Advertisement

ಜಮ್ಮು ಕಾಶ್ಮೀರ್ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಹೂವು

04:58 PM Sep 16, 2021 | ಕೀರ್ತನ್ ಶೆಟ್ಟಿ ಬೋಳ |
2018ರಲ್ಲಿ ಜಮ್ಮು ಕಾಶ್ಮೀರ ತಂಡದ ಆಟಗಾರ ಮತ್ತು ತರಬೇತುದಾರನಾಗಿ ಇರ್ಫಾನ್ ಪಠಾಣ್ ಸೇರಿದ್ದರು. ರಣಜಿ ತಂಡಕ್ಕೆ ಹೊಸ ಆಟಗಾರರ ಹುಡುಕಾಟದಲ್ಲಿದ್ದ ಪಠಾಣ್, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಸುತ್ತಾಟ ನಡೆಸಿದ್ದರು. ಕಣಿವೆ ರಾಜ್ಯದಲ್ಲಿ ಬಹಳಷ್ಟು ಕ್ಯಾಂಪ್ ಗಳನ್ನು ನಡೆಸಿದ್ದರು. ಈ ಹಂತದಲ್ಲಿ ಜಮ್ಮುವಿನ ವಿಜ್ಞಾನ ಕಾಲೇಜಿನ ಕ್ಯಾಂಪ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುತ್ತಿದ್ದ ಯುವಕ ಪಠಾಣ್ ಗಮನ ಸೆಳೆದಿದ್ದ. ಆ ಚಿಗುರು ಮೀಸೆಯ ಹುಡುಗನಿಗೆ ಆಗಿನ್ನೂ 16 ವರ್ಷ. ಈತ ಬ್ಯಾಟ್ ಬೀಸುವ ಪರಿಯ ಬಗ್ಗೆ ಹೇಳಬೇಕಾದರೆ ಆತ ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ ಬಾರಿಸಿದ ಶತಕವನ್ನು ಗಮನಿಸಬೇಕು...
Now pay only for what you want!
This is Premium Content
Click to unlock
Pay with

ಜಮ್ಮು ಕಾಶ್ಮೀರದ ರಜೌರಿ ಎಂದರೆ ಪಕ್ಕನೆ ನೆನಪಾಗುವುದು ಬೆಟ್ಟ ಗುಡ್ಡಗಳ ನಡುವಣ ಒಂದು ಪಟ್ಟಣ. ದೂಧ್ ಧಾರಿ ದೇವಸ್ಥಾನ. ಪಟ್ಟಣದ ನಡುವೆ ಹಾದು ಹೋಗುವ ನದಿ. ಪ್ರಸಿದ್ಧ ರಜೌರಿ ಸೇತುವೆಯೇ? ಅಲ್ಲ ಕಣ್ಣು ಮುಚ್ಚಿ ಒಮ್ಮೆ ರಜೌರಿಯನ್ನು ನೆನೆದರೆ ಎದುರಾಗುವುದು ಗುಂಡಿನ ಮೊರೆತಗಳು, ಸಿಡಿದ ಬಾಂಬ್‌ ನ ಕಾರಣದಿಂದ ಛಿದ್ರ ಛಿದ್ರವಾದ ಮೃತದೇಹಗಳು, ಹೊತ್ತಿ ಉರಿಯುತ್ತಿರುವ ವಾಹನಗಳು.! ಇಂತಹ ಗುಂಡಿನ ಮೊರೆತಗಳ ಸದ್ದಿನ ನಡುವೆ ಕ್ರಿಕೆಟ್ ಪ್ರತಿಭೆಯೊಂದು ಅರಳುತ್ತಿದೆ. ಕಷ್ಟಗಳ ಕೆಸರಿನ ನಡುವೆ ಕಮಲದಂತೆ ಅರಳಲು ಐಪಿಎಲ್ ಎಂಬ ಉದಯ ರವಿಯತ್ತ ಮುಖ ಮಾಡಿದ್ದಾನೆ. ಈ ಪ್ರತಿಭೆ ಬೇರಾರು ಅಲ್ಲ ಜಮ್ಮು ಕಾಶ್ಮೀರದ ಹೊಸ ಸೆನ್ಸೇಶನ್ 19ರ ಹರೆಯದ ಅಬ್ದುಲ್‌ ಸಮದ್.

Advertisement

ಐಪಿಎಲ್ ಎಂಬ ಮಹಾಕೂಟದಲ್ಲಿ ಪಾಲ್ಗೊಳ್ಳಲು ಬಹಳಷ್ಟು ಯುವ ಆಟಗಾರರು ಇಚ್ಛಿಸುತ್ತಾರೆ. ಕೆಲವರು ಅವಕಾಶ ಪಡೆದರೆ, ಕೆಲವರು ಅದರಿಂದ ವಂಚಿತರಾಗುತ್ತಾರೆ. ಸದ್ಯ ಸನ್ ರೈಸರ್ಸ್ ತಂಡದಲ್ಲಿ ಅವಕಾಶ ಪಡೆದಿರುವ ಸಮದ್ ಗಮನ ಸೆಳೆದಿರುವುದು ತನ್ನ ಹಿನ್ನೆಲೆಯಿಂದ ಮಾತ್ರವಲ್ಲ ಪ್ರತಿಭೆಯಿಂದಲೂ.

2018ರಲ್ಲಿ ಜಮ್ಮು ಕಾಶ್ಮೀರ ತಂಡದ ಆಟಗಾರ ಮತ್ತು ತರಬೇತುದಾರನಾಗಿ ಇರ್ಫಾನ್ ಪಠಾಣ್ ಸೇರಿದ್ದರು. ರಣಜಿ ತಂಡಕ್ಕೆ ಹೊಸ ಆಟಗಾರರ ಹುಡುಕಾಟದಲ್ಲಿದ್ದ ಪಠಾಣ್, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಸುತ್ತಾಟ ನಡೆಸಿದ್ದರು. ಕಣಿವೆ ರಾಜ್ಯದಲ್ಲಿ ಬಹಳಷ್ಟು ಕ್ಯಾಂಪ್ ಗಳನ್ನು ನಡೆಸಿದ್ದರು. ಈ ಹಂತದಲ್ಲಿ ಜಮ್ಮುವಿನ ವಿಜ್ಞಾನ ಕಾಲೇಜಿನ ಕ್ಯಾಂಪ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುತ್ತಿದ್ದ ಯುವಕ ಪಠಾಣ್ ಗಮನ ಸೆಳೆದಿದ್ದ. ಆ ಚಿಗುರು ಮೀಸೆಯ ಹುಡುಗನಿಗೆ ಆಗಿನ್ನೂ 16 ವರ್ಷ. ಆತನೇ ಅಬ್ದುಲ್‌ ಸಮದ್.

ಡ್ರೈ ವಿಕೆಟ್ ನಲ್ಲಿ ಹಿರಿಯ ಆಟಗಾರರು ಪರದಾಡುತ್ತಿದ್ದರೆ ಈ ಬಾಲಕ ಮಾತ್ರ ಮುನ್ನುಗ್ಗಿ ಬಂದು ದಂಡಿಸುತ್ತಿದ್ದ. ದೂರ ದೂರಕ್ಕೆ ಸಿಕ್ಸರ್ ಬಾರಿಸುತ್ತಿದ್ದ. ಆಗಲೇ ನಮ್ಮ ಗಮನ ಸೆಳೆದಿದ್ದ. ಕೂಡಲೇ ನಾನು ಆತನ ಹಿನ್ನೆಲೆ ಗಮನಿಸಿದೆ. ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಅವಕಾಶ ಕೊಡಬೇಕೆಂದು ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ಕಣಕ್ಕಿಳಿಸಿದೆ ಎನ್ನುತ್ತಾರೆ ಇರ್ಫಾನ್ ಪಠಾಣ್.

ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸಮದ್ 51ಎಸೆತಗಳಿಂದ 76 ರನ್ ಬಾರಿಸಿದ್ದರು. ತಂಡದ ಗೆಲುವಿನ ರೂವಾರಿಯಾದರು. ನಂತರ ಲಿಸ್ಟ್ ಎ ಮತ್ತು ರಣಜಿ ತಂಡಕ್ಕೂ ಆಯ್ಕೆಯಾದರು.

Advertisement

ಜಮ್ಮು ಕಾಶ್ಮೀರ ಪರ 10 ಪ್ರಥಮ ದರ್ಜೆ ಪಂದ್ಯವಾಡಿರುವ ಸಮದ್, ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 592 ರನ್ ಗಳಿಸಿದ್ದಾರೆ. 10 ಟಿ20 ಇನ್ನಿಂಗ್ಸ್ ಗಳಲ್ಲಿ 40ರ ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. ಸ್ಟ್ರೈಕ್  ರೇಟ್ 136.4. ಲಿಸ್ಟ್ ಎ ಕ್ರಿಕೆಟ್ ನಲ್ಲಿ 11 ಪಂದ್ಯಗಳಲ್ಲಿ 307 ರನ್ ಗಳಿಸಿದ್ದಾರೆ, ಈಗಾಗಲೇ ನಾಲ್ಕು ಅರ್ಧಶತಕ ಬಾರಿಸಿದ್ದಾರೆ.

ಅಬ್ದಲ್ ಸಮದ್ ಬ್ಯಾಟ್ ಬೀಸುವ ಪರಿಯ ಬಗ್ಗೆ ಹೇಳಬೇಕಾದರೆ ಆತ ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ ಬಾರಿಸಿದ ಶತಕವನ್ನು ಗಮನಿಸಬೇಕು. 72 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದ್ದ ಸಮದ್ ಎಂಟು ಬಾರಿ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದರು. ಏಳು ಬೌಂಡರಿ ಬಾರಿಸಿದ್ದರು. ಅಂದರೆ ಟೆಸ್ಟ್ ಶತಕವೊಂದರಲ್ಲಿ ಕೇವಲ ಸಿಕ್ಸರ್- ಬೌಂಡರಿಯಿಂದಲೇ ಈತ 76 ರನ್ ಗಳಿಸಿದ್ದ.

ಯುವ ಆಟಗಾರನ ಸಾಧನೆ ಗಮನಿಸಿದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಐಪಿಎಲ್ ಹರಾಜಿನಲ್ಲಿ ಖರೀದಿಸಿದೆ. ಈ ಮೂಲಕ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದ ಜಮ್ಮು ಕಾಶ್ಮೀರದ ನಾಲ್ಕನೇ ಆಟಗಾರ ಎಂಬ ಗರಿಮೆಗೆ ಪಾತ್ರರಾದರು. (ಪರ್ವೇಜ್ ರಸೂಲ್, ಮಂಜೂರ್ ದಾರ್, ರಸಿಖ್ ಸಲಾಂ ಮೊದಲ ಮೂವರು).

“ನನ್ನ ಕ್ರಿಕೆಟ್ ಪಯಣ ಈಗಷ್ಟೇ ಆರಂಭವಾಗಿದ್ದು, ಇನ್ನಷ್ಟು ಸಾಧನೆ ಮಾಡಬೇಕಿದೆ. ಗಲ್ಲಿ ಕ್ರಿಕೆಟ್ ಆಡುತ್ತಿದ್ದಾತ ಈಗ ಐಪಿಎಲ್ ಆಡುವ ಅವಕಾಶ ಪಡೆದಿದ್ದೇನೆ. ಮುಂದೊಂದು ದಿನ ಭಾರತೀಯ ತಂಡವನ್ನು ಪ್ರತಿನಿಧಿಸುತ್ತೇನೆ” ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಬ್ದುಲ್ ಸಮದ್.

ಸನ್ ರೈಸರ್ಸ್ ಪರವಾಗಿ ಈಗಾಗಲೇ 16 ಪಂದ್ಯಗಳಾಡಿರುವ 147 ರನ್ ಗಳಿಸಿದ್ದಾರೆ. ಕೆಳಕ್ರಮಾಂಕದಲ್ಲಿ ಆಡುವ ಕಾರಣ ಅವಕಾಶಗಳು ಸಿಗುವೇ ಕಡಿಮೆ. ಹೈದರಾಬಾದ್ ಫ್ರಾಂಚೈಸಿ ಪರ ಫಿನಿಶರ್ ಆಗಿ ಮಿಂಚುತ್ತಿರುವ ಸಮದ್ 161.5ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಸ್ ಬೀಸುತ್ತಿದ್ದಾರೆ. ಯುಎಇ ನಲ್ಲಿ ನಡೆಯಲಿರುವ ಐಪಿಎಲ್ ಕೂಟದ ಮುಂದಿನ ಭಾಗದಲ್ಲಿ ಮತ್ತಷ್ಟು ಮಿಂಚುವ ಇರಾದೆಯಲ್ಲಿದ್ದಾರೆ ಕಾಶ್ಮೀರದ ಹುಡುಗ ಅಬ್ದುಲ್ ಸಮದ್.

Advertisement

Udayavani is now on Telegram. Click here to join our channel and stay updated with the latest news.