Advertisement

ಎರಡು ‘ಕೈʼ ಕೆಲಸ ಹತ್ತಾರು.. ಸಾಯಲು ಹೋದಾತ ಸಾಧಕನಾದ ಕಥೆ

05:21 PM Apr 29, 2023 | ಸುಹಾನ್ ಶೇಕ್ |

ನಮ್ಮ ಸುತ್ತಮುತ್ತ ಬಹುಮುಖ ಪ್ರತಿಭೆಗಳು ಹಲವಾರು ಮಂದಿ ಇದ್ದಾರೆ. ಅವರನ್ನು ಗುರುತಿಸಬೇಕಷ್ಟೇ. ಇರುವ ಎರಡು ಕೈಯಲ್ಲಿ ಒಂದೇ ಬಾರಿಗೆ ಎಷ್ಟು ಕೆಲಸವನ್ನು ಮಾಡಬಹುದು? ಖಂಡಿತ ಒಂದು ಬಾರಿಗೆ ಹೆಚ್ಚೆಂದರೆ ಒಂದು ಕೆಲಸವನ್ನು ಮಾತ್ರ ಮಾಡಬಹುದು. ಉಳಿದ ಕೆಲಸವನ್ನು ನಾವು ಹಿಡಿದ ಕೆಲಸವನ್ನು ಮುಗಿದ ಮೇಲೆಯೇ ಮಾಡುವುದು. ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ಬಾರಿಗೆ ಒಂದಲ್ಲ ಎರಡಲ್ಲ 14 ಮ್ಯೂಸಿಕ್ ವಾದ್ಯಗಳನ್ನು (instruments) ನುಡಿಸುತ್ತಾರೆ.!

Advertisement

ತಮಿಳುನಾಡಿನ ತಿರುನೆಲ್ವೇಲಿನಲ್ಲಿ ಹುಟ್ಟಿದ, ಮುಂಬಯಿಯಲ್ಲಿ ನೆಲೆಸಿರುವ ಗ್ಲಾಡ್ಸನ್ ಪೀಟರ್ ಗೆ ಮ್ಯೂಸಿಕ್ ಅಂದರೆ ಬಾಲ್ಯದಿಂದಲೇ ಇಷ್ಟ. ಬಾಲ್ಯದಲ್ಲಿ ಆಟಿಕೆಯ ಕೀಬೋರ್ಡ್ ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ತಂದೆಯಿಂದ ಗಿಟಾರ್, ಕೀಬೋರ್ಡ್ ನುಡಿಸುವ ತರಬೇತಿಯನ್ನು ಪಡೆದುಕೊಂಡ ಗ್ಲಾಡ್ಸನ್ ಗೆ‌ ದಿನಕಳೆದಂತೆ ಮ್ಯೂಸಿಕ್ ಮೇಲಿನ ಆಸಕ್ತಿ ಹೆಚ್ಚಾಗುತ್ತಲೇ ಹೋಗುತ್ತದೆ. ಪ್ರತಿನಿತ್ಯ ಮ್ಯೂಸಿಕ್ ನ ಒಂದೊಂದೇ ವಾದ್ಯವನ್ನು ಕಲಿಯುವಲ್ಲಿ ಆಸಕ್ತಿ ಬೆಳೆಸಿಕೊಂಡ ಅವರಿಗೆ ಮ್ಯೂಸಿಕ್ ಎಂದರೆ ಪಂಚಪ್ರಾಣವಾಗುತ್ತದೆ. ಹಾಡು, ಕೀಬೋರ್ಡ್, ಗೀಟಾರ್ ಹೀಗೆ ಹಲವಾರು ವಿಧದ ವಾದ್ಯವನ್ನು ಬಳಸಿ ಅದರಲ್ಲಿ ನೈಪುಣ್ಯತೆಯನ್ನು ಪಡೆದುಕೊಳ್ಳುತ್ತಾರೆ.

ಮ್ಯೂಸಿಕ್ ನಲ್ಲಿ ಆಸಕ್ತಿ ಬೆಳೆಸಿಕೊಂಡ ಹುಡುಗ ಒಂದು ಮ್ಯೂಸಿಕ್ ತಂಡದ ಜೊತೆಯಾಗುತ್ತಾರೆ. ಆದರೆ ತಾನೇ ಏನಾದರೂ ಸ್ವಂತದ್ದನ್ನು ಮಾಡಬೇಕೆನ್ನುವ ಇರಾದೆ ಅವರಿಗೆ ಇರುತ್ತದೆ.

ಕಾಡಿದ ಅನಾರೋಗ್ಯ, ಅರಳಿದ ಕನಸು.. :  ಇನ್ನೇನು ಪ್ರತಿಭೆಯೊಂದು ಅರಳಿ ಜಗತ್ತಿಗೆ ಪಸರಿಸಬೇಕೆನ್ನುವಾಗಲೇ ಗ್ಲಾಡ್ಸನ್ ಅವರ ದೇಹಕ್ಕೆ ಕಾಯಿಲೆಯೊಂದು ಹೊಕ್ಕುತ್ತದೆ. ಇಪ್ಪತ್ತರ ಆರಂಭದಲ್ಲಿ ಪ್ಲೆರಲ್ ಎಫ್ಯೂಷನ್  ಎಂಬ ಕಾಯಿಲೆಗೆ ಅವರು ತುತ್ತಾಗುತ್ತಾರೆ. (ಶ್ವಾಸಕೋಶದ ನಡುವೆ ಮತ್ತು ಎದೆಯ ಗೋಡೆಯ ಮಧ್ಯಭಾಗದಲ್ಲಿ ದ್ರವದ ಸಂಗ್ರಹವಾಗುವ ಕಾಯಿಲೆ) ಇದರ ಪರಿಣಾಮವಾಗಿ ಅವರ ಶ್ವಾಸಕೋಶದಲ್ಲಿ ಎರಡು ರಂಧ್ರಗಳು ಪತ್ತೆ ಆಗುತ್ತದೆ. ಇದರಿಂದ ಅವರ ಶೇ. 40 ಶ್ವಾಸಕೋಶ ಹಾನಿಯಾಗುತ್ತದೆ.

ಒಂದು ವರ್ಷದವರೆಗೆ ಯಾವ ಚಟುವಟಿಕೆಯೂ ಇಲ್ಲದೆ ಮನೆಯ ಹಾಸಿಗೆಯಲ್ಲಿ ಮಲಗಿದ್ದ ಗ್ಲಾಡ್ಸನ್ ಅವರಿಗೆ ಬದುಕಿನ ಮುಂದಿನ ದಾರಿಗಳೆಲ್ಲ ಮುಚ್ಚಿ ಹೋಗಿ ಕಾಣುವುದು ಸಾವಿನ ಮಾರ್ಗವೊಂದೇ. ಆದರೆ ಅದೇನೋ ಹೇಳ್ತಾರೆ ಅಲ್ವಾ ನಾವು ಏನೇ ಮಾಡಿದ್ರು ದೇವರ ಯೋಜನೆಯೇ ಬೇರೆ ಇರುತ್ತದೆ ಅಂಥ ಹಾಗೆಯೇ ಗ್ಲಾಡ್ಸನ್ ಅವರಿಗಾಯಿತು. ಖಿನ್ನತೆಯ ದಿನದಲ್ಲಿ ಸಾವಿನ ಯೋಚನೆ ಬಂದಾಗ, ಅವರ ಮನಸ್ಸಲ್ಲಿ ಸಾಧಿಸುವ ಆಲೋಚನೆಯೂ ಸಣ್ಣದಾಗಿ ಬರುತ್ತದೆ. ಇದೇ ಯೋಚನೆಯಲ್ಲಿ ಅವರಿಗೆ ಬರುವುದು  ‘ಒನ್ ಮ್ಯಾನ್ ಬ್ಯಾಂಡ್’…

Advertisement

ಬಹುತೇಕ ಮ್ಯೂಸಿಕ್ ‌ನ ಎಲ್ಲಾ ವಾದ್ಯಗಳನ್ನು ಕಲಿತಿರುವ ಗ್ಲಾಡ್ಸನ್ ಅವರ ‘ಒನ್ ಮ್ಯಾನ್ ಬ್ಯಾಂಡ್’  ಮುಂಬಯಿಯಲ್ಲಿ ಜನಪ್ರಿಯತೆಯನ್ನು ‌ಪಡೆದುಕೊಳ್ಳುತ್ತದೆ. ‘ಒನ್ ಮ್ಯಾನ್ ಬ್ಯಾಂಡ್’ ಎಂದರೆ ಇದರಲ್ಲಿ ಹಾಡು ಇವರದೇ, ಕೀಬೋರ್ಡ್, ಗೀಟಾರ್, ಡ್ರಮ್  ಎಲ್ಲವೂ ಬಾರಿಸುವುದು ಇವರೇ ಅದು ಕೂಡ ಒಂದೇ ಸಮಯದಲ್ಲಿ.!

ಇವರ ಬಾಯಿಯ ಎದುರು ಮೈಕ್, ಕೈಯಲ್ಲಿ ಗೀಟಾರ್, ಸೊಂಟದ ಹಿಂದೆ ಡ್ರಮ್ ಹೇಳುವಷ್ಟು ಈ ಕಲೆಯನ್ನು ರೂಢಿಸಿಕೊಂಡು ಪ್ರಯೋಗಕ್ಕಿಳಿವುದು ಸುಲಭವಲ್ಲ. ಆದರೆ ಗ್ಲಾಡ್ಸನ್ ಜನಪ್ರಿಯತೆ ಎಲ್ಲಿಯವರೆಗೆ ಅಂದರೆ ಭಾರತ ಮಾತ್ರವಲ್ಲದೆ ಚೀನಾ, ಯುಎಇಯಲ್ಲೂ ಇವರು ‘ಒನ್ ಮ್ಯಾನ್ ಬ್ಯಾಂಡ್’ ಶೋ ನೀಡಿದ್ದಾರೆ. ಇದುವರೆಗೆ 2 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಅವರ ಶ್ವಾಸಕೋಶ 40% ಹಾನಿಯಾದರೂ ಅವರು ಕಲೆಯ ಮೂಲಕ ಪ್ರತಿಯೊಬ್ಬರ ಮನವನ್ನು ಗೆಲ್ಲುತ್ತಿದ್ದಾರೆ. ಜಗತ್ತಿನಲ್ಲಿ ಕೆಲವೇ ಕೆಲ‌ ವ್ಯಕ್ತಿಗಳು ಈ ರೀತಿಯ ಪ್ರತಿಭೆಯನ್ನು ಹೊಂದಿದ್ದು, ಭಾರತದಲ್ಲಿ ಇವರೇ ಮೊದಲು. ಅವರ ಕಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಬೇಕೆನ್ನುವುದು ಅವರ ಆಶಯ.

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next