಸುಮ್ಮನೆ ಕೂತಿದ್ದೆ. ಮೊದಲು ಎರಡು ಪ್ರಶ್ನೆಗಳನ್ನು ಎಸೆದಾಗ ಗುಂಡಿಗೆ ದಡ ದಡ ಅಂದಿತು. ಕೊನೆ ಪ್ರಶ್ನೆಗೆ ಕೇಳುವಾಗ ಅರ್ಥವಾಗಿದ್ದು- ಅವರನ್ನು ನಾಟಕಕ್ಕೆ ಕರೆಯದೇ ಇದ್ದುದರಿಂದ ಮತ್ತಷ್ಟು ಬೇಸರವಾಗಿದೆ ಅಂತ. “ಅಲ್ಲಯ್ನಾ, ಅವನ್ಯಾರೋ ರಾಜ ಅನ್ನೋನು ಸಂಗೀತ ಅದ್ಭುತವಾಗಿ ಮಾಡಿದ್ದಾನಂತೆ. ನನಗೆ ನೋಡೋಕೆ ಬಾ ಅಂತ ಕರೆಯೋದಲ್ವಾ?… ‘ಬಿಗಿಯಾದ ಮುಖವನ್ನು ಸಡಿಲ ಮಾಡಿ ಕೇಳಿದರು. ಕೊನೆಗೆ, “ಸರಿ, ಟೀ ಕುಡಿದುಕೊಂಡು ಹೋಗು.. ಮುಂದೆ ನಾಟ್ಕ ಮಾಡಿದರೆ ನನ್ನನ್ನು ತಪ್ಪದೇ ಕರೆಯಬೇಕು’ ಅಂದರು. ಮುಂದೆ ಇದೇ ಕಂಬಾರರು, ನನಗೆ ಹಂಪಿ ವಿವಿಯಲ್ಲಿ ಕೆಲಸ ಕೊಟ್ಟರು. ಒಂದಷ್ಟು ವರ್ಷಗಳ ನಂತರ ಅವರ ಕೋಪವನ್ನು ಸಹಿಸಿಕೊಳ್ಳದೇ ರಾಜೀನಾಮೆ ಕೊಟ್ಟೆ. ಅದು ಹೇಗೆ ಅಂತೀರ? ಹಂಪಿಯ ಬಸ್ಟಾಂಡ್‌ನಲ್ಲಿ ಕೂತು, ಪತ್ರ ಬರೆದು- ಅಟೆಂಡರ್ ಕೈಯಲ್ಲಿ ರಾಜೀನಾಮೆ ಕಳುಹಿಸಿಬಿಟ್ಟೆ. ಆಮೇಲೆ, ” ನೋಡ್ರೀ, ಆ ಪ್ರಕಾಶನ ಅಪ್ಪನ ವಯಸ್ಸಾಗಿದೆ ನಂಗೆ. ಯಾವ ರೀತಿ ರಾಜೀನಾಮೆ ಕೊಟ್ಟು ಹೋಗಿದ್ದಾನೆ. ಕರೀರಿ ಅವ°’ ಅಂತ ಮನೆಗೆ ಹೇಳಿ ಕಳುಹಿಸಿದರು. ಅಷ್ಟೊತ್ತಿಗಾಗಲೇ ನನ್ನ ಮನಸ್ಸು ಒಡೆದು ಹೋಗಿದ್ದರಿಂದ, ಮತ್ತೆ ಹೋಗಲಿಲ್ಲ. ಕಂಬಾರರ ಕೋಪ ಕರ್ಪೂರದಂತೆ. ಬೇಗ ಉರಿದು ಹೋಗುತ್ತದೆ. ಅದನ್ನೇ ಇಟ್ಟುಕೊಂಡು ಜಿದ್ದು ಸಾಧಿಸುವುದಿಲ್ಲ. ಇಷ್ಟೆಲ್ಲಾ ಆದ ಮೇಲೆ, “ಪ್ರಕಾಶ್ ಕಂಬತ್ತಳ್ಳಿಗೆ ನನ್ನಿಂದ ಕಿರಿಕಿರಿ ಆಯ್ತು. ಪಾಪ, ಅದಕ್ಕೇ ಅವನು ಕೆಲಸ ಬಿಟ್ಟ’ ಅಂತ ಸಾರ್ವಜನಿಕ ಕಾರ್ಯಕ್ರಮಗಳಲ್ಲೆಲ್ಲಾ ನಿರ್ಮಲವಾಗಿ ಹೇಳಲು ಶುರುಮಾಡಿದರು. ಆಮೇಲೊಮ್ಮೆ ಪ್ರಕಾಶ ನೋಡಪ್ಪ, ನನ್ನ ಎಲ್ಲಾ ಪುಸ್ತಕ, ನಾಟಕ ನೀನೇ ಪ್ರಕಟಿಸಬೇಕು’ ಅಂದರು. ಹೆಚ್ಚುಕಮ್ಮಿ 30ಕ್ಕೂ ಹೆಚ್ಚು ಕೃತಿಗಳನ್ನು ನಾನೇ ಪ್ರಕಟಿಸಿದ್ದೇನೆ. ಕಂಬಾರರ ನಾಟಕಗಳ ಹೆಚ್ಚುಗಾರಿಕೆಯೆಂದರೆ, ಜನಪದ ರಂಗಭೂಮಿಯನ್ನು ಹವ್ಯಾಸಿ ವೇದಿಕೆಗೆ ತಂದದ್ದು. ಇವರ ಟಾರ್ಗೆಟ್ ಮಾಸ್; ಕ್ಲಾಸ್ ಅಲ್ಲ. ಸಂಗೀತದಿಂದ ಇದ್ದ ಶ್ರೀರಂಗರ ಸೂತ್ರಗಳನ್ನು ತೆಗೆದು, ತಮ್ಮದೇ ಶೈಲಿಯ ಛಾಪನ್ನು ಮೂಡಿಸಿದವರು ಕಂಬಾರರು. ಇದೆಲ್ಲ ಹೇಗೆ ಸಾಧ್ಯ ಎಂದರೆ?
ಕಂಬಾರರಿಗೆ ನಟನೆ, ಹಾಡುಗಾರಿಕೆ ಎಲ್ಲವೂ ಗೊತ್ತು. ಅವರು ಜೋಕುಮಾರಸ್ವಾಮಿಯಲ್ಲಿ ಸೂತ್ರದಾರನ ಪಾತ್ರ ಮಾಡುತ್ತಿದ್ದದ್ದನ್ನು ನಾನೇ ನೋಡಿದ್ದೇನೆ. ಹೀಗಾಗಿ ನಾಟಕ ಬರೆಯುವಾಗಲೇ ಅವರಿಗೆ ಸ್ಟೇಜಿನ ಲಿಮಿಟೇಷನ್ ಅರ್ಥವಾಗುತ್ತಿತ್ತು. ಈ ಕಲ್ಪನೆ ಯಾರಿಗೆ ಇರುತ್ತದೋ ಅವರು ನಾಟಕವನ್ನು ಸುಂದರವಾಗಿ ಬರೆಯಬಲ್ಲರು. ಕಂಬಾರರ ನಾಟಕಗಳು ಬೋರ್ ಹೊಡೆಸುವುದಿಲ್ಲ. ಏಕೆಂದರೆ, ಕಥೆಯ ಅಥವಾ ಪಾತ್ರದ ಮೂಲಕ ಅವರು
ವಾಸ್ತವ ಸಮಸ್ಯೆಯನ್ನು ನಾಟಕದೊಳಗೆ ತರುತ್ತಾರೆ. ಪೌರಾಣಿಕ ಕಥೆಯಲ್ಲೂ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆಯೋ, ಉಳುವವನೇ ನೆಲದ ಒಡೆಯ ಅನ್ನೋದನ್ನೂ ಹೇಳುತ್ತಾರೆ. ಅದಕ್ಕೆ ಕಂಬಾರರು ಜನಕ್ಕೆ ರೀಚ್ ಆಗಿಬಿಡುತ್ತಾರೆ. ಕಂಬಾರರು ನಾಟಕ ಬರೀತಾರೆ, ಪಾತ್ರಗಳನ್ನು ಸೃಷ್ಟಿಸುತ್ತಾರೆ. ಮನೆಯ ನೆಂಟರಂತೆ ಅವುಗಳ ಜೊತೆ ಸಂಭಾಷಣೆ ನಡೆಸುತ್ತಿರುತ್ತಾರೆ. ಒಂದು ಸಲ ನಾಟಕ ಬರೆದ ನಂತರ, ಪಾತ್ರಕ್ಕೂ ನನಗೂ ಸಂಬಂಧ ಇಲ್ಲ ಅನ್ನೋ ರೀತಿ ಇರುವುದಿಲ್ಲ. ಮೊನ್ನೆ ಅವರ ಮನೆಗೆ ಹೋದಾಗ- “ಶಿವರಾತ್ರಿ’ ನಾಟಕದಲ್ಲಿ ಆ ಬಿಜ್ಜಳನ ಚಾಪ್ಟರ್‌ನ ಸ್ವಲ್ಪ ತಿದ್ದ ಬೇಕು
ಅಂತಿದ್ದರು. ಅದು ಪ್ರಕಟವಾಗಿ, ಮರು ಮುದ್ರಣಗೊಂಡಿದೆ. ಆದರೂ ಆ ಪಾತ್ರದ ಬಗ್ಗೆ ಏನೋ ಮೋಹ.
ಕಂಬಾರರು ನಾಟಕಾನ ಸುಖಾಸುಮ್ಮನೆ ಬರೆಯೋಲ್ಲ. ಬರೆದ ನಂತರ ಸಮಾನ ಮನಸ್ಕರರಿಗೆ ಕೊಟ್ಟು ಓದಿಸುತ್ತಾರೆ,
ಚರ್ಚಿಸುತ್ತಾರೆ. ಅವರು ಕೊಟ್ಟ ಸಲಹೆಗಳನ್ನು ಮನಸಲ್ಲಿ ಹಾಕಿಕೊಳ್ಳುತ್ತಾರೆ. ಯಾವುದು ಸರಿ ಅನಿಸುತ್ತದೋ ಅದನ್ನು ಮಾತ್ರ ತಿದ್ದು ಪಡಿ ಮಾಡುತ್ತಾರೆ. ಎಲ್ಲರೂ ಹೇಳಿದ, ಎಲ್ಲ ಸಲಹೆಗಳನ್ನೂ ತೆಗೆದು ಕೊಳ್ಳುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಈ ವಯಸ್ಸಲ್ಲಿ ನಾಟಕವನ್ನು ಬರೆದು, ಕೂತು, ತಾವೇ ಜೋರಾಗಿ ಓದುತ್ತಾರೆ. ಆಗ, ಪಾತ್ರ ಮತ್ತು ಅದರ ಸೌಂಡಿಂಗ್ ಎರಡೂ ತಿಳಿಯುತ್ತದೆ. ಸರಿ ಬರಲಿಲ್ಲ ಅಂದರೆ- “ಪ್ರಕಾಶ್, ಈ ಜಾಗದಲ್ಲಿ ಸ್ವಲ್ಪ ಹಿಡಿತಾ ಇದೆ. ಇನ್ನೊಂದೆರಡು ಭಾರಿ ಓದಿ ನೋಡ್ತೀನಿ’ ಅಂತಾರೆ. ಕಂಬಾರರು ತಮ್ಮ ನಾಟಕಗಳನ್ನು ಸಲೀಸಾಗಿ ಬರೀತಾರೆ. ಆನಂತರ ಕನಿಷ್ಠ 8-10 ಭಾರಿ ತಿಧ್ದೋದು ಇವರಿಗೆ ನೀರು ಕುಡಿದಷ್ಟು ಸುಲಭ; ನಮಗೆ ಸಂಕಟ. ಕಡೇ ಗಳಿಗೆ ತನಕ ತಿದ್ಧೀ ತೀಡುತ್ತಲೇ ಇರುತ್ತಾರೆ. ಹೀಗೊಂದು ಘಟನೆ ನಡೆಯಿತು. ಒಂದು ಸಲ- ಶಿವನ ಡಂಗೂರ ನಾಟಕ ಬರೆಯುವಾಗ ನನಗೆ ಫೈನ್‌ಟ್ಯೂನ್ ಮಾಡಿ, ಮಾಡಿ ಸಾಕಾಗಿ
ಹೋಯ್ತು. ಕೊನೆಗೆ- ಸಾರ್, ಇನ್ನೆಷ್ಟು ತಿದ್ದುತೀರಿ ಬಿಟ್ಟು ಬಿಡಿ. ಕೈ ನೋವು ಬಂತು’ ಅಂತ ಹೇಳಿದೆ. ಆಮೇಲೆ ಬಿಡುಗಡೆ ಕಾರ್ಯಮಕ್ರಮದಲ್ಲಿ- ಕಂಬಾರರು ತಮ್ಮ ನಾಟಕವನ್ನು 10 ಸಲ ತಿದ್ದಿ ನನ್ನ ಕೈ ನೋಯಿಸಿದ್ದಾರೆ ಅಂತ ಹೇಳಿದರೆ- ಅವರು ಎದ್ದು, ಇಲ್ಲ ಪ್ರಕಾಶ ಸುಳ್ಳು ಹೇಳುತ್ತಿದ್ದಾನೆ. ಅದನ್ನು ನಾನು 13 ಬಾರಿ ತಿದ್ದಿದ್ದೇನೆ ಅಂತ ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿಬಿಟ್ಟರು. ಅವರು ಹೇಳಿದ ಒಂದು ಮಾತು ಇನ್ನೂ ನೆನಪಿದೆ- “ಶಿವರಾತ್ರಿ’ ನಾಟಕದ ಫೈನಲ್ ಸ್ಕ್ರಿಪ್ಟ್ ಅದು ಹೇಗೋ ಕಾಣೆಯಾಗಿಬಿಟ್ಟಿತು. ” ನಾನು ರಕ್ತ ಸುರಿಸಿ ಬರೆದಿದ್ದು ಕಣಯ್ಯ, ಬೇವರು ಸುರಿಸಿ ಅಲ್ಲ’ ಅಂತ ಬೇಸರ ಮಾಡಿಕೊಂಡು, ಮತ್ತೆ ನೆನಪಿಟ್ಟುಕೊಂಡು ತಿದ್ದಿಕೊಟ್ಟರು. ನಿರೂಪಣೆ: ಕಟ್ಟೆ ಗುರುರಾಜ್