Advertisement

ಕತೆ: ಹೊಸ ರಸ್ತೆ

07:13 PM May 04, 2019 | mahesh |

ಬದುಕು ಬದಲಾಗುವುದು ಅದೆಷ್ಟು ಬೇಗ ಅಲ್ವಾ ! ಇಲ್ಲಿ ನಮ್ಮ ಲೆಕ್ಕಾಚಾರದಂತೆ ಏನೂ ನಡೆಯುವುದಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಇನ್ನೇನೋ ನಡೆದುಬಿಟ್ಟಿರುತ್ತದೆ. ಬದುಕು ಕವಲು ದಾರಿಗಳ ಮಧ್ಯೆ ಸಾಗುತ್ತಲೇ ಇರುತ್ತದೆ. ನಾವು ಬೇಗ ಗಮ್ಯ ತಲುಪುವ ಭರದಲ್ಲಿ ಒಳದಾರಿಗಳಲ್ಲಿ ಸಾಗಿ ದಾರಿ ತಪ್ಪಿ ಮತ್ತೆಲ್ಲೋ ಸೇರೋ ಹೊತ್ತಿಗೆ ಬದುಕು ಮತ್ತಷ್ಟು ಗೊಂದಲಗಳ ಗೂಡಾಗಿ ಬಿಟ್ಟಿರುತ್ತದೆ. ಇಷ್ಟ-ಕಷ್ಟಗಳ ಮಧ್ಯೆ ಇದೇ ನನ್ನ ಬದುಕು ಅಂತ ಸುಮ್ಮನೆ ಒಪ್ಪಿಕೊಂಡು ಮುಂದೆ ಸಾಗಿಬಿಡಬೇಕಷ್ಟೇ.

Advertisement

ಧಡಕ್ಕನೇ ಎದುರಿನಿಂದ ಬಂದ ಸ್ಕೂಟಿ ಅನಿತಾಳ ಯೋಚನೆಗೆ ಬ್ರೇಕ್‌ ಹಾಕಿತು. “ಏನಮ್ಮ, ನೋಡ್ಕೊಂಡು ರೋಡ್‌ ಕ್ರಾಸ್‌ ಮಾಡೋಕಾಗಲ್ವಾ?’ ವಾಹನ ಸವಾರನ ಕಿರುಚಾಟಕ್ಕೆ ಪ್ರತಿಕ್ರಿಯಿಸದೆ ಸುಮ್ಮನೆ ರಸ್ತೆ ದಾಟಿ ಬಸ್‌ಸ್ಟಾಪ್‌ಗೆ ಬಂದು ನಿಂತಳು. ಇದು ಯಾವತ್ತಿನ ಗೋಳು. ರಸ್ತೆ ದಾಟುವಾಗ ವಾಹನ ಸವಾರರ ಬೈಗುಳ. ಸಿಗ್ನಲ್‌ ಬೀಳದಿದ್ದರೂ ವಾಹನ ಚಲಾಯಿಸುವ ಆತುರ ಅವರಿಗೆ, ಸಿಗ್ನಲ್‌ ಬಿಡೋ ಮುನ್ನ ರಸ್ತೆ ದಾಟೋ ಅವಸರ ನಮಗೆ. ಜಗಳಕ್ಕೆ ನಿಂತರೆ ಸರಿ-ತಪ್ಪುಗಳ ವಾಗ್ವಾದದ ಮಹಾಯುದ್ಧ ಗ್ಯಾರಂಟಿ. ಸುಮ್ಮನೆ ಪ್ರತಿಕ್ರಿಯಿಸದೆ ಬಂದುಬಿಟ್ಟರೆ, ಸದ್ಯ ಮೂಡ್‌ ಆಫ್ ಆಗೋದಾದ್ರೂ ತಪ್ಪಿತು.

ಅಷ್ಟರಲ್ಲೇ, 37 ನಂಬರ್‌ನ ಬಸ್‌ ಬಂದ ಕಾರಣ, ಬಸ್‌ಸ್ಟಾಪ್‌ನಲ್ಲಿದ್ದ ಅರ್ಧಕ್ಕರ್ಧ ಜನರೂ ಬಸ್‌ನತ್ತ ಜಮಾಯಿಸಿದರು. ಬಹುಶಃ ತುಂಬಾ ಹೊತ್ತಿನಿಂದ ಆ ರೂಟ್‌ ಬಸ್‌ ಬಂದಿಲ್ಲ ಅನ್ಸುತ್ತೆ. ಬಸ್‌ಗೆ ಕಾದು ಕಾದು ಕಾದು ಸುಸ್ತಾಗಿ ಬ್ಯಾಗ್‌ ಎಲ್ಲಾ ಪಕ್ಕಕ್ಕಿಟ್ಟು ಆರಾಮವಾಗಿ ಕೂತಿದ್ದ ಮಂದಿ ಒಮ್ಮೆಲೇ ಬಸ್‌ ಡೋರ್‌ ಮುಂದೆ ಸೇರಿಬಿಟ್ಟರು. ಬಸ್‌ ಖಾಲಿಯಿದ್ದರೂ, ಸೀಟಿಗಾಗಿ ನೂಕಾಟ, ತಳ್ಳಾಟ ಮಾತ್ರ ತಪ್ಪಲ್ಲಿಲ್ಲ. “ಶ್ರೀನಗರ’, “ಶ್ರೀನಗರ’ ಅಂತ ಕಂಡಕ್ಟರ್‌ ಕೂಗಿದ್ದನ್ನೂ ಕೇಳಿಸಿಕೊಳ್ಳದೆ, ಎದ್ದೂಬಿದ್ದೂ ಸೀಟು ಹಿಡಿದು ಕುಳಿತ ಮಹಿಳೆ, “ಮಾರ್ಕೆಟ್‌ ಹೋಗಲ್ವಾ?’ ಅಂತ ಕೆಳಗಿಳಿದ್ದಿದ್ದೂ ಆಯಿತು. “ಕೇಳಿ ಹತ್ತೋಕೆ ಏನು ಕಷ್ಟ?’ ಅಂತ ಡ್ರೈವರ್‌ ಗೊಣಗಿದ್ದೂ ಆಯಿತು.

ಜನರ ಸೀಟು ಹಿಡಿಯೋ ಧಾವಂತ ನೋಡಿದ್ರೆ, ಇದೇ ಸೀಟಲ್ಲಿ ಕುಳಿತು ಒಂದು ವರ್ಷ ವರ್ಲ್ಡ್ ಟೂರ್‌ ಹೋಗ್ತಾರೇನೋ ಅಂತ ಅನಿಸೋದು ಖಂಡಿತ ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಲೇ ಖಾಲಿಯಿದ್ದ ಸೀಟಲ್ಲಿ ಬಂದು ಕುಳಿತಳು ಅನಿತಾ. ಅಷ್ಟರಲ್ಲಿ ಅವಳ ಎದುರು ಸೀಟಿನಲ್ಲಿದ್ದ ಮಹಿಳೆ ಇನ್ನೊಂದು ಬದಿಯಲ್ಲಿರುವ ಸೀಟ್‌ಗೆ ತನ್ನ ಬ್ಯಾಗ್‌ ನ್ನು ಹಿಡಿದುಕೊಂಡು ಶಿಫ್ಟ್ ಆದಳು. ಇದೊಂಥರ ಕಾಯಿಲೆ, ಸೀಟ್‌ ಖಾಲಿ ಇತ್ತು ಅಂದ್ರೆ ಮಂಗನ ತರ ಸೀಟಿನಿಂದ ಸೀಟಿಗೆ ಜಂಪ್‌ ಮಾಡೋದು. ಮನಸ್ಸಲ್ಲೇ ನಗುತ್ತಲೇ ಕಿಟಿಕಿಯಿಂದಾಚೆೆ ಕಣ್ಣಾಡಿಸಿದಳು ಅನಿತಾ. ವೀಕ್‌ ಡೇಸ್‌, ಆದ್ರೂ ಟ್ರಾಫಿಕ್‌ ಏನೋ ಕಡಿಮೆಯಿರಲಿಲ್ಲ. “ರೊಂಯ್‌’ “ರೊಂಯ್‌’ ಎಂದು ಸಾಗುವ ವಾಹನಗಳಿಂದ ಧೂಳು ಸಹ ಹಾಗೆಯೇ ಮುಖಕ್ಕೆ ರಾಚುತ್ತಿತ್ತು, ಬ್ಯಾಗ್‌ನಿಂದ ಸ್ಟಾಲ್‌ ತೆಗೆದು ಮುಖಕ್ಕೆ ಕಟ್ಟಿಕೊಂಡಳು. ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಒಮ್ಮೆ ಇತ್ತ ತಿರುಗಿ ಮತ್ತೆ ತನ್ನ ಮೊಬೈಲ್‌ನಲ್ಲಿ ಮುಳುಗಿದಳು.

ಬದುಕು ನಾವು ಅಂದುಕೊಂಡಂತೆ ಅಲ್ಲ ಅನ್ನೋದು ಮತ್ತೂಮ್ಮೆ ಸ್ಪಷ್ಟವಾಗಿದೆ. ಹಳ್ಳಿಯ ವಾತಾವರಣದಲ್ಲಿ ಬೆಳೆದು ನಗರವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ನಾನು ಇಂದು ಅದೇ ನಗರದ ಒಂದು ಭಾಗವಾಗಿ ಹೋಗಿದ್ದೇನೆ. ಬೆಂಗಳೂರಿನ ಟ್ರಾಫಿಕ್‌, ಮಾಲಿನ್ಯ, ಜಂಜಡದ ಬದುಕನ್ನು ಟೀಕಿಸುತ್ತಿದ್ದವಳು ಇಂದು ಅದೇ ಬದುಕನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆ. ಅಂದು ಅಪಥ್ಯವಾಗಿದ್ದ ಜಂಜಡಗಳ ವರ್ತುಲದಲ್ಲಿ ಇಂದು ನನ್ನ ಬದುಕು ಕೂಡ ಸಾಗುತ್ತಿದೆ. ಬೆಳಗೆದ್ದು ಗಡಿಬಿಡಿಯಲ್ಲಿ ಏನೋ ಒಂದು ಬಾತ್‌ ತಯಾರಿಸಿಕೊಂಡು, ಬಾಕ್ಸ್‌ಗೂ ತುಂಬಿಸಿ, ತುಂಬಿ ತುಳುಕುವ ಬಸ್‌ನಲ್ಲಿ ಹೇಗೋ ಜಾಗ ಮಾಡಿಕೊಂಡು ಆಫೀಸ್‌ ಸೇರೋದೇ ಹರಸಾಹಸ. ಬಾಸ್‌ನ ಬೈಗುಳ ಕೇಳಿ ಮಧ್ಯಾಹ್ನ ಬಾಕ್ಸ್‌ ತಿನ್ನೋಕು ರುಚಿಸುವುದಿಲ್ಲ. ತಿಂಗಳ ಕೊನೆಯ ದಿನಸಿಯ ಲಿಸ್ಟ್‌ ಕಣ್ಣಮುಂದೆ ಬಂದು ಬಾಕ್ಸ್‌ನಲ್ಲಿದ್ದ ಅಷ್ಟನ್ನೂ ಹೊಟ್ಟೆಗಿಳಿಸಿ ಮತ್ತೆ ಕೆಲಸಕ್ಕೆ ಹಾಜರ್‌. ಸಂಜೆಯಾಗೋ ಹೊತ್ತಿಗೆ ಕೆಲಸದ ಒತ್ತಡ, ಬಾಸ್‌ನ ಬೈಗುಳ ಎಲ್ಲಾದರೂ ಭೂಗತವಾಗಿ ಬಿಡೋಣ ಅನ್ನುವಷ್ಟು ರೇಜಿಗೆ ಹುಟ್ಟಿಸಿಬಿಟ್ಟಿರುತ್ತದೆ. ಇದು ಸಾಧ್ಯವಾಗೋ ಮಾತಾ ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಲೇ ನಸುನಕ್ಕಳು ಅನಿತಾ.

Advertisement

ಮತ್ತೆ ಅದೇ ಟ್ರಾಫಿಕ್‌, ಜನಜಂಗುಳಿಯಲ್ಲಿ ಮನೆಗೆ ಮರಳಿ ಸೇರೋ ಹೊತ್ತಿಗೆ, ಏನೋ ಮಿಸ್ಟೇಕ್‌ ಹುಡುಕಿ ಬಾಸ್‌ ಕಾಲ್‌! “ಮನೆಯಲ್ಲೂ ನೆಮ್ಮದಿ ಕೊಡಲ್ವಾ ಮಾರಾಯ. ಯಾಕೆ ನಿಂಗೆ ತಲೆಸರಿಯಿಲ್ವಾ?’ ಅಂತ ಹಿಗ್ಗಾಮುಗ್ಗಾ ಬಯ್ಯೋಣ ಅನ್ಸುತ್ತೆ. ಆದ್ರೇನು, ನಾಳೆ ಮತ್ತೆ ಅದೇ ಆಫೀಸ್‌ಗೆ ಹೋಗ್ಬೇಕಲ್ವಾ ! “ಹೇಳಿ ಸರ್‌’ ಅಂತ ನಯವಿನಯದ ಮಾತು. ಮತ್ತೆ ನಾಳೆ ಬೆಳಗ್ಗೆ ತಿಂಡಿ ಏನು ಅಂತ ಚಿಂತೆ. ವೀಕೆಂಡ್‌ ವೀಕ್‌ ಆಫ್ನಲ್ಲಿ ಬಟ್ಟೆ ಒಗೆಯುವ ಕಾರ್ಯಕ್ರಮ, ಮನೆ ಕ್ಲೀನಿಂಗ್‌, ಮಧ್ಯಾಹ್ನದ ಮೇಲೆ ಜಗತ್ತನ್ನೇ ಮರೆತುಬಿಡುವಷ್ಟು ಗಟ್ಟಿ ನಿದ್ದೆ. ಏನ್‌ ಜೀವನಾನಪ್ಪಾ ಅಂತ ಸಾವಿರ ಬಾರಿ ಅನಿಸಿದರೂ, ಏನೂ ಮಾಡುವಂತಿಲ್ಲ. ಬದುಕಿಗೆ, ಬದುಕಿನ ಅನಿವಾರ್ಯತೆಗಳು ಕೆಲವೊಮ್ಮೆ ನಮ್ಮನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ಬಿಡುತ್ತದೆ.

ಅನಿತಾಳ ಮನಸು ಹಾಗೆಯೇ ಹಿಂದಕ್ಕೆ ಸರಿದು ಹೋಯಿತು. ಮಹಾನಗರಕ್ಕೆ ಬಯಸಿ ಬಯಸಿ ಬಂದಿದ್ದೇನೂ ಅಲ್ಲ. ತೀರಾ ಇಷ್ಟವಿಲ್ಲದೆ ಬಂದಿದ್ದು ಅಲ್ಲ. ವಿದ್ಯಾಭ್ಯಾಸ ಮುಗಿಸಿ, “ಕೆಲಸ ಸಿಕ್ಕಿಲ್ವಾ, ಕೆಲಸ ಸಿಕ್ಕಿಲ್ವಾ ‘ ಅನ್ನೋ ನೆರೆಹೊರೆಯವರ ಪ್ರಶ್ನೆ ರೇಜಿಗೆ ಹುಟ್ಟಿಸೋ ಮುನ್ನ ಕೆಲಸ ಸಿಕ್ಕಿಬಿಟ್ಟಿತ್ತು. ಹಿತ-ಮಿತ ಕೆಲಸ, ಪಿಜಿಗೆ, ಬಸ್‌ ಚಾರ್ಜ್‌ಗೆ, ಮನೆಗೆ ಒಂದಿಷ್ಟು ಕಳುಹಿಸಲು ಸಾಕಾಗುವಷ್ಟು ಸಂಬಳ. ಎಲ್ಲವೂ ಚೆನ್ನಾಗಿಯೇ ಇತ್ತು. ಒಡನಾಡಿಗಳೇ ಇಲ್ಲದಿದ್ದರೂ ಮಂಗಳೂರು ಆಪ್ತವಾಗಿತ್ತು. ಮನೆಯಿಂದ ಹೊರಬಂದು ಒಂಟಿಯಾಗಿ ಬದುಕಲು ಕಳುಹಿಸಿಕೊಟ್ಟಿತ್ತು. ಆದ್ರೆ ಬದುಕಲ್ಲಿ ಎಲ್ಲವೂ ನಾವಂದುಕೊಂಡಂತೆ ಇರುವುದಿಲ್ಲ ಅಲ್ವಾ?

ಅನಿರೀಕ್ಷಿತ ಅನಾರೋಗ್ಯ ಕೆಲಸ ಬಿಟ್ಟು ಮರಳಿ ಮನೆ ಸೇರುವಂತೆ ಮಾಡಿತ್ತು. ಐದಾರು ತಿಂಗಳ ಚಿಕಿತ್ಸೆಯ ಬಳಿಕ ಮತ್ತೆ ಉದ್ಯೋಗ ನೀಡಿದ್ದು ಮಹಾನಗರ. ಹುಟ್ಟೂರನ್ನು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರೂ ಬೇರೆ ಆಯ್ಕೆಯೇ ಇಲ್ಲ. ಹಾಗೆ ಮಹಾನಗರಕ್ಕೆ ಕಾಲಿಟ್ಟು, ಎರಡು ವರ್ಷ ಪಿಜಿಯಲ್ಲೇ ಇದ್ದು, ಹೊಸ ಹೊಸ ಅವಕಾಶಗಳನ್ನು ಹುಡುಕಿ ಒಂದು ಬಿಹೆಚ್‌ಕೆ ಮನೆ ಸೇರೋ ಹೊತ್ತಿಗೆ ಬದುಕಲ್ಲಿ ಸಾಕಷ್ಟು ಬದಲಾವಣೆ. ದಿನವಿಡೀ ದುಡಿಮೆ, ಹೊಸ ಹೊಸ ತಲೆನೋವು, ವೀಕೆಂಡ್‌ನ‌ಲ್ಲೊಮ್ಮೆ ಫ್ರೆಂಡ್ಸ್‌ ಜತೆ ಜಯನಗರ, ಮಲ್ಲೇಶ್ವರಂ, ಮಾಲ್‌, ಹೊಟೇಲ್‌, ಸಿನಿಮಾ… ಎಲ್ಲವೂ ಚೆನ್ನಾಗಿಯೇ ಇದೆ. ಮನಸ್ಸಿಗೆ ಖುಷಿ ಕೊಡುವುದಿಲ್ಲ ಅಷ್ಟೇ. ಸಂಬಳದ ಜತೆಗೇ ಹೆಚ್ಚಾದ ಸಮಸ್ಯೆ, ಮಾತು ಮರೆತು ಮರೀಚಿಕೆಯಾದ ನೆಮ್ಮದಿ ಮತ್ತೆ ಮತ್ತೆ ನಿಟ್ಟುಸಿರು ಹೊರಹಾಕುವಂತೆ ಮಾಡುತ್ತದೆ. ಮಳೆ ಬಿದ್ದಾಗ ಹಬ್ಬುವ ಪರಿಮಳ, ಜೊಮ್ಯಾಟೋದಲ್ಲಿ 40 ರೂ. ತೋರಿಸುವ ನೀರುದೋಸೆ, ಸಿಗ್ನಲ್‌ನಲ್ಲಿ ಬಸ್‌ ನಿಂತಾಗ ಪಾಸ್‌ ಆಗುವ ಊರಿನ ಬಸ್ಸುಗಳು ಊರನ್ನು ಕಣ್ಮುಂದೆ ತಂದು ನಿಲ್ಲಿಸಿ ಬಿಡುತ್ತದೆ.

ಹಬ್ಬಕ್ಕೆ ಊರಿಗೆ ಹೊರಡುವ ಎಂದರೆ ರಜೆಗಳೂ ಇಲ್ಲ. ಊರಿಗೆ ಹೋಗುವುದೇ ಒಂದು ಹಬ್ಬ. ಊರಿಗೆ ಹೋಗೋ ವಾರದ ಮೊದಲಿಂದ ಕೆಲಸದಲ್ಲಿ ಇನ್ನಿಲ್ಲದ ಉತ್ಸಾಹ. ಬಾಸ್‌ನ ವಾಚಾಮಗೋಚರ ಬೈಗುಳ ಸಹ ಬೇಸರ ತರಿಸುವುದಿಲ್ಲ. ಊರಲ್ಲಿದ್ದಷ್ಟೂ ದಿನವೂ ಇಷ್ಟು ದಿನ ಉಪವಾಸ ಬಿದ್ದವರಂತೆ ತಿಂದು, ಬಾಯ್ತುಂಬಾ ಹರಟಿ ಬಸ್‌ ಹತ್ತಿದಾಗ, ಏಳು ವರುಷದ ಹಿಂದೆ ಮೊದಲ ಬಾರಿ ಊರು ಬಿಟ್ಟು ಬಂದಷ್ಟೇ ಅಳು. ವ್ಯತ್ಯಾಸ ಇಷ್ಟೇ. ಆಗ ಅಳು ಬರುತ್ತಿತ್ತು. ಈಗ ಎಲ್ಲವನ್ನೂ ಅದುಮಿಟ್ಟು ನಗಲು ಗೊತ್ತಿದೆ. ಅಪ್ಪ-ಅಮ್ಮ ಕಣ್ತುಂಬಿಕೊಂಡರೂ ಶೂನ್ಯದಿಂದ ತೊಡಗಿ ಈ ಮಟ್ಟಕ್ಕೆ ಬೆಳೆದಿರುವ ಮಗಳ ಬಗ್ಗೆ ಅವರಿಗೆ ಹೆಮ್ಮೆಯಿದೆ, ಖುಷಿಯಿದೆ ಎಂಬುದು ಗೊತ್ತಿದೆ. ಅವರ ಕಣ್ಣುಗಳಲ್ಲಿ ಕಾಣುವ ಆ ಖುಷಿಗಾಗಿಯೇ ಮಹಾನಗರ ಬೇಕಿದೆ. “ಟಿಕೆಟ್‌’ “ಟಿಕೆಟ್‌’ ಎಂದು ಕಂಡಕ್ಟರ್‌ ಮಾತಿಗೆ ಅನಿತಾಳ ಯೋಚನಾ ಲಹರಿಗೆ ಬ್ರೇಕ್‌ ಬಿತ್ತು.

ಬೆಂಗಳೂರಲ್ಲಿ ಬದುಕು ಆರಂಭಿಸಿ ಬರೋಬ್ಬರಿ 7 ವರುಷಗಳೇ ಕಳೆದು ಹೋಗಿದೆ. ಆರಂಭದ ದಿನಗಳಲ್ಲಿ ಹಣವಿಲ್ಲದೆ ತಿನ್ನೋಕು ಇಲ್ಲದೆ ಒದ್ದಾಡಿದ್ದೆ, ಎಷ್ಟೋ ದಿನ ಉಪವಾಸವಿದ್ದು ನೀರು ಕುಡಿದು ಮಲಗಿದ್ದೆ ಅನ್ನೋ ಕಥೆಯೆಲ್ಲ ಇಲ್ಲದಿದ್ದರೂ ಈ ಅಪರಿಚಿತ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಟ್ಟಿದ್ದಂತೂ ನಿಜ. ಅಡ್ರೆಸ್‌ ಗೊತ್ತಿಲ್ಲದ ಜಾಗಗಳಲ್ಲಿ ಓಡಾಡಿ, ಹೊಸ ಹೊಸ ಕೆಲಸಗಳಿಗಾಗಿ ಹುಡುಕಾಡಿ, ಅವರಿಷ್ಟದಂತೆ ಬಣ್ಣದ ಮಾತನಾಡಲು ಬಾರದೆ ಸೋತಿದ್ದು ಅದೆಷ್ಟೋ ಬಾರಿ. ಚೆನ್ನಾಗಿ ಮಾತನಾಡಿದವರನ್ನೇ ಆಪ್ತರೆಂದು ನಂಬಿ, ಹಣಕ್ಕಾಗಿ ಸಮಸ್ಯೆ ಬಂದಾಗ ಯಾರಲ್ಲೂ ಹೇಳಲಾಗದೆ ಒದ್ದಾಡಿ, ನೆರವು ನೀಡಿ ಅದನ್ನೇ ಬಳಸಿಕೊಂಡು ಇನ್ಹೆàಗೋ ವರ್ತಿಸುವವರಿಂದ ದೂರ ನಿಂತು ಸ್ವಪ್ರಯತ್ನದಿಂದಲೇ ಬದುಕು ಕಟ್ಟಿಕೊಂಡಿದ್ದಾಗಿದೆ.

ಅಪರಿಚಿತರಾಗಿದ್ದ ಸಂಬಂಧಿಕರೆಲ್ಲ ಈಗ ಪರಿಚಿತರಾಗಿದ್ದಾರೆ. ಹೊಟ್ಟೆಕಿಚ್ಚಿನಿಂದ ಒದ್ದಾಡುತ್ತಿದ್ದರೂ ಆಪ್ತತೆಯ ನಾಟಕವಾಡುತ್ತಾರೆ. ಕಾಲಕಸವಾಗಿ ಕಾಣುತ್ತಿದ್ದ ಅಪ್ಪ-ಅಮ್ಮನಿಗೆ ಗೌರವ ನೀಡಲು ಕಲಿತುಕೊಂಡಿದ್ದಾರೆ. ಅಪ್ಪ-ಅಮ್ಮ ಅವರೆಲ್ಲರ ಮುಂದೆ ತಲೆಯೆತ್ತಿ ನಡೆಯುತ್ತಾರೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು. ಬೆಂಗಳೂರು ಬದುಕು ಕಲಿಸಿದೆ. ಸೋತು ಬಿಕ್ಕಳಿಸಿ ಅಳುತ್ತಿದ್ದಾಗ ಬದುಕು ನೀಡಿದೆ. ಹಲವು ಬಾರಿ ಎಡವಿ ಬಿದ್ದಾಗಲೂ ದೃಢವಾಗಿ ಎದ್ದು ನಿಂತು ನಡೆಯುವುದನ್ನು ಕಲಿಸಿಕೊಟ್ಟಿದೆ.

ಹೀಗಾಗಿಯೇ ಈ ಊರು ನನ್ನದಲ್ಲ ಎಂದು ಕಿರುಚಿ ಹೇಳಿದರೂ ನನ್ನದೆಂಬ ಆಪ್ತತೆ ಬರಸೆಳೆದುಕೊಳ್ಳುತ್ತದೆ. ಅಷ್ಟರಲ್ಲೇ ಮೊಬೈಲ್‌ ರಿಂಗುಣಿಸಿತು. ಅಮ್ಮಾ ಕಾಲಿಂಗ್‌! ವಿಷಯ ಇರಲಿ, ಇಲ್ಲದಿರಲಿ, ದಿನಕ್ಕೆ ಹತ್ತು ಸಾರಿ ಕಾಲ್‌ ಮಾಡ್ತಾರೆ. ಸಂಬಂಧಿಕರ ಮದುವೆ, ಅಕ್ಕಪಕ್ಕದ ಮನೆಯ ವಿಷಯ, ಊರಿನ ಜಾತ್ರೆ ಎಲ್ಲ ಸುದ್ದಿ ತಪ್ಪದೇ ರವಾನೆಯಾಗುತ್ತದೆ. ಈ ಬಾರಿ ಅಮ್ಮ ನೀಡಿದ್ದು, ಮನೆ ಮಂದಿಗೆಲ್ಲ ಕುಣಿದು ಕುಪ್ಪಳಿಸುವಷ್ಟು ಖುಷಿ ನೀಡೋ ವಿಷಯ. ಕಳೆದ ವಾರವಷ್ಟೇ ನೋಡಿದ್ದ ಪ್ರಪೋಸಲ್‌ ಓಕೆ ಆಗಿದೆ. ಇನ್ನೇನು ಎಂಗೇಜ್‌ಮೆಂಟ್‌ ಮಾಡೋದೆ ಅಂತ. ಅಷ್ಟರಲ್ಲಿ ಅಲ್ಲೇನೋ ಗದ್ದಲ. ಅಮ್ಮ ಕಾಲ್‌ ಕಟ್‌ ಮಾಡಿಟ್ಟರು. ಲಾಸ್ಟ್‌ ವೀಕ್‌ ಬಂದ ಪ್ರಪೋಸಲ್‌ ಅಂದ್ರೆ… ಹುಡುಗ ಬೆಂಗಳೂರಿನವನೇ! ಅಂದರೆ, ಮುಂದಿನ ಬದುಕು ಸಹ ಇಲ್ಲಿಯೇ ಕಂಟಿನ್ಯೂ! ಮರಳಿ ಊರಿನತ್ತ ಪಯಣ ದೂರದ ಮಾತು ಅನ್ನೋದು ಸ್ಪಷ್ಟ.

“ಶ್ರೀನಗರ’ ಅನ್ನೋ ಕಂಡೆಕ್ಟರ್‌ ಕೂಗಿಗೆ ಎಚ್ಚೆತ್ತ ಅನಿತಾ ಕಾಲ್‌ ಕಟ್‌ ಮಾಡಿ ಟಿಕೆಟ್‌ ಕಂಡಕ್ಟರ್‌ ಮುಂದೆ ಚಾಚಿದಳು. ಆತ ಅನ್ಯಗ್ರಹ ಜೀವಿಯಂತೆ ಒಮ್ಮೆ ಕೆಕ್ಕರಿಸಿ ನೋಡಿ ತನ್ನ ಬ್ಯಾಗ್‌ನಲ್ಲಿ ಹುಡುಕಾಡಿದಂತೆ ಮಾಡಿ ಬಾಕಿ 1 ರೂಪಾಯಿಯನ್ನು ಕೈಯಲ್ಲಿಟ್ಟ. ನೀವೇನೋ ಅಕ್ಷಮ್ಯ ಅಪರಾಧ ಮಾಡಿದ್ರಿ ಅನ್ನುವಂತಿತ್ತು ಮುಖಭಾವ. ಫ‌ುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಲೇ, ಸೊಪ್ಪು ತೆಗೆದುಕೊಂಡು ರಾತ್ರಿಗೆ ಸೊಪ್ಪು ಸಾರು ಮಾಡಿದರಾಯಿತೆಂದು ಕೊಂಡಳು ಅನಿತಾ. “ರೊಂಯ್‌’ ಎಂದು ರಸ್ತೆಯಲ್ಲಿ ಸೌಂಡ್‌ ಮಾಡುತ್ತ ಸಾಗುವ ವಾಹನಗಳು ತಲೆನೋವು ತರುತ್ತಿತ್ತು.

ಊರಿಗೆ ಮರಳುವ ಕನಸು ನಿನ್ನೆಮೊನ್ನೆಯದಲ್ಲ. ಬೆಂಗಳೂರಿಗೆ ಬಂದ ಮೊದಲ ದಿನವೇ, ಅಪರಿಚಿತ ನಗರ ಗುಮ್ಮನಂತೆ ಕಾಡಿದೆ. ಸಮಸ್ಯೆಗಳ ಮಧ್ಯೆ “ಊರು ಬಾ’ ಎಂದು ಆತ್ಮೀಯತೆಯಿಂದ ಕೂಗಿದಂತೆ ಭಾಸವಾಗಿದೆ. ಮತ್ತೆ ಹುಟ್ಟಿ ಬೆಳೆದ ಹಸಿರು ಹಸಿರಿನ ಊರಿನಲ್ಲೇ ಬದುಕು ಕಳೆಯಬೇಕು ಅನ್ನೋ ಕನಸು ಕಾಡಿದೆ. ಆದರೆ, ಬೆಂಗಳೂರು ಬದುಕು ಕೊಟ್ಟಿದೆ. ಬಿಕ್ಕಳಿಸಿ ಅತ್ತಾಗ ಬರಸೆಳೆದು ಅಪ್ಪಿ ಸಾಂತ್ವನ ನೀಡಿದೆ. “ಎಷ್ಟೊಂದು ಜನ… ಇಲ್ಲಿ ಯಾರು ನಮ್ಮೊರು… ಎಷ್ಟೊಂದು ಮನೆ ಇಲ್ಲಿ ಎಲ್ಲಿ ನಮ್ಮನೆ’ ಅಂತ ಮನಸ್ಸು ನೋವಿನಿಂದ ಚೀರುತ್ತಿದ್ದಾಗಲೆಲ್ಲ ಸಾಂತ್ವನ ಹೇಳಿ ಎದೆಗವಚಿಕೊಂಡಿದೆ. ಹುಟ್ಟೂರು ಬದುಕು ಕೊಟ್ಟರೆ ಮಹಾನಗರ ಬದುಕುವ ರೀತಿ ಕಲಿಸಿಕೊಟ್ಟಿದೆ.

ಅಮ್ಮನಿಗೆ ಆ ಹುಡುಗ ಬೇಡ ಅಂತ ಹೇಳಿಬಿಡಲಾ, ಮನಸ್ಸಲ್ಲೇ ಯೋಚಿಸಿದಳು ಅನಿತಾ. ಅಮ್ಮ ಏನಿಲ್ಲ ಬಾಯ್ತುಂಬಾ ಬೈದು ಸುಮ್ಮನಾಗಿ ಬಿಡುತ್ತಾಳೆೆ. ಆದ್ರೆ, ಅಪ್ಪ ಮನಸ್ಸಲ್ಲೇ ನೊಂದುಕೊಳ್ಳುತ್ತಾರೆ. ಹಾಗಂತ ಮತ್ತೆ ಇಷ್ಟವಿಲ್ಲದ ಬದುಕಿನ ದಾರಿಯಲ್ಲೇ ಮುಂದುವರಿಯಲಾ… ಗೊಂದಲದಲ್ಲೇ ಹೆಜ್ಜೆ ಮುಂದೆಯಿಡುತ್ತಿದ್ದಳು ಅನಿತಾ. ತರಕಾರಿ ಮಾರಾಟ ಮಾಡುವ ರಸ್ತೆಯ ಗದ್ದಲ ಇನ್ನಷ್ಟು ಕಿರಿಕಿರಿಯನ್ನುಂಟು ಮಾಡಿತು. ಹರಿವೆ ಸೊಪ್ಪು, ಪಾಲಕ್‌ ಸೊಪ್ಪು ಖರೀದಿಸಿ ಬ್ಯಾಗ್‌ಗಿಳಿಸಿದಳು. ಏನಾದರೂ ಸರಿ, ಊರಿನ ಹುಡುಗನನ್ನೇ ನೋಡಿ ಎಂದು ಬಿಡುವುದು ಎಂದು ಮನಸ್ಸಲ್ಲೇ ಚಿಂತಿಸಿದಳು. ಆದರೆ, ಅಂದುಕೊಂಡಷ್ಟು ಸುಲಭವಲ್ಲ. ಹಾಗೆ ಹೇಳಿ ಎಲ್ಲರ ಮನ ನೋಯಿಸುವುದು ಅನ್ನೋದು ಗೊತ್ತಿರುವ ವಿಷಯ.

ಮನೆಗೆ ಹೋಗೋ ದಾರಿಯ ಬಳಿ ಬಂದರೆ ರಿಪೇರಿ ನೆಪದಲ್ಲಿ ರೋಡ್‌ ಫ‌ುಲ್‌ ಬ್ಲಾಕ್‌ ಮಾಡಿದ್ದರು, ವಾಹನಗಳು ಅಲ್ಲಿಯವರೆಗೆ ಬಂದು ಟರ್ನ್ ಮಾಡಿ ವಾಪಾಸ್‌ ಹೋಗುತ್ತಿದ್ದವು. ಅಲ್ಲೇ ಇದ್ದ ನಂದಿನಿ ಪಾರ್ಲರ್‌ನಿಂದ ಮೊಸರು ಪ್ಯಾಕೆಟ್‌ ತೆಗೆದುಕೊಳ್ಳುತ್ತಿರುವಾಗಲೇ ಅಮ್ಮನ ಕರೆ. “ಬರುವ 12ರಂದು ನಿಶ್ಚಿತಾರ್ಥ. ಮೊದಲೇ ರಜೆ ಕೇಳಿಬಿಡು. ಅಷ್ಟೇ’
ಕಾಲ್‌ ಕಟ್‌ ಆಯ್ತು. ಅನಿತಾ ರಿಪೇರಿಯಾಗುತ್ತಿದ್ದ ಹಳೆ ರಸ್ತೆ ಬಿಟ್ಟು, ಹೊಸ ರಸ್ತೆಯಲ್ಲಿ ನಡೆಯಲು ಶುರು ಮಾಡಿದಳು.

ವಿನುತಾ ಪೆರ್ಲ

Advertisement

Udayavani is now on Telegram. Click here to join our channel and stay updated with the latest news.

Next