Advertisement

ಅಂದು ಕೊಹ್ಲಿ ವಿಶ್ವಕ್ಕೆ ವಿರಾಟ್ ರೂಪ ತೋರಿಸಿದ್ದ; ಮಾಲಿಂಗಾಗೆ ಈಗಲೂ ಕಾಡುವ ಶತಕವದು…

02:37 PM Mar 01, 2023 | ಕೀರ್ತನ್ ಶೆಟ್ಟಿ ಬೋಳ |

ವಿರಾಟ್ ಕೊಹ್ಲಿ ಈ ಪೀಳಿಗೆ ಕಂಡ ಅತ್ಯುನ್ನತ ಕ್ರಿಕೆಟ್ ಬ್ಯಾಟರ್. ಮೂರು ಮಾದರಿಯಲ್ಲಿಯೂ ಮಿಂಚುವ ಡೆಲ್ಲಿ ಬ್ಯಾಟರ್ ವಿರಾಟ್, ಏಕದಿನ ಮಾದರಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬನೆಂದು ಕರೆಯಲ್ಪಡುತ್ತಾರೆ. 12 ಸಾವಿರಕ್ಕೂ ಹೆಚ್ಚು ರನ್ ಗಳು, 46 ಶತಕಗಳು ಇದಕ್ಕೆ ಸಾಕ್ಷಿ.

Advertisement

ವಿರಾಟ್ ಕೊಹ್ಲಿ ತನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಅಪಾರ ಸಾಮರ್ಥ್ಯ ಪ್ರದರ್ಶಿಸಿ ಯಶಸ್ಸು ಪಡೆದವರು. 2011 ರ ಏಕದಿನ ವಿಶ್ವಕಪ್ ಗೆ ಮೊದಲೇ ವಿರಾಟ್ ಐಸಿಸಿ ಬ್ಯಾಟರ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದರು. ಚೊಚ್ಚಲ ವಿಶ್ವಕಪ್ ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ವಿಶ್ವಕ್ಕೆ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದರು.

ಆದರೆ 2012ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ಕೊಹ್ಲಿ ತೋರಿದ ವಿರಾಟ್ ಅವತಾರ ಅವರನ್ನು  ಎತ್ತರಕ್ಕೆ ಕೊಂಡೊಯ್ದಿತು ಎಂದರೆ ತಪ್ಪಾಗಲಿಕ್ಕಿಲ್ಲ. ಆ ಇನ್ನಿಂಗ್ಸ್ ನ ಮೆಲುಕು ಈ ಲೇಖನದ ವಸ್ತು.

2011ರ ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಆಸೀಸ್ ಪ್ರವಾಸ ಕೈಗೊಂಡಿತ್ತು. ಮೊದಲು ನಡೆದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರ ವೈಟ್ ವಾಶ್ ಅವಮಾನ ಅನುಭವಿಸಿತ್ತು. ನಂತರದ ಕಾಮನ್ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳಿದ್ದ ಸಿಬಿ ಸರಣಿಯಲ್ಲಿ ನಾಯಕ ಧೋನಿ ಹಲವಾರು ಪ್ರಯೋಗ ನಡೆಸಿದ್ದರು. ಹೀಗಾಗಿ ಕೆಲವು ಪಂದ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ.

ಅಂದು ಫೆಬ್ರವರಿ 28. ಹೋಬಾರ್ಟ್ ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ. ಭಾರತ ಸರಣಿಯ ಫೈನಲ್ ತಲುಪಬೇಕಾದರೆ ಆ ಪಂದ್ಯ ಗೆಲ್ಲಲೇಬೇಕು. ಆದರೆ ಅಷ್ಟೇ ಸಾಕಾಗದು. ಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿದರೆ ಅದು ಎಷ್ಟೇ ರನ್ ಗಳಿಸಿದರೂ ಅದನ್ನು 40 ಓವರ್ ಒಳಗೆ ಚೇಸ್ ಮಾಡಬೇಕು. ಹಾಗಾದರೆ ಮಾತ್ರ ರನ್ ರೇಟ್ ಉತ್ತಮವಾಗಿ ಟೀಂ ಇಂಡಿಯಾ ಫೈನಲ್ ತಲುಪುತ್ತದೆ.

Advertisement

ಅಂದು ಹೋಬಾರ್ಟ್ ನಲ್ಲಿ ಲಂಕಾ ತಂಡವು 50 ಓವರ್ ಗಳಲ್ಲಿ ಗಳಿಸಿದ್ದು 320 ರನ್. ಇದನ್ನು ಭಾರತ 40 ಓವರ್ ಗಳಲ್ಲಿ ಮಾಡಬೇಕಿತ್ತು. ಈ ಪಂದ್ಯದಲ್ಲಿ ಸೀನಿಯರ್ ಆಟಗಾರರಾದ ಸಚಿನ್, ಸೆಹವಾಗ್ ಮತ್ತು ಗಂಭೀರ್ ಆಡಿದ್ದರು. ಹೀಗಾಗಿ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಾಯಿತು. ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ವಿರಾಟ್ ಎಸೆತಕ್ಕೊಂದರಂತೆ ರನ್ ಮೂಲಕ ಅರ್ಧಶತಕ ತಲುಪಿದರು. 50 ರನ್ ಗಡಿ ದಾಟುತ್ತಿದ್ದಂತೆ ವಿರಾಟ್ ಬೇರೆಯೇ ಅವತಾರ ತಾಳಿದರು. ನಂತರ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ವಿರಾಟ್ ವೇಗವಾಗಿ ರನ್ ಗಳಿಸರಾಂಭಿಸಿದರು. ಅದರಲ್ಲೂ ಆ ಸಮಯದಲ್ಲಿ ತನ್ನ ಯಶಸ್ಸಿನ ಉತ್ತುಂಗದಲ್ಲಿದ್ದ ಲಂಕಾದ ಪ್ರಮುಖ ಬೌಲರ್ ಲಸಿತ್ ಮಾಲಿಂಗಗೆ ವಿರಾಟ್ ದುಸ್ವಪ್ನವಾಗಿ ಕಾಡಿದರು. ಮಾಲಿಂಗ ಎಸೆತಗಳನ್ನು ಅಟ್ಟಾಡಿಸಿ ಹೊಡೆದರು. ಅದರಲ್ಲೂ ಒಂದೇ ಓವರ್ ನಲ್ಲಿ 24 ರನ್ ಚಚ್ಚಿದ ವಿರಾಟ್ ಮೊದಲ ಬಾರಿಗೆ ತಾನೆಂತಹ ಪ್ರತಿಭೆ ಎಂದು ಕ್ರಿಕೆಟ್ ಪ್ರಪಂಚಕ್ಕೆ ತೋರಿಸಿದ್ದರು.

320 ರನ್ ಗಳ ಬೃಹತ್ ಮೊತ್ತವನ್ನು ಟೀಂ ಇಂಡಿಯಾ ಕೇವಲ 36 ಓವರ್ ಗಳಲ್ಲಿ ತಲುಪಿತು. ವಿರಾಟ್ ಕೊಹ್ಲಿ ಕೇವಲ 86 ಎಸೆತಗಳಲ್ಲಿ 133 ರನ್ ಚಚ್ಚಿದ್ದರು. ಅಂದು ಲಸಿತ್ ಮಾಲಿಂಗ ಕೇವಲ 7.4 ಓವರ್ ಗಳಲ್ಲಿ 96 ರನ್ ನೀಡಿ ದುಬಾರಿಯಾಗಿದ್ದರು.

ಆಸೀಸ್ ನ ಆಟಗಾರ ಸ್ಟೀವ್ ಸ್ಮಿತ್ ಜೊತೆಗಿನ ಸಂದರ್ಶನದಲ್ಲಿ ವಿರಾಟ್ ಈ ಪಂದ್ಯದ ಬಗ್ಗೆ ಮಾತನಾಡಿದ್ದರು. ಈ ಪಂದ್ಯದ ಬಳಿಕ ತಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಲ್ಲೆ ಎಂಬ ಧೈರ್ಯ ಬಂತು ಎಂದಿದ್ದರು.

ಈ ಶತಕದೊಂದಿಗೆ ವಿರಾಟ್ ಗೆ ಚೇಸ್ ಮಾಸ್ಟರ್ ಎಂಬ ಟ್ಯಾಗ್ ಅಂಟಿಕೊಂಡಿತು. ದೆಹಲಿ ಮೂಲದ ಬ್ಯಾಟರ್ ವಿರಾಟ್ ಈ ಶತಕದ ಬಳಿ ತನ್ನ ಓಟವನ್ನು ಕಡಿಮೆ ಮಾಡಲಿಲ್ಲ. ಆಟದ ಸ್ವರೂಪ, ಸವಾಲುಗಳು ಅಥವಾ ಎದುರಾಳಿಗಳನ್ನು ಲೆಕ್ಕಿಸದೆ ಅವರು ನಂಬಲಾಗದಷ್ಟು ಎತ್ತರಕ್ಕೆ ಏರಿದ್ದಾರೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next