ಮಾನಸ ವಾರಾಣಸಿ :
ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020ಕ್ಕೆ ಮಾನಸ ವಾರಾಣಸಿ ಆಯ್ಕೆಯಾಗಿದ್ದಾರೆ. ಮೂಲತಃ ಹೈದರಾಬಾದ್‌ನವರಾದ ಇವರು ಎಂಜಿನಿಯರ್ ಪದವೀಧರೆ. 23 ವರ್ಷ ವಯಸ್ಸಿನ ಮಾನಸ, ಫೈನಾನ್ಶಿಯಲ್ ಇನ್‌ಫಾರ್ಮೇಶನ್ ಎಕ್ಸ್‌ಚೇಂಜ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ಲೋಬಲ್ ಇಂಡಿಯನ್‌ನಲ್ಲಿ ಶಾಲಾಭ್ಯಾಸ ಮುಗಿಸಿ, ವಾಸವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಕೋರ್ಸ್ ಪೂರೈಸಿದ್ದಾರೆ. ಇವರಿಗೆ ಪುಸ್ತಕ ಓದು, ಸಂಗೀತ, ನೃತ್ಯ, ಯೋಗ ಮತ್ತು ಪರಿಸರದ ಮೇಲೆ ಆಸಕ್ತಿ. ಎಂಬ್ರಾಯ್ಡರಿ ಮೇಲೆ ಮಾನಸಗೆ ಆಸಕ್ತಿ ಹೆಚ್ಚಂತೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಎಂಬ್ರಾಯxರಿ ಮಾಡಿರುವ ಫೋಟೋಗಳನ್ನು ಹಾಕಿ ಖುಷಿ ಪಡುತ್ತಾರೆ. ಹಾಗೆಯೇ ನಾಯಿಗಳನ್ನು ಕಂಡರೆ ಪ್ರೀತಿ ಹೆಚ್ಚು. ಅದರಲ್ಲೂ ನಾಯಿಗಳು ಮತ್ತು ಸಸಿಗಳ ಜತೆ ಮಾತನಾಡುವುದು ಎಂದರೆ ಖುಷಿಯಂತೆ. ಹಾಗೆಯೇ ಪ್ರವಾಸದಲ್ಲೂ ಆಸಕ್ತಿ ಇರುವ ಮಾನಸ, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಹಾಗೆಯೇ, ಪ್ರಿಯಾಂಕಾ ಚೋಪ್ರಾ ಅವರೇ ಇವರಿಗೆ ಸ್ಫೂರ್ತಿಯಂತೆ.
ಅಪ್ರಮೇಯ ರಾಧಾಕೃಷ್ಣ :
ಕೆಲವು ಸಂಗತಿಗಳು ಹೇಗೆ, ಯಾವಾಗ ಮತ್ತು ಏಕೆ ಪ್ರಸಿದ್ಧಿಯಾಗುತ್ತವೆ ಎಂಬುದನ್ನು ತಿಳಿಯುವುದೇ ಕಷ್ಟಸಾಧ್ಯದ ವಿಚಾರ. ಇಂಥ ಒಂದು ಸಂಗತಿ ದಿಢೀರನೇ “ಕೂ’ ಎಂಬ ಆ್ಯಪ್ ಪ್ರಸಿದ್ಧಿಯಾಗಿದ್ದುದು. ಸದ್ಯ ಕೇಂದ್ರ ಸರಕಾರ ಮತ್ತು ಟ್ವಿಟರ್ ಸಂಸ್ಥೆ ನಡುವೆ ಖಾತೆಗಳ ಸ್ಥಗಿತ ವಿಚಾರದಲ್ಲಿ ಜಗಳವಾಗುತ್ತಿದ್ದು, ಕೇಂದ್ರದ ಸಚಿವರು, ಕೆಲವು ಇಲಾಖೆಗಳು, ಸಂಸ್ಥೆಗಳು “ಕೂ’ ಆ್ಯಪ್‌ನತ್ತ ಹೋಗಿವೆ. ಇದು ಬೆಂಗಳೂರು ಮೂಲದ ಸಂಸ್ಥೆ. ಅಪ್ರಮೇಯ ರಾಧಾಕೃಷ್ಣ ಇದರ ಸಹ ಮಾಲಕರು. ಇವರು, ಎನ್‌ಐಐಟಿಯಲ್ಲಿ ಪದವೀಧರರಾಗಿದ್ದು, ಆರಂಭದಲ್ಲಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಿದವರು. ಅಷ್ಟೇ ಅಲ್ಲ, ಟ್ಯಾಕ್ಸಿಫಾರ್‌ಶ್ಯೂರ್‌ನ ಮಾಲಕರೂ ಇವರೇ ಆಗಿದ್ದರು. ಬಳಿಕ ಇದು ಓಲಾಗೆ ಮಾರಾಟವಾಗಿತ್ತು. ಅಷ್ಟೇ ಅಲ್ಲ, ವೋಕಲ್ ಎಂಬ ಆಡಿಯೋ-ವೀಡಿಯೋ ಆ್ಯಪ್ ಕೂಡ ಇವರಿಂದ ರೂಪಿತವಾಗಿದ್ದಂಥದ್ದು. 2.5 ವರ್ಷಗಳ ಹಿಂದೆ ಚಿಂತನೆ ಮೊಳೆತು, 2019ರ ಮಾರ್ಚ್‌ನಲ್ಲಿ ಕೂ ಅನ್ನು ಆರಂಭಿಸಲಾಗಿತ್ತು. ಟ್ವಿಟರ್‌ನಂತೆಯೇ ಇರುವ ಕೂ ದೇಶದಲ್ಲಿ ಕನ್ನಡವೂ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಇದರಲ್ಲಿ ಕರ್ನಾಟಕ ಸಿಎಂ ಸೇರಿದಂತೆ ವಿವಿಧ ಸಚಿವರು, ಕೇಂದ್ರ ಸಚಿವರು, ನಟ, ನಟಿಯರ ಅಧಿಕೃತ ಖಾತೆಗಳೂ ಇವೆ.