Advertisement

ಕಥಾ ಕಾಲಕ್ಷೇಪ

12:30 AM Jan 27, 2019 | |

ಮಾತಿನ ಕತೆ
ಮಣಿಭದ್ರ ಕಾಡಿನ ಹಾದಿಯಲ್ಲಿ ಸಾಗುತ್ತಿರುವಾಗ, “”ಯಾರಾದರೂ ರಕ್ಷಣೆ ಮಾಡಿ” ಎಂಬ ಧ್ವನಿ ಕೇಳಿಸಿತು. 
ಮಣಿಭದ್ರ ಸುತ್ತಮುತ್ತ ತಿರುಗಿ ನೋಡಿದ. ಗೊತ್ತಾಗಲಿಲ್ಲ.  “ಯಾರು?’ ಎಂದ.
ಹತ್ತಿರದ  ಬಾವಿಯೊಳಗಿಂದ ಹೊರಡುತ್ತಿದ್ದ ಆ ದನಿ, “”ನಾನೋರ್ವ ವಿದ್ವಾಂಸನಿರುವೆನು.  ವ್ಯಾಕರಣ ಮತ್ತು ಛಂದಸ್ಸುಗಳೆರಡರಲ್ಲೂ  ವಿಶೇಷ ಅಧ್ಯಯನ ಮಾಡಿರುವೆನು. ಪಾಣಿನಿಯ ಪರಮ ಅಭಿಮಾನಿ” ಎಂದಿತು.

Advertisement

“”ತಾವು ಏನು ಬಾವಿಯಲ್ಲಿ  ಮಾಡುತ್ತಿದ್ದೀರಿ ಮಹಾನುಭಾವರೆ?” ಮಣಿಭದ್ರನ ಪ್ರಶ್ನೆ.
“”ಪಥದಲ್ಲಿಯೇ  ಸಾಗುತ್ತಿದ್ದೆ  ವತ್ಸಾ. ಆದರೆ, ಅಜಾಗರೂಕತೆಯಿಂದ  ಬಾವಿಗೆ ಬಿದ್ದಿರುವೆನು,  ನನ್ನನ್ನು  ರಕ್ಷಣೆೆ ಮಾಡು”
ಮಣಿಭದ್ರನಿಗೆ ಅನುಕಂಪ ಮೂಡಿತು.
“”ವಿದ್ವಾಂಸರಿಗೆ ಈ ರೀತಿ ಮಂಗಳಾರತಿಯಾಗಬಾರದಿತ್ತು¤.  ಒಂದು ನಿಮಿಷ  ತಾಳಿ, ಹಗ್ಗ ಮತ್ತು  ಏಣಿಯನ್ನು  ನಿಮ್ಮನ್ನು ಮೇಲಕ್ಕೆತ್ತಲು ತರುತ್ತೇನೆ” ಮಣಿಭದ್ರ ಅವಸರಿಸಿದ.
“”ತಾಳು ವತ್ಸಾ, ನಿನ್ನ ವಾಕ್ಯದಲ್ಲಿ  ಕೆಲವು ತ‌ಪ್ಪುಗಳಿವೆ. ಅರಿಸಮಾಸದ ಪದಗಳನ್ನು  ಬಳಸಬೇಡ. ವಿದ್ವಾಂಸರೇ ಎಂಬ ಪದದ ಬದಲಿಗೆ ವಿದ್ವಾಂಸರುಗಳೇ ಎಂದು ಸಂಬೋಧಿಸುವುದು ಒಳ್ಳೆಯದು. ವಿದ್ವಾಂಸರುಗಳೇ  ಎಂಬ ಪದದಲ್ಲಿ  ಎರಡು  ಬಹುವಚನ ಪ್ರತ್ಯಯಗಳು ಇದ್ದರೂ ಗೌರವಸೂಚಕವಾಗಿ ಈ ಪದವನ್ನು ಬಳಸಬಹುದು.  ಕತೃì , ಕರ್ಮ,  ಕ್ರಿಯಾಪದಗಳ ಬಳಕೆಯೂ ಸಮರ್ಪಕವಾಗಿರಲಿ. ನಿನ್ನ ಮೇಲಿನ ಅಭಿಮಾನದಿಂದ ಹೇಳಿದೆ ಅಷ್ಟೆ !”

ಮಣಿಭದ್ರ ಒಂದು ಕ್ಷಣ ನಿಂತ. “”ನಾನು ನಳಂದಾಕ್ಕೆ ಹೋಗಿ ಸರಿಯಾಗಿ ವ್ಯಾಕರಣ ಅಭ್ಯಾಸ ಮಾಡಿ, ವಾಕ್ಯ ರಚನೆ ಮಾಡಲು ಕಲಿತುಕೊಂಡು ಬರುತ್ತೇನೆ. ಅಲ್ಲಿಯವರೆಗೆ  ಬಾವಿಯಲ್ಲಿರಿ”  ಎಂದವನೇ ಮಣಿಭದ್ರ ನಡೆದೇಬಿಟ್ಟ ! 

ಮೌನದ ಕತೆ
ಅರಾವತಿಯೆಂಬ ಹಳ್ಳಿಯೊಂದು ಗಿರಿತಪ್ಪಲಿನಲ್ಲಿ ನಿಸರ್ಗದ ನಿಸ್ವನದೊಂದಿಗೆ ಐಕ್ಯವಾದಂತೆ ಶಾಂತವಾಗಿ ಹರಡಿಕೊಂಡಿತ್ತು. ಜನ ಮಾತನಾಡಿಕೊಳ್ಳುತ್ತಿರಲಿಲ್ಲ ಎಂದೇನೂ ಅಲ್ಲ. ಆದರೆ, ಮಾತು ಮುತ್ತಿನ ಸರದಂತೆ ಮೌನದ ದಾರದಲ್ಲಿ ಪೋಣಿಸಲ್ಪಟ್ಟಿತ್ತು. ಹಳ್ಳಿಯಲ್ಲಿ ಇಂಥ ಶಾಂತತೆ ಮೂಡಲು ಕಾರಣವಾಗಿದ್ದುದು ಒಂದು ಆಶ್ರಮ. ಆ ಆಶ್ರಮದ ಅಂಗಳದಲ್ಲಿ ತರಗೆಲೆ ಅಲುಗಿದರೂ ಆಲಿಸಬಹುದಾಗಿರುವಂಥ ಸ್ಥಿತಿ. ಹಾಗೆಂದು, ಆಶ್ರಮದಲ್ಲಿ ಯಾರೂ ಇರಲಿಲ್ಲವೆಂದಲ್ಲ, ಪಾಠಪ್ರವಚನಗಳು ನಡೆಯುತ್ತಿರಲಿಲ್ಲವೆಂದಲ್ಲ.

ಮಾಣಿಕ್ಯನೆಂಬ ಸಂತನೊಬ್ಬ ಅಲ್ಲಿದ್ದ. ಅವನಿಗೊಂದಿಷ್ಟು ಮಂದಿ ಶಿಷ್ಯರಿದ್ದರು. ಪ್ರತಿಯೊಬ್ಬ ಶಿಷ್ಯನೂ ಪ್ರಕಾಂಡ ಪಂಡಿತ. ಅವರಿಗೆ ಗುರು ಮೌನವಾಗಿ ಹೇಗೆ ಕಲಿಸಿದ. ಶಿಷ್ಯರು ನಿಶ್ಶಬ್ದವಾಗಿ ಹೇಗೆ ಕಲಿತರು ಎಂಬ ಬೆರಗು ಇಡೀ ಅರಾವತಿ ಹಳ್ಳಿಯನ್ನು ಆವರಿಸಿ, ಅಲ್ಲಿನವರ ನಡೆ-ನುಡಿಯಲ್ಲಿ ಅನೂಹ್ಯ ಗಾಂಭೀರ್ಯ ನೆಲೆಸಿಬಿಟ್ಟಿತ್ತು. 

Advertisement

ಒಬ್ಬ ಸಂತನಿಂದಾಗಿ ಒಂದು ಹಳ್ಳಿಯೇ ಬದಲಾಗುತ್ತದೆ ಎಂಬುದು ಗಿರಿತಪ್ಪಲಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರವಾಗಿ ಅವರೆಲ್ಲ ಮಾಣಿಕ್ಯ ಮುನಿಯನ್ನು ನೋಡಲು ಅರಾವತಿಗೆ ಆಗಮಿಸುತ್ತಿದ್ದರು. “ಆಹಾ! ಮೌನದ ಮಂದಿರ’ ಎಂದು ಆಶ್ರಮವನ್ನು ಕೊಂಡಾಡುತ್ತಿದ್ದರು.

ಮಾಣಿಕ್ಯನು ಮರಣಿಸಿದ ದಿನ ಇಡೀ ಆಶ್ರಮ ಮಂತ್ರಘೋಷಗಳಿಂದ ಗಂಟೆಗಳ ಮೊಳಗಿನಿಂದ ವೇದಗಳ ಪಠಣದಿಂದ ತುಂಬಿಹೋಯಿತು. ಹಳ್ಳಿಯ ಬೀದಿಗಳಲ್ಲಿ ಶಬ್ದಗಳ ಮೆರವಣಿಗೆ ಸಾಗತೊಡಗಿತು.

ಈಗಲೂ ಅಲ್ಲಿನ ಹಿರಿಯರು ಅದನ್ನು ನೆನಪಿಸಿಕೊಳ್ಳುವುದು ಹೀಗೆ: ಅದು ಮೌನವೇ ಮೌನವಾದ ದಿನ!

ಲೀಲಾ

Advertisement

Udayavani is now on Telegram. Click here to join our channel and stay updated with the latest news.

Next