Advertisement

ಕೋವಿಡ್ ಹೊಡೆತ |ಸದ್ದು ಮಾಡದ ಕೊಂಬು ಕಹಳೆ ವಾದ್ಯ

07:28 PM Sep 19, 2021 | Team Udayavani |

ವರದಿ: ಮಹಾದೇವ ಪೂಜೇರಿ 

Advertisement

ಚಿಕ್ಕೋಡಿ: ರಾಜ-ಮಹಾರಾಜರ ಆಸ್ಥಾನದಲ್ಲಿ ಯುದ್ಧ ಆರಂಭ ಮತ್ತು ಮುಕ್ತಾಯ ಸಂದರ್ಭದಲ್ಲಿ ಹಾಗೂ ಇಂದಿಗೂ ಧಾರ್ಮಿಕ, ಸಾಂಸ್ಕೃತಿಕ, ಜಾತ್ರೆ, ಉತ್ಸವದಲ್ಲಿ ಬಳಕೆ ಮಾಡುವ ಕೊಂಬು ಕಹಳೆ ವಾದ್ಯದ ಸದ್ದು ಕೋವಿಡ್‌ದಲ್ಲಿ ನಿಂತು ಹೋಗಿದೆ.

ಚಿಕ್ಕೋಡಿ ನಗರದ ಝಾರಿ ಗಲ್ಲಿಯ ರಿಯಾಜ್‌ ಕಲೈಗಾರ ಕುಟುಂಬ ಶತಮಾನದ ಅಜ್ಜ-ಮುತ್ತಜ್ಜನ ಕಾಲದ ಪರಂಪರೆಯಿಂದ ಬಂದ ಕೊಂಬು ಕಹಳೆ ಜನಪದ ವಾದ್ಯ ತಯಾರು ಮಾಡುವ ಕುಲಕಸುಬಾಗಿಸಿಕೊಂಡು ಇಂದಿಗೂ ಮುಂದುವರೆಸಿಕೊಂಡು ಬಂದಿದೆ. ಆದರೆ ಕಳೆದ ಎರಡು ವರ್ಷಗಳಿಂದ ಜಗತ್ತನ್ನು ತಲ್ಲನಗೊಳಿಸಿರುವ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಬೇಡಿಕೆ ನಿಂತುಹೋಗಿದೆ.

ಹಿತ್ತಾಳೆ, ತಾಮ್ರ, ಪಂಚಧಾತುವಿನ ಮಿಶ್ರಣದಿಂದ ತಯಾರಿಸಿದ ಈ ಜನಪದ ವಾದ್ಯವೊಂದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುತ್ತಿತ್ತು. ಜನರ ಬೇಡಿಕೆ ಅನುಗುಣ ಹಗಲು ರಾತ್ರಿ ಎನ್ನದೇ ಕೊಂಬು ಕಹಳೆ ತಯಾರಿಸಿ ನೆರೆಯ ಮಹಾರಾಷ್ಟ್ರದ ಮುಂಬೈ, ಪುಣೆ, ಪಂಢರಪುರ, ಇಸ್ಲಾಂಪೂರ, ಮೀರಜ್‌, ಕೊಲ್ಲಾಪೂರ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಹಳೆಗಳನ್ನು ಸರಬರಾಜು ಮಾಡುತ್ತಿದ್ದೇವು, ಆದರೆ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಕಹಳೆ ಬೇಡಿಕೆ ಅರ್ಧಕ್ಕಿಂತ ಕಡಿಮೆಯಾಗಿದೆ. ಅಂತಾರಾಜ್ಯ ಹೆದ್ದಾರಿ ಬಂದ್‌ ಇರುವುದರಿಂದ ಖರೀದಿಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ ಎನ್ನುತ್ತಾರೆ ರಿಯಾಜ್‌ ಕಲೈಗಾರ.

ಶುಭ ಸಂಕೇತ ಕೊಂಬು ಕಹಳೆ ವಾದ್ಯ: ಪಾಶ್ಚಾತ್ಯ ವ್ಯಾಮೋಹದಿಂದ ಬದುಕು ಯಾಂತ್ರಿಕವಾಗುತ್ತಿದೆ. ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಕಹಳೆ ಎಂಬ ಜನಪದ ವಾದ್ಯವು ಪೂರ್ವಜರು ಬಿಟ್ಟು ಹೋದ ಅಪರೂಪದ ಕಲೆಗಳಲ್ಲಿ ಒಂದು. ರಾಜಮಹಾರಾಜರ ಆಸ್ಥಾನಗಳಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದ ಕಹಳೆ, ಕೋಟೆ ಕಾಯುವ ಭಂಟರ ಕೈಯಲ್ಲಿರುತ್ತಿತ್ತು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಜಾತ್ರೆ-ಉತ್ಸವ ಮುಂತಾದ ಮಂಗಳ ಕಾರ್ಯಕ್ರಮಗಳಲ್ಲಿ ಈಗಲೂ ಈ ವಾದ್ಯದ ಬಳಕೆಯಾಗುತ್ತಿದೆ.

Advertisement

ಬಳುವಳಿಯಾಗಿ ಬಂದ್‌ ಕಸುಬು: ಚಿಕ್ಕೋಡಿಯ ಝಾರಿಗಲ್ಲಿಯ ನಿವಾಸಿ ಅಬ್ದುಲ್‌ ಕರೀಂ ಹುಸೇನಸಾಬ್‌ ಕಲೈಗಾರ ಕಹಳೆ ತಯಾರಿಕೆ ಕಲೆಯನ್ನು ಆರಂಭಿಸಿ, ಕುಟುಂಬಕ್ಕೆ ಬಳುವಳಿಯಾಗಿ ನೀಡಿದ್ದಾರೆ. ಈಗಲು  ಕುಟುಂಬದವರು ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಹಿಂದೂ ಧರ್ಮದ ಕಾರ್ಯಕ್ರಮಗಳಲ್ಲೇ ಹೆಚ್ಚಾಗಿ ಬಳಸಲಾಗುವ ಕಹಳೆಯನ್ನು ಮುಸ್ಲಿಂ ಕುಟುಂಬವೊಂದು ಅತ್ಯಂತ ಶ್ರದ್ಧೆಯಿಂದ ತಯಾರಿಸುತ್ತಿರುವುದು ವಿಶೇಷವಾಗಿದೆ.

ಮಕ್ಕಳಿಗೂ ಕಹಳೆ ತಯಾರಿಸುವ ಕಲೆಯನ್ನು ಕಲಿಸುತ್ತಿದ್ದೇವೆ. ಇದರಲ್ಲಿ ಲಾಭನಷ್ಟದ ಪ್ರಶ್ನೆ ಇಲ್ಲ. ಜೀವನ ಸಾಗುತ್ತದೆ, ಸಾಕು. ನಮ್ಮ ಅಜ್ಜ ಮುತ್ತಜ್ಜರ ಕಾಲದಿಂದ ಬೆಳೆದು ಬಂದಿರುವ ಈ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಕಲೈಗಾರ ಕುಟುಂಬ.

ಕರ್ಣಾನಂದ ಸ್ವರ: ಇಂತಹ ಕಹಳೆಯೊಂದನ್ನು ರೂಪಿಸಲು ವಿಶೇಷವಾದ ನಿಪುಣತೆ ಮತ್ತು ಪರಿಶ್ರಮ ಬೇಕು. ಮಾರುದ್ದದ ಕಹಳೆಯ ಹಿಂಬದಿಯ ಕಿರಿದಾದ ತೂತಿನಲ್ಲಿ ದಮ್ಮು ಕಟ್ಟಿ ಉಸಿರು ಬಿಗಿಹಿಡಿದು ಊದಿದರೆ ಕರ್ಣಾನಂದ ಸ್ವರ ಹೊರಹೊಮ್ಮುತ್ತದೆ. ವಿಶೇಷವೆಂದರೆ ಕಹಳೆ ತಯಾರಿಸಲು ಇವರು ಯಾವುದೇ ಯಂತ್ರದ ಬಳಕೆ ಮಾಡಿಕೊಳ್ಳುವುದಿಲ್ಲ. ತಾಮ್ರದ ಹಾಳೆಯನ್ನು ಬೇಕಾದ ಆಕಾರ ಗಾತ್ರಕ್ಕೆ ತಗ್ಗಿಸಿ, ಬಗ್ಗಿಸಿ ಅತ್ಯಾಕರ್ಷಕವಾದ ಕಹಳೆ ತಯಾರಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next