Advertisement
ಹುಟ್ಟಿದ ಕೂಡಲೇ ಪಿಳಿ ಪಿಳಿ ಕಣ್ಣು ಬಿಡುತ್ತಾ, ಅಮ್ಮನ ಮಡಿಲಲ್ಲಿ ಕೂತು ಎದೆಹಾಲನ್ನು ಸವಿಯಬೇಕಾದ ಮಗು ದೃಷ್ಟಿಹೀನವಾಗಿ ತಾಯಿಯ ಮಡಿಲಿಗೆ ಸೇರಿದಾಗ ಹೆತ್ತ ತಾಯಿಯ ಕರುಳು ಅದೆಷ್ಟು ನೊಂದಿರಬಹುದು ಅಲ್ವಾ? ಇದು ಬರೀ ನೋವಿನ ನುಡಿಯಲ್ಲ, ವಾಸ್ತವದ ಸಂಗತಿ. ಆಂಧ್ರಪ್ರದೇಶದ ಸೀತಾರಾಮಪುರಂ ನಲ್ಲಿ ಜನಸಿದ ಶ್ರೀಕಾಂತ್ ಬೋಳ ಹುಟ್ಟು ಅಂಧ. ಬಾಲ್ಯ ಎನ್ನುವ ಚಿಗುರು ಮೊಳಕೆಯೊಡಿಯುವ ಮುನ್ನ ಬದುಕಿಗೆ ಅಡ್ಡಲಾಗಿ ಅಂಧತ್ವ ಬಂತು. ಶ್ರೀಕಾಂತ್ ಹುಟ್ಟಿನ ಬಳಿಕ ಗ್ರಾಮಸ್ಥರು ಎಷ್ಟು ಕಠೋರ ನುಡಿಯನ್ನು ಆಡುತ್ತಾರೆ ಎಂದರೆ ಕೆಲವರು ಈ ಮಗುವನ್ನು ಕೊಂದು ಬಿಡಿ ಮುಂದೆ ಈತ ತಂದೆಗೆ ಹೊರೆಯಾಗುತ್ತಾನೆ ಎನ್ನುತ್ತಿದ್ದರು.
Related Articles
Advertisement
ಅಂಧ ಹುಡುಗ ಅಮೇರಿಕಾದಲ್ಲಿ ಗೆದ್ದ.. : ಭಾರತೀಯ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ವಿಫಲನಾದ ಶ್ರೀಕಾಂತ್ ಅದೇ ಘಳಿಗೆಯಲ್ಲಿ ಇಂಟರ್ ನೆಟ್ ನಲ್ಲಿ ಹುಡುಕಾಡಿ ತನ್ನಂಥವವರಿಗೆ ಎಲ್ಲಿಯಾದರೂ ಕಲಿಯುವ ಅವಕಾಶವಿದೆಯಾ? ಎನ್ನುವುದನ್ನು ನೋಡಿದಾಗ ಅಮೇರಿಕಾದ ಒಂದು ಖಾಸಗಿ ಕಾಲೇಜಿನಲ್ಲಿ ಅವಕಾಶ ಸಿಗುತ್ತದೆ. ಅಲ್ಲಿ ಶ್ರೀಕಾಂತ್ ಕಠಿಣ ಅಭ್ಯಾಸವನ್ನು ಮಾಡಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗುತ್ತಾನೆ. ಇದರ ಜೊತೆಗೆ ಇಡೀ ಕಾಲೇಜಿನಲ್ಲಿ ದೃಷ್ಟಿಹೀನ ವಿದ್ಯಾರ್ಥಿಯಾಗಿ ತೇರ್ಗಡೆ ಹೊಂದಿದ್ದ ಮೊದಲ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ಪಾತ್ರನಾಗುತ್ತಾನೆ.
ಲಕ್ಷ ಸಂಬಳ ಸಿಗುವ ಕೆಲಸದ ಅವಕಾಶವನ್ನು ಬಿಟ್ಟು ಬಂದ! : ಶ್ರೀಕಾಂತ್ ಎಷ್ಟು ಪ್ರಭಾವ ಬೀರುತ್ತಾನೆ ಅಂದರೆ ಅಮೇರಿಕಾದ ಖಾಸಗಿ ಕಂಪೆನಿಗಳು ಲಕ್ಷ ಸಂಬಳ ಸಿಗುವ ಕೆಲಸವನ್ನು ನೀಡುವುದಾಗಿ ಶ್ರೀಕಾಂತ್ ನನ್ನು ಕರೆಯುತ್ತಾರೆ ಆದರೆ ಶ್ರೀಕಾಂತ್ ಈ ಎಲ್ಲಾ ಅವಕಾಶವನ್ನು ಬಿಟ್ಟು ಭಾರತಕ್ಕೆ ಮರಳಿ ಬರುವ ನಿರ್ಣಯವನ್ನು ಮಾಡುತ್ತಾನೆ. ಭಾರತಕ್ಕೆ ಬಂದು ಶ್ರೀಕಾಂತ್ ಮಾಡಿದ ಕಾರ್ಯ ಎಲ್ಲರಿಗೂ ಅನುಕರ್ಣಿಯ.
ತನ್ನಂತೆ ದೃಷ್ಟೀಹೀನರ ಬದುಕಿಗೆ ಬೆಳಕಾದ ಶ್ರೀಕಾಂತ್ : ತಾನು ಅಂಧತ್ವದಿಂದ ತನ್ನ ಬದುಕನ್ನು ದೂಡುತ್ತಿದ್ದೇನೆ. ನನ್ನಂತೆ ಇಲ್ಲಿ ನೂರಾರು ಮಂದಿ ಈ ದೃಷ್ಟಿ ಹೀನತೆಯಿಂದ ಬದುಕನ್ನು ಕಟ್ಟಿಕೊಳ್ಳಲು ಅಲೆದಾಟ ನಡೆಸುತ್ತಿರಬಹುದು. ಅವರಿಗಾಗಿ ತಾನು ಏನಾದರೂ ಮಾಡಬೇಕು ಎನ್ನುವ ಮಾತು ಕನಸಾಗಿ ಕಟ್ಟಿ ವಾಸ್ತವಾಗಿಸುವ ದಿನಗಳು ಬರುತ್ತದೆ. ಶ್ರೀಕಾಂತ್ ‘ಬೋಲೆಂಟ್ ಇಂಡಸ್ಟ್ರಿಯಸ್ ‘ ಯನ್ನು ಪ್ರಾರಂಭಿಸುತ್ತಾರೆ. ಈ ಸಂಸ್ಥೆ ದೃಷ್ಟಿ ಹೀನ ಜನರಿಗೆ ಉದ್ಯೋಗದ ಅವಕಾಶವನ್ನು ಮಾಡಿಕೊಡುವುದರ ಜೊತೆಗೆ ಅವರ ಆರ್ಥಿಕ ಸಹಾಯಕ್ಕಾಗಿ ನಿಲ್ಲುತ್ತದೆ. ಶ್ರೀಕಾಂತ್ ಪ್ರಾರಂಭಿಸಿದ ಈ ಕಂಪೆನಿ ವಾರ್ಷಿಕ ಅಂದಾಜು 50 ಕೋಟಿ ಆದಾಯವನ್ನು ಗಳಿಸುತ್ತಿದೆ.
ಇಂದು ಶ್ರಿಕಾಂತ್ ಒಬ್ಬ ಯಶಸ್ವಿ ಉದ್ಯಮಿಗಳ್ಲೊಬ್ಬರು. ಅಂಧತ್ವ ಅವರಿಗೆ ತೊಡಕಾಗಿ ಅವರು ಸುಮ್ಮನೆ ಕೂತು ಕೂರಗುತ್ತಿದ್ದರೆ ಇವತ್ತು ಶ್ರೀಕಾಂತ್ ಇಷ್ಟು ಉನ್ನತ ಮಟ್ಟದಲ್ಲಿ ಬೆಳೆದು ನಿಲುತ್ತಿರಲಿಲ್ಲ. ಅದಕ್ಕಾಗಿಯೇ ಹೇಳೋದು ಒಬ್ಬರನ್ನು ನೋಡುವ ದೃಷ್ಟಿ ಬದಲಾಯಿಸು ಆಗ ಅಲ್ಲಿನ ದೃಶ್ಯವೂ ಬದಲಾಗುತ್ತದೆಂದು..
–ಸುಹಾನ್ ಶೇಕ್