Advertisement

ಸೇಲಂನ “ರೋಹಿಣಿ’ನಕ್ಷತ್ರ

06:25 AM Nov 29, 2017 | Harsha Rao |

ಜಿಲ್ಲಾಧಿಕಾರಿಯಾದರೆ ಸಾವಿರಾರು ಮಂದಿ ಬಡವರಿಗೆ, ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ಹಲವು ರೀತಿಯಲ್ಲಿ ನೆರವಾಗಬಹುದು ಎಂಬುದು ಪುಟ್ಟ ಬಾಲಕಿ ರೋಹಿಣಿಗೆ ಗೊತ್ತಾಯ್ತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಆಕೆ, ಎರಡು ದಶಕಗಳ ನಂತರ ಜಿಲ್ಲಾಧಿಕಾರಿ ಆಗಿಯೇಬಿಟ್ಟರು!

Advertisement

ಆಕೆಯ ತಂದೆ ಸಣ್ಣ ರೈತರು. ಸರ್ಕಾರದಿಂದ ರೈತರಿಗೆ ಬರಬೇಕಾಗಿದ್ದ ಪರಿಹಾರಧನವನ್ನು ಪಡೆಯಲು ಅವರು ಪರದಾಡುತ್ತಿದ್ದರು. ಆಗ ಮಗಳಿಗೆ ಒಂಬತ್ತು ವರ್ಷ ವಯಸ್ಸು. ಆ ಪುಟ್ಟ ಹುಡುಗಿ ಅಪ್ಪನ ಓಡಾಟ, ಪರದಾಟ, ಪೇಚಾಟಗಳನ್ನೆಲ್ಲ ಗಮನಿಸುತ್ತಿದ್ದಳು. ಮಹಾರಾಷ್ಟ್ರದ ಸೋಲಾಪುರದ ಹಲವಾರು ರೈತರು ಆಕೆಯ ತಂದೆಯಂತೆಯೇ, ಯಾವುದೋ ಡಾಕ್ಯುಮೆಂಟ್‌ ಹಿಡಿದು ಸರ್ಕಾರಿ ಕಚೇರಿಗಳನ್ನು ಅಲೆಯುತ್ತಿದ್ದರು. ಒಂದು ದಿನ ಕುತೂಹಲ ತಡೆಯಲಾರದೆ ಆಕೆ ಅಪ್ಪನನ್ನು ಕೇಳಿದಳು- “ಅಪ್ಪಾ, ಸರ್ಕಾರದಿಂದ ರೈತರಿಗೆ ಹಣ ಬಂದಿದೆಯಲ್ಲ, ಅದನ್ನು ನಿಮಗೆ ಕೊಡಿಸಬೇಕಾದವರು ಯಾರು?’ ಆಗ ಮಗಳನ್ನು ಹತ್ತಿರ ಕರೆದು ಅಪ್ಪ ಹೇಳಿದ್ದು, “ಅದನ್ನು ಕೊಡಬೇಕಾದೋರು ಜಿಲ್ಲಾಧಿಕಾರಿಗಳು’ ಅಂತ.

ಅಷ್ಟೇ, 23 ವರ್ಷಗಳ ನಂತರ ಆ ಹುಡುಗಿ, ಅಪ್ಪನ ಮುಂದೆ ನಿಂತು ಹೇಳಿದಳು- “ಅಪ್ಪಾ, ನಾನೀಗ ಜಿಲ್ಲಾಧಿಕಾರಿಯಾಗಿದ್ದೇನೆ’. 

   ಹೀಗೆ ಅಪ್ಪ ಹೇಳಿದ ಮಾತಿನಿಂದ ಛಲ ಮೂಡಿಸಿಕೊಂಡು, ಐ.ಎ.ಎಸ್‌ ಅಧಿಕಾರಿಯಾದವರು ರೋಹಿಣಿ ಭಾಜಿಭಕರೆ. ಅಷ್ಟೆ ಅಲ್ಲ, ತಮಿಳುನಾಡಿನ ಸೇಲಂ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಯೂ ಅವರದ್ದೇ. 1790ರಿಂದ ಇಲ್ಲಿಯವರೆಗೆ 170 ಪುರುಷ ಕಲೆಕ್ಟರ್‌ಗಳನ್ನು, ಜಿಲ್ಲಾಧಿಕಾರಿಗಳನ್ನು  ಕಂಡ ಸೇಲಂ ಜಿಲ್ಲೆಗೆ ರೋಹಿಣಿಯವರೇ ಮೊದಲ ಮಹಿಳಾ ಜಿಲ್ಲಾಧಿಕಾರಿ. 

  ರೋಹಿಣಿಯವರು ನಡೆದ ಹಾದಿ ಸುಲಭದ್ದೇನೂ ಆಗಿರಲಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿ, ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಮುಗಿಸಿದ ರೋಹಿಣಿ ಅವರು ಪ್ರೈವೇಟ್‌ ಕೋಚಿಂಗ್‌ ತೆಗೆದುಕೊಳ್ಳದೆಯೇ ಸಿವಿಲ್‌ ಸರ್ವಿಸ್‌ ಪರೀಕ್ಷೆಗಳನ್ನು ಪಾಸ್‌ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗುವುದಕ್ಕೂ ಮೊದಲು ಹೆಚ್ಚುವರಿ ಕಲೆಕ್ಟರ್‌ (ಅಭಿವೃದ್ಧಿ ಇಲಾಖೆ), ಜಿಲ್ಲಾ ಗ್ರಾಮೀಣಾಭಿವೃದ್ಧಿ ಪ್ರಾಧಿಕಾರದ ಪ್ರಾಜೆಕ್ಟ್ ಆಫೀಸರ್‌ ಆಗಿ ಮಧುರೈ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Advertisement

   “ಬಾಲ್ಯದಲ್ಲಿ ನನ್ನ ತಂದೆ ಪಡುತ್ತಿದ್ದ ಕಷ್ಟಗಳೇ ನನ್ನನ್ನು ಸರ್ಕಾರಿ ಅಧಿಕಾರಿಯಾಗಲು ಪ್ರೇರೇಪಿಸಿದ್ದು. ಅಪ್ಪನಿಗೆ ನಾನು ಜಿಲ್ಲಾಧಿಕಾರಿಯಾದ ವಿಷಯ ಹೇಳಿದಾಗ ಅವರು ಹೇಳಿದ್ದು, “ಜನಸೇವೆಯೇ ನಿನ್ನ ಮೊದಲ ಆದ್ಯತೆಯಾಗಲಿ’ ಎಂದು. ನಾನು ಸರ್ಕಾರಿ ಶಾಲೆಗಳಲ್ಲಿ ಓದಿದ್ದರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿವಿದೆ. ಅಲ್ಲಿ ನುರಿತ ಶಿಕ್ಷಕರಿದ್ದಾರೆ, ಆದರೆ ಮೂಲಸೌಕರ್ಯಗಳ ಕೊರತೆಯಿದೆ. ಸೇಲಂನ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇನೆ. ಅಷ್ಟೇ ಅಲ್ಲದೆ ಗ್ರಾಮೀಣ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಕೂಡ ಹೆಚ್ಚಿನ ಗಮನ ಹರಿಸಬೇಕಿದೆ’ ಎಂದು ತಮ್ಮ ಆಡಳಿತ ಸೂತ್ರಗಳನ್ನು ಬಿಚ್ಚಿಡುತ್ತಾರವರು.

 ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಆಕೆ ಸಮರ್ಥಳು ಎಂದು ಜನರಿಗೆ ಅರಿವಾಗಬೇಕು ಎನ್ನುತ್ತಾರೆ ರೋಹಿಣಿ. ಮಧುರೈ ಶೈಲಿಯ ತಮಿಳನ್ನು ಸ್ಪಷ್ಟವಾಗಿ, ತಪ್ಪಿಲ್ಲದೆ ಮಾತನಾಡಿ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. 32 ವರ್ಷದ ರೋಹಿಣಿಯವರು, ಐ.ಪಿ.ಎಸ್‌ ಅಧಿಕಾರಿ ವಿಜಯೇಂದ್ರ ಬಿದರಿ ಅವರನ್ನು ಮದುವೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next