Advertisement
ಐಪಿಎಲ್ ಎಂಬ ಮಹಾಕೂಟದಲ್ಲಿ ಪಾಲ್ಗೊಳ್ಳಲು ಬಹಳಷ್ಟು ಯುವ ಆಟಗಾರರು ಇಚ್ಛಿಸುತ್ತಾರೆ. ಕೆಲವರು ಅವಕಾಶ ಪಡೆದರೆ, ಕೆಲವರು ಅದರಿಂದ ವಂಚಿತರಾಗುತ್ತಾರೆ. ಸದ್ಯ ಸನ್ ರೈಸರ್ಸ್ ತಂಡದಲ್ಲಿ ಅವಕಾಶ ಪಡೆದಿರುವ ಸಮದ್ ಗಮನ ಸೆಳೆದಿರುವುದು ತನ್ನ ಹಿನ್ನೆಲೆಯಿಂದ ಮಾತ್ರವಲ್ಲ ಪ್ರತಿಭೆಯಿಂದಲೂ.
Advertisement
ಜಮ್ಮು ಕಾಶ್ಮೀರ ಪರ 10 ಪ್ರಥಮ ದರ್ಜೆ ಪಂದ್ಯವಾಡಿರುವ ಸಮದ್, ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 592 ರನ್ ಗಳಿಸಿದ್ದಾರೆ. 10 ಟಿ20 ಇನ್ನಿಂಗ್ಸ್ ಗಳಲ್ಲಿ 40ರ ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 136.4. ಲಿಸ್ಟ್ ಎ ಕ್ರಿಕೆಟ್ ನಲ್ಲಿ 11 ಪಂದ್ಯಗಳಲ್ಲಿ 307 ರನ್ ಗಳಿಸಿದ್ದಾರೆ, ಈಗಾಗಲೇ ನಾಲ್ಕು ಅರ್ಧಶತಕ ಬಾರಿಸಿದ್ದಾರೆ.
ಅಬ್ದಲ್ ಸಮದ್ ಬ್ಯಾಟ್ ಬೀಸುವ ಪರಿಯ ಬಗ್ಗೆ ಹೇಳಬೇಕಾದರೆ ಆತ ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ ಬಾರಿಸಿದ ಶತಕವನ್ನು ಗಮನಿಸಬೇಕು. 72 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದ್ದ ಸಮದ್ ಎಂಟು ಬಾರಿ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದರು. ಏಳು ಬೌಂಡರಿ ಬಾರಿಸಿದ್ದರು. ಅಂದರೆ ಟೆಸ್ಟ್ ಶತಕವೊಂದರಲ್ಲಿ ಕೇವಲ ಸಿಕ್ಸರ್- ಬೌಂಡರಿಯಿಂದಲೇ ಈತ 76 ರನ್ ಗಳಿಸಿದ್ದ.
ಯುವ ಆಟಗಾರನ ಸಾಧನೆ ಗಮನಿಸಿದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಐಪಿಎಲ್ ಹರಾಜಿನಲ್ಲಿ ಖರೀದಿಸಿದೆ. ಈ ಮೂಲಕ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದ ಜಮ್ಮು ಕಾಶ್ಮೀರದ ನಾಲ್ಕನೇ ಆಟಗಾರ ಎಂಬ ಗರಿಮೆಗೆ ಪಾತ್ರರಾದರು. (ಪರ್ವೇಜ್ ರಸೂಲ್, ಮಂಜೂರ್ ದಾರ್, ರಸಿಖ್ ಸಲಾಂ ಮೊದಲ ಮೂವರು).
“ನನ್ನ ಕ್ರಿಕೆಟ್ ಪಯಣ ಈಗಷ್ಟೇ ಆರಂಭವಾಗಿದ್ದು, ಇನ್ನಷ್ಟು ಸಾಧನೆ ಮಾಡಬೇಕಿದೆ. ಗಲ್ಲಿ ಕ್ರಿಕೆಟ್ ಆಡುತ್ತಿದ್ದಾತ ಈಗ ಐಪಿಎಲ್ ಆಡುವ ಅವಕಾಶ ಪಡೆದಿದ್ದೇನೆ. ಮುಂದೊಂದು ದಿನ ಭಾರತೀಯ ತಂಡವನ್ನು ಪ್ರತಿನಿಧಿಸುತ್ತೇನೆ” ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಬ್ದುಲ್ ಸಮದ್.
ಸನ್ ರೈಸರ್ಸ್ ಪರವಾಗಿ ಈಗಾಗಲೇ 16 ಪಂದ್ಯಗಳಾಡಿರುವ 147 ರನ್ ಗಳಿಸಿದ್ದಾರೆ. ಕೆಳಕ್ರಮಾಂಕದಲ್ಲಿ ಆಡುವ ಕಾರಣ ಅವಕಾಶಗಳು ಸಿಗುವೇ ಕಡಿಮೆ. ಹೈದರಾಬಾದ್ ಫ್ರಾಂಚೈಸಿ ಪರ ಫಿನಿಶರ್ ಆಗಿ ಮಿಂಚುತ್ತಿರುವ ಸಮದ್ 161.5ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಸ್ ಬೀಸುತ್ತಿದ್ದಾರೆ. ಯುಎಇ ನಲ್ಲಿ ನಡೆಯಲಿರುವ ಐಪಿಎಲ್ ಕೂಟದ ಮುಂದಿನ ಭಾಗದಲ್ಲಿ ಮತ್ತಷ್ಟು ಮಿಂಚುವ ಇರಾದೆಯಲ್ಲಿದ್ದಾರೆ ಕಾಶ್ಮೀರದ ಹುಡುಗ ಅಬ್ದುಲ್ ಸಮದ್.