ಕಟಕ್: ಮನುಷ್ಯನ ಜೀವನದಲ್ಲಿ ಯಾವಾಗ, ಎಲ್ಲಿ, ಹೇಗಾಗುತ್ತದೆ ಎಂದು ಹೇಳುವುದೇ ಕಷ್ಟ. ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ ಯಾವುದೊ ಒಂದು ಕ್ಷಣದಲ್ಲಿ ಹಠಾತ್ ನಡೆಯಬಾರದ ದುರ್ಘಟನೆ ನಡೆದಿರುತ್ತದೆ. ಅಂತಹ ನೋವಿನ ಸನ್ನಿವೇಶವೊಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಜೀವನದಲ್ಲೂ ನಡೆದಿದೆ.
ಹೌದು, 2015ರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಪೂರನ್ ಸಿಲುಕಿ ಪವಾಡ ರೀತಿಯಲ್ಲಿ ಬದುಕಿದ್ದರು. ಎರಡೂ ಕಾಲುಗಳು ಮುರಿದಿದ್ದವು. ಪೂರನ್ ಕೆಲವು ದಿನಗಳು ಆಸ್ಪತ್ರೆಯಲ್ಲೇ ಕಳೆದರು. ಹೀಗಿದ್ದರೂ ನಿಕೋಲಸ್ ಪೂರನ್ ಹೆದರಲಿಲ್ಲ. 6 ತಿಂಗಳು ಕ್ರಿಕೆಟ್ ನಿಂದ ದೂರು ಉಳಿದಿದ್ದರು. ಕಠಿಣ ಅಭ್ಯಾಸ ಮೂಲಕ ಮತ್ತೆ ಮರಳಿ ಕ್ರಿಕೆಟ್‌ಗೆ ವಾಪಸ್ ಬಂದರು.
ಹಿಂದಿಗಿಂತಲೂ ಚೆನ್ನಾಗಿಯೇ ಆಡಿದರು. ಸದ್ಯ ಭಾರತ ವಿರುದ್ಧ ವಿಂಡೀಸ್ ಏಕದಿನ ಸರಣಿ ಸೋಲು ಅನುಭವಿಸಿದೆ. ಆದರೆ ಪೂರನ್ ಬ್ಯಾಟಿಂಗ್‌ನಿಂದ ಹರಿದ ರನ್‌ಗಳಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 23 ಎಸೆತಕ್ಕೆ 29 ರನ್, 2ನೇ ಪಂದ್ಯದಲ್ಲಿ 47 ಎಸೆತಕ್ಕೆ 75 ರನ್ ಹಾಗೂ 3ನೇ ಪಂದ್ಯದಲ್ಲಿ 64 ಎಸೆತಕ್ಕೆ 89 ರನ್ ಬಾರಿಸಿ ಅಬ್ಬರಿಸಿದ್ದಾರೆ.
ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೂರನ್ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತಾ ಹಿಂದಿನ ದಿನಗಳನ್ನು ನೆನೆದರು. ಅಪಘಾತದ ನಂತರ ಬಹುತೇಕ ಕ್ರಿಕೆಟ್ ಜೀವನವೇ ಮುಗಿದ ಅನುಭವ ಆಗಿತ್ತಂತೆ. ಆದರೆ ವಿಂಡೀಸ್ ತಂಡದ ಹಾಲಿ ನಾಯಕ ಕೈರನ್ ಪೊಲಾರ್ಡ್ ಬೆಂಬಲದಿಂದ ಇಂದು ಮತ್ತೆ ತಂಡದಲ್ಲಿ ಸ್ಥಾನ ಪಡೆದು ಕೊಳ್ಳಲು ಸಾಧ್ಯವಾಯಿತು ಎಂದು ಪೂರನ್ ಹೇಳಿಕೊಂಡಿದ್ದಾರೆ.
ಪೊಲಾರ್ಡ್ ನನ್ನ ದೇವರು: “ನಾನು ಕ್ರಿಕೆಟ್‌ಗೆ ವಾಪಸ್ ಆಗಲು ಕೈರನ್ ಪೊಲಾರ್ಡ್ ಕಾರಣ. ಅಪಘಾತದ ಬಳಿಕ ಭರವಸೆ ಕಳೆದು ಕೊಂಡು ಬದುಕು ಕತ್ತಲಾಗಿಸಿಕೊಂಡಿದ್ದ ನನ್ನ ಜೀವನದಲ್ಲಿ ಅವರು ದೇವರಂತೆ ಬಂದರು. ಕ್ರಿಕೆಟ್‌ಗೆ ವಾಪಸ್ ಮರಳುವ ತನಕ ನನ್ನ ಜತೆ ಬೆಂಗಾವಲಾಗಿ ನಿಂತರು. ಅವರು ನನ್ನ ಬಾಳಿನಲ್ಲಿ ದೊಡ್ಡಣ್ಣನ ಸ್ಥಾನದಲ್ಲಿ ನಿಲ್ಲುತ್ತಾರೆ. ಮಾತ್ರವಲ್ಲ ತಂದೆಯ ರೀತಿಯ ಸಲಹುವ ಪೋಷಕ. ಅವರಿಂದಾಗಿಯೇ ಇಲ್ಲಿ ತನಕ ಬಂದಿದ್ದೇನೆ. ಪೊಲಾರ್ಡ್ ನೀಡಿದ ಅವಕಾಶದಿಂದ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಪೂರನ್ ಹೇಳಿದರು.
ಮತ್ತೆ ಮಾತು ಮುಂದುವರಿಸಿದ ಪೂರನ್ “ಕ್ರೀಡಾಂಣದ ಒಳಗೆ ಮತ್ತು ಹೊರಗೆ ಎಲ್ಲೆ ಆಗಿರಲಿ, ಪೊಲಾರ್ಡ್ ನನಗೆ ಓರ್ವ ಒಳ್ಳೆಯ ಸ್ನೇಹಿತ ಕೂಡ ಹೌದು, ನಾವಿಬ್ಬರು ಒಬ್ಬರನೊಬ್ಬರು ಚೆನ್ನಾಗಿ ಅರಿತಿದ್ದೇವೆ. ಇದೇ ಕಾರಣದಿಂದ ಶತಕ (135 ರನ್) ಜತೆಯಾಟವಾಡಲು ಸಾಧ್ಯವಾಯಿತು. ಸ್ಪಿನ್ನರ್‌ಗಳ ಮೇಲೆ ಪೊಲಾರ್ಡ್ ಸಾಮಾನ್ಯವಾಗಿ ಅಬ್ಬರಿಸುತ್ತಾರೆ. ಹಾಗಾಗಿ ಕುಲದೀಪ್ ಯಾದವ್‌ಗೆ ಅವರು ದಂಡಿಸಲು ಆರಂಭಿಸಿದರು. ನಾನು ವೇಗಿಗಳನ್ನು ನಿಭಾಯಿಸಿದೆ. ಭಾರತ ವಿಶ್ವದ ಬಲಿಷ್ಠ ತಂಡ. ಟಿ20, ಏಕದಿನ ಗೆಲ್ಲುವ ಮೂಲಕ ತನ್ನ ಶಕ್ತಿ ತೋರಿಸಿದೆ. ಅದರೆದುರು ನಮ್ಮ ಹೋರಾಟವನ್ನು ಪ್ರದರ್ಶಿಸಿದ್ದೇವೆ’ ಎಂದು ತಿಳಿಸಿದರು.